ಮುಂಬಯಿ(ಫೆ.೧೫): ಮರಾಠಿ ಮಣ್ಣಿನಲ್ಲಿ ಅದರಲ್ಲೂ ಮುಂಬಯಿಯಲ್ಲಿ ಮಿಂಚುತ್ತಿರುವ ಪ್ರತಿಭೆಗಳಲ್ಲಿ ನಮ್ಮ ಕರಾವಳಿಯ ಹಲವಾರು ಮಕ್ಕಳು ಕೂಡಾ ಇದ್ದಾರೆ. ಅಂತಹ ಮಕ್ಕಳಲ್ಲಿ ನಮ್ಮ ಕುಲಾಲ ಸಮಾಜದ ಬಹಳಷ್ಟು ಮಕ್ಕಳು ಹಲವಾರು ಪ್ರಶಸ್ತಿಗಳನ್ನು ಪಡೆದು ನಮ್ಮ ಸಮಾಜಕ್ಕೆ ಕೀರ್ತಿ ತರುತ್ತಿದ್ದಾರೆ. ಕರಾಟೆಯಂತಹ ಸ್ವಲ್ಪ ಹೆಚ್ಚಿನ ಶ್ರಮ ವಹಿಸುವಂತಹ ಕ್ರೀಡೆಗಳಲ್ಲಿ ನಮ್ಮ ಸಮಾಜದ ಮಕ್ಕಳು ಸ್ವಲ್ಪ ಕಡಿಮೆ. ಇದಕ್ಕೆ ಅಪವಾದವೆಂಬಂತೆ ಈ ಇಬ್ಬರು ಸಹೋದರರು ಕರಾಟೆಯಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.

ಮುಂಬಯಿಯ ಬೈಕಲಾದ ಆಂಟನಿ ಡಿ’ಸೋಜ ಹೈಸ್ಕೂಲಿನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿರಾಜ್ ವಿ.ಸಾಲ್ಯಾನ್ ಹಾಗೂ 5ನೇ ತರಗತಿಯಲ್ಲಿ ಕಲಿಯುತ್ತಿರುವ ವಿರಲ್ ವಿ.ಸಾಲ್ಯಾನ್ ಜನವರಿ ಕೊನೇಯ ವಾರ ನಡೆದ ಜಿಲ್ಲಾ ಮಟ್ಟದ ಟೆಕ್ವಾಂಡೋ ಕರಾಟೆ ಸ್ಪರ್ದೆಯಲ್ಲಿ ಕ್ರಮವಾಗಿ 13 ಹಾಗೂ 10 ವರ್ಷ ವಯೋವರ್ಗದಲ್ಲಿ ಬಂಗಾರದ ಪದಕ ಪಡೆದು ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ.

ಕಳೆದ ವರ್ಷ 2016 ಆಗಸ್ಟ್ ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕ್ರಮವಾಗಿ 12 ಹಾಗೂ 9 ವಯೋವರ್ಗದಲ್ಲೂ ಬಂಗಾರದ ಪದಕ ಪಡೆದಿದ್ದಾರೆ. ಇವರು ಮೂಲತಃ ಬಂಟ್ವಾಳ ತಾಲೂಕಿನ ವಾಮದಪದವಿನ ವಿಶ್ವನಾಥ ಸಾಲ್ಯಾನ್ ಮತ್ತು ಮಡಂತ್ಯಾರು ನಡಿಬೆಟ್ಟುವಿನ ರತ್ನಾ ದಂಪತಿಯ ಸುಪುತ್ರರು.

ಇಬ್ಬರೂ ಕರಾಟೆ ಅಲ್ಲದೆ ಇತರ ಕ್ರೀಡೆಗಳಲ್ಲಿ ಹಾಗೂ ಕಲಿಕೆಯಲ್ಲೂ ಮುಂದಿದ್ದಾರೆ. ಇವರು ಖ್ಯಾತ ಕರಾಟೆ ಗುರು ಸುನೀಲ್ ಸಾವಂತ್ ಇವರಿಂದ ಕರಾಟೆ ಕಲಿಯುತ್ತಿದ್ದಾರೆ.
ಈ ಮಕ್ಕಳು ಪ್ರತಿಭಾಸಂಪನ್ನರಾಗಿ ನಮ್ಮ ದೇಶಕ್ಕೇ, ಸಮಾಜಕ್ಕೆ ಕೀರ್ತಿ ತರಲಿ ಎಂಬುವುದು `ಕುಲಾಲ್ ವರ್ಲ್ಡ್’ ನ ಶುಭ ಹಾರೈಕೆ.
ಸತೀಶ್. ಎಸ್. ಬಂಗೇರ, ಮುಂಬಯಿ


