ಮಹಾರಾಷ್ಟ್ರವನ್ನು ಕರ್ಮ ಭೂಮಿಯಾಗಿಸಿಕೊಂಡು ನೆಲೆಸಿರುವ ಕನ್ನಡಿಗರ ಮಕ್ಕಳಲ್ಲಿ ಹೆಚ್ಚಿನವರು ಯಾವುದಾದರೊಂದು ಕ್ಷೇತ್ರದಲ್ಲಿ ಪ್ರತಿಭಾ ಸಂಪನ್ನರಾಗಿರುತ್ತಾರೆ. ಅಂತಹ ಮಕ್ಕಳಲ್ಲಿ ಮೀರಾರೋಡ್ ಪೂರ್ವದಲ್ಲಿರುವ ಎಸ್ ಎಸಿಇಎಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಆಶಾ ಸಿ.ಮೂಲ್ಯಕೂಡಾ ಒಬ್ಬಳು. ತನ್ನ ಬಹುಮುಖ ಪ್ರತಿಭೆಯಿಂದ ಹಲವಾರು ಪ್ರಶಸ್ತಿ ಪಡೆದುದಲ್ಲದೆ ಇತ್ತೀಚೆಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದು ಕುಲಾಲರು ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿರುವ ತುಳು- ಕನ್ನಡಿಗರಿಗೆ ಹೆಮ್ಮೆ ತಂದಿದ್ದಾಳೆ.
13ರ ಹರೆಯದ ಆಶಾ ಸಿ.ಮೂಲ್ಯ ಮೂಲತಃ ದೇವಿಪ್ರಸಾದ್ ಮನೆ, ಬೈಲ್ ನಡಿಕಲ, ಗುರುಪುರ,ಕೈಕಂಬದ ಚಂದ್ರಹಾಸ ಮೂಲ್ಯ ಹಾಗೂ ರಸಿಕಾ ಸಿ.ಮೂಲ್ಯ ದಂಪತಿಯ ಎರಡು ಮಕ್ಕಳಲ್ಲಿ ಮೊದಲನೆಯವಳು. ಈಕೆ ತಮ್ಮ ರಿಶಿತ್ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ತನ್ನ 4ನೆಯ ಹರೆಯದಿಂದಲೇ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದಿರುವ ಆಶಾ ಆರಂಭದಿಂದಲೂ ಚಿಣ್ಣರ ಬಿಂಬ, ಮುಂಬೈ ಇದರ ಸದಸ್ಯೆಯಾಗಿದ್ದಾಳೆ.
ಈಕೆ ಭರತನಾಟ್ಯವನ್ನು ಮೀರಾರೋಡ್ ನ ರಾಧಾಕೃಷ್ಣ ನೃತ್ಯ ಅಕಾಡೆಮಿಯಲ್ಲಿ ಗುರು ವಿದುಷಿ ಸುಕನ್ಯಾ ಭಟ್ ರಿಂದ ಕಲಿತು , ಕರ್ನಾಟಕ ಬೋರ್ಡ್ ನ ಜೂನಿಯರ್ ಗ್ರೇಡ್ ನ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ ಹಾಗೂ ಗಂಧರ್ವ ಬೋರ್ಡ್ ನ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾಳೆ.
ಆಶಾಳಿಗೆ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಕೊಡಮಾಡುವ ರಾಜ್ಯ ಪ್ರಶಸ್ತಿಯಾದ “ಅರಳು ಮಲ್ಲಿಗೆ”ಯೂ 2014ರಲ್ಲಿ ಸಂದಿದೆ. ಕುಲಾಲ ಸಂಘ ಮುಂಬೈ ಹಾಗೂ ವಿವಿಧ ಸಂಘ ಸಂಸ್ಥೆಗಳು ಅಲ್ಲದೆ ಧರ್ಮಸ್ಥಳ, ಮಂತ್ರಾಲಯ, ಕೊಲ್ಲೂರು, ಬಪ್ಪನಾಡು, ಉಡುಪಿ,ಪುಣೆ, ಸತಾರ ಮುಂತಾದ ಅನೇಕ ಸ್ಥಳಗಳಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಹಿರಿಮೆ ಈಕೆಯದು. ದೂರದರ್ಶನ ಚಂದನವಾಹಿನಿಯಲ್ಲಿ ಬರುವ “ಮಧುರ ಮಧುರವೀ” ಹಾಗೂ ಕಲರ್ಸ್ ವಾಹಿನಿಯ India’s got talent ಕಾರ್ಯಕ್ರಮದಲ್ಲೂ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಈಕೆ ಭರತನಾಟ್ಯ ಅಲ್ಲದೆ ಯಕ್ಷಗಾನ ಪ್ರವೀಣೆಯೂ ಆಗಿದ್ದಾಳೆ. ಸದಾನಂದ ಶೆಟ್ಟಿ ಕಟೀಲು ಹಾಗೂ ಬಡಗುತಿಟ್ಟಿನ ಶಂಕರ್ ಎಲ್ಲಾರೆಯವರಿಂದ ಯಕ್ಷಗಾನವನ್ನು ಕಲಿಯುತ್ತಿದ್ದಾಳೆ. ಭಜನೆ, ಜಾನಪದ ನೃತ್ಯ , ವೆಸ್ಟರ್ನ್ ಡಾನ್ಸ್ , ಆಟೋಟ ಅಲ್ಲದೆ ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವ ಬಹುಮುಖ ಪ್ರತಿಭೆ. ತನ್ನ ಕಲಾಪ್ರತಿಭೆಗೆ ತನ್ನ ಮಾತಾ-ಪಿತರ ಪ್ರೋತ್ಸಾಹ ,ಪ್ರೀತಿ, ವಾತ್ಸಲ್ಯವೇ ಪ್ರೇರಣೆ ಎನ್ನುತ್ತಾಳೆ ಆಶಾ ಸಿ.ಮೂಲ್ಯ. ತನಗೆ ನಿರಂತರ ಪ್ರೋತ್ಸಾಹ ನೀಡಿ ಸಹಕರಿಸುತ್ತೀರುವ ಅಧ್ಯಾಪಕ ವೃಂದ, ನೃತ್ಯ ಗುರುಗಳನ್ನು ಹಾಗೂ ಸಂಘ ಸಂಸ್ಥೆಗಳನ್ನು ಸದಾ ಸ್ಮರಿಸುತ್ತಳೇ ಆಶಾ ಸಿ. ಮೂಲ್ಯ ಇನ್ನಷ್ಟು ಪ್ರತಿಭಾ ಸಂಪನ್ನಳಾಗಿ ನಾಡಿಗೆ ಕೀರ್ತಿ ತರಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಮ್‘ ನ ಹಾರೈಕೆ.