ಕಾರ್ಕಳ (ಅ.೨೩) : ಇತ್ತೀಚೆಗಷ್ಟೇ ಕಾಪುವಿನ ಅಂಗವಿಕಲ ವ್ಯಕ್ತಿಯೊಬ್ಬರ ಮನೆಗೆ ಬೋರ್ ವೆಲ್ ಹಾಕಿಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದ `ಕುಲಾಲ ಚಾವಡಿ’ ವಾಟ್ಸಪ್ ಗ್ರೂಪಿನ ಸದಸ್ಯರು ಇಂದು ಆರ್ಥಿಕವಾಗಿ ತೀರಾ ಸಂಕಷ್ಟ ಅನುಭವಿಸುತ್ತಿರುವ ಕುಟುಂಬವೊಂದಕ್ಕೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಪತಿಯನ್ನು ಕಳಕೊಂಡು ಪುತ್ರಿಯೊಂದಿಗೆ ಕಷ್ಟದಿಂದ ಜೀವನ ನಡೆಸುತ್ತಿರುವ ಕಾರ್ಕಳ ನೀರೆಬೈಲೂರಿನ ದಿ. ಆನಂದ ಕುಲಾಲರ ಪತ್ನಿ ಪ್ರೇಮಾ ಅವರಿಗೆ ವಾಟ್ಸಪ್ ತಂಡದ ಸದಸ್ಯರು 12,000 ರೂಪಾಯಿ ನೆರವು ನೀಡಿದರು. ಪ್ರೇಮಾ ಅವರ ಪತಿ ಆನಂದ ಅವರು ೩ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ,ಮಂಗಳೂರು ಸಹಿತ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಔಷಧಿಗಾಗಿ ಪ್ರೇಮಾ ಅವರು ತಮ್ಮ ಒಡವೆ ಒತ್ತೆಯಿಟ್ಟು ಹಣ ಹೊಂದಿಸಿದರೂ ಅವರನ್ನು ಉಳಿಸಿಕೊಳ್ಳಲಾಗಿರಲಿಲ್ಲ.
ಇದೀಗ ಬೀಡಿ ಕಟ್ಟಿ ತಮ್ಮ ಸಾಲ ತೀರಿಸುತ್ತಾ ಮಗಳನ್ನುಕಾಲೇಜು ಓದಿಸುತ್ತಿರುವ ಪ್ರೇಮಾ ಅವರಿಗೆ ಕುಲಾಲ್ ಚಾವಡಿ ತಂಡದ ಸದಸ್ಯರು ಸಹಾಯಹಸ್ತ ಚಾಚುವ ಮೂಲಕ ಸಾಮಾಜಿಕ ಕಾಳಜಿ ವ್ಯಕ್ತಪಡಿಸಿದ್ದಾರೆ. ಹಣ ಹಸ್ತಾ೦ತರಿಸುವ ವೇಳೆ ಚಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಪದವು ,ದಿನೇಶ್ ಕುಲಾಲ್ ಅಲೆವೂರು, ಚಂದ್ರಕುಲಾಲ್ ಹೆಬ್ರಿ ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ಇದೇ ತಂಡ ಕಾಪುವಿನ ದಯಾನಂದ ಮೂಲ್ಯರ ಮನೆಗೆ ಬೋರ್ ವೆಲ್ ಹಾಕಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.