ತುಳು ರಂಗಭೂಮಿಗೆ ಬಂಟ್ವಾಳದ ಕೊಡುಗೆ ಅಪಾರ. ಅದೆಷ್ಟೋ ಪ್ರತಿಭಾನ್ವಿತ ಕಲಾವಿದರನ್ನು ರಂಗಭೂಮಿಗೆ ನೀಡಿದ ಕೀರ್ತಿ ಈ ಮಣ್ಣಿಗಿದೆ. ನಟರಾಗಿ, ನಿರ್ದೇಶಕರಾಗಿ, ನಾಟಕರಚನೆಕಾರರಾಗಿ ಮಿಂಚಿದ ಪ್ರತಿಭೆಗಳು ಇಲ್ಲಿದೆ. ಈ ಪೈಕಿ ರಂಗಭೂಮಿಯನ್ನೇ ತಮ್ಮ ಬದುಕಾಗಿ ರೂಪಿಸಿಕೊಂಡು ನಾಟಕ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಈ ಸಹೋದರರು. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಚಲನ ಚಿತ್ರ ಹಾಗೂ ನಾಟಕರಂಗದಲ್ಲಿ ಸಹೋದರರಿಬ್ಬರೂ ಜೊತೆಯಾಗಿ ನಟಿಸುತ್ತಿರುವುದು ವಿಶೇಷ.
………………………………………………………………………………………………………………….
ಬಂಟ್ವಾಳ: `ಸಿರಿಧರೆ…. ಪಾಯಿಸನ್ ಸಿರಿಧರೆ… ಕಕ್ಕೊಡಾ… ಮಸ್ತ್ ಸಮಯಾಂಡ್ ಕಕ್ಕಂದೆ..’
ತೆಲಿಕೆದ ಬೊಳ್ಳಿ ಚಿತ್ರದ ಫೇಮಸ್ ಡೈಲಾಗ್. ತನ್ನ ಕುಹಕ ನಗೆಯೊಂದಿಗೆ ಎಂಟ್ರಿ ಕೊಟ್ಟು ಪ್ರೇಕ್ಷಕರಿಂದ ಚಪ್ಪಾಳೆ, ಸಿಳ್ಳೆಗಳ ಸುರಿಮಳೆಯೊಂದಿಗೆ ಚೊಚ್ಚಲ ಚಿತ್ರದಲ್ಲಿಯೇ ವಿಲನ್ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೆ ತನ್ನ ಅದ್ಭುತ ನಟನೆಗೆ ಮೊದಲ ಚಿತ್ರಕ್ಕೆ ಉತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡ ಚಿತ್ರನಟ ಸುರೇಶ್ ಕುಲಾಲ್ ಬಿ.ಸಿ.ರೋಡು.
ಎತ್ತರದ ಆಕರ್ಷಕ ಮೈಕಟ್ಟು, ದೇಹಕ್ಕೆ ಒಪ್ಪುವಂತಹ ಗಡಸು ಧ್ವನಿ, ವಿಲನ್ ರೋಲ್ಗೆಂದೇ ಮಾಡಿಸಿದಂತಹ ಮ್ಯಾನರಿಸಂ… ತುಳು ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬಿದ ಮತ್ತೊಬ್ಬ ನಟ ತಿಮ್ಮಪ್ಪ ಕುಲಾಲ್ ಬಿ.ಸಿ.ರೋಡು.
ತುಳು ಚಲನ ಚಿತ್ರ ಹಾಗೂ ನಾಟಕರಂಗದಲ್ಲಿ ಹಾಸ್ಯ ಹಾಗೂ ನೆಗಟಿವ್ ರೋಲ್ನಲ್ಲಿ ಪೇಕ್ಷಕರ ಮನಗೆದ್ದ ಬಂಟ್ವಾಳದ ಈ ಇಬ್ಬರೂ ನಟರು ಸಹೋದರರೆನ್ನುವುದು ಚಿರಪರಿಚಿತ. ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಬಂಟ್ವಾಳದ ವಿವಿಧ ನಾಟಕ ತಂಡಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಇಂದು ತುಳು ಚಿತ್ರರಂಗದಲ್ಲಿಯೂ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ತಿಮ್ಮಪ್ಪ ಕುಲಾಲ್ಗೆ ರಂಗಭೂಮಿಯಲ್ಲಿ 27 ವರ್ಷಗಳ ಅನುಭವ. ಬಿ.ಆರ್ ಕುಲಾಲ್ ಅವರ ಮಂಗಳ ಸೂತ್ರ ನಾಟಕದಲಲ್ಲಿ ಎಸ್ಐ ಪ್ರದೀಪನಾಗಿ ನಾಟಕರಂಗ ಪ್ರವೇಶ. ಬಳಿಕ ಹಿರಿಯ ನಾಟಕಕಾರ ಶಾಂತರಾಮ ಕಲ್ಲಡ್ಕ ಅವರ ಗರಡಿಯಲ್ಲಿ ಪಳಗಿದ ಈ ನಟ ದೇವದಾಸ್ ಕಾಪಿಕಾಡ್ ಅವರ ಈರ್ದೂರ…? ನಾಟಕದ ಮೂಲಕ ಚಾಪರ್ಕ ಕಲಾ ತಂಡಕ್ಕೆ ಎಂಟ್ರಿ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 24 ವರ್ಷಗಳ ಕಾಲ ಕಾಪಿಕಾಡ್ ಅವರ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಹಾಸ್ಯಪಾತ್ರ, ವಿಲನ್ ಮಾತ್ರವಲ್ಲದೆ 80ರ ವಯಸ್ಸಿನ ವೃದ್ಧ , ಸ್ತ್ರೀಪಾತ್ರಗಳನ್ನು ನಿರ್ವಹಿಸಿ ತಾನೊಬ್ಬ ಅದ್ಭುತ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟವರು. ದೇಶವಿದೇಶಗಳಲ್ಲಿ 10 ಸಾವಿರಕ್ಕಿಂತಲೂ ಅಧಿಕ ನಾಟಕಪ್ರದರ್ಶನ ನೀಡಿದ ಕೀರ್ತೀ ಇವರದ್ದು.
ಸುರೇಶ್ ಕುಲಾಲ್ಗೆ ನಾಟಕ ರಂಗ ಪ್ರವೇಶಕ್ಕೆ ಪ್ರೇರಣೆ ಅಣ್ಣ ತಿಮ್ಮಪ್ಪ ಕುಲಾಲ್. ಶಾಂತರಾಮ ಕಲ್ಲಡ್ಕ ಅವರ `ಲೈನ್ ತಾಗ್ಂಡಾ ?’ ನಾಟಕದ ಮೂಲಕ ರಂಗ ಪ್ರವೇಶಿಸಿದ ಸುರೇಶ್ ಕುಲಾಲ್ ನಾಗನವಳಚ್ಚಿಲ್ನ ಕಲಾಮಾತೆಯ ಕಲಾವಿದರು ತಂಡದ ಮೂಲಕ ಪ್ರಧಾನ ಹಾಸ್ಯ ಕಲಾವಿದನಾಗಿ ಅಭಿನಯಿಸುತ್ತಿದ್ದರು. 2008ರಲ್ಲಿ ಈರ್ ಉಂಡರಾ…? ನಾಟಕದ ಮೂಲಕ ಚಾಪರ್ಕ ಕಲಾತಂಡಕ್ಕೆ ಎಂಟ್ರಿ ಪಡೆದು ದೇವದಾಸ್ ಕಾಪಿಕಾಡ್ ಗರಡಿಯಲ್ಲಿ ಪಳಗಿದ ಇವರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತನ್ನ ಅಭಿನಯ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹಾಸ್ಯ ಕಲಾವಿದನಾಗಿ ಗುರುತಿಸಿಕೊಡಿದ್ದ ಇವರು ಬದ್ಕ್ದ್ ಒರಿಂಡಾ ನಾಟಕದ ಮೂಲಕ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಇದೀಗ ಈ ಸಹೋದರ ಕಲಾವಿದರಿಗೆ ರಂಗಭೂಮಿಯೇ ಬದುಕಾಗಿದೆ. ರಂಗಭೂಮಿಯೇ ಸರ್ವಸ್ವವಾಗಿದೆ.
ಚಲನಚಿತ್ರಕ್ಕೂ ಸೈ:
ತುಳು ನಾಟಕದಲ್ಲಿ ಮಿಂಚಿದ ಈ ಸಹೋದರರು ತುಳು ಚಿತ್ರರಂಗದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ತೆರೆ ಕಂಡಿರುವ ತೆಲಿಕೆದ ಬೊಳ್ಳಿ, ಚಾಲಿಪೋಲಿಲು, ಸೂಂಬೆ, ಚಂಡಿಕೋರಿಯಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಇನ್ನು ತೆರೆಕಾಣಲಿರುವ ಬರ್ಸ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಿಮ್ಮಪ್ಪ ಕುಲಾಲ್ ಕನ್ನಡ ಚಿತ್ರಗಳಾದ ಚೆಲ್ಲಾಪಿಲ್ಲಿ, ಸಿಂಪಲ್ಲಾಗ್ ಇನ್ನೊಂದು ಲವ್ಸ್ಟೋರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಧಕಲ್ಯಾಣ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ.
ಕೈತಪ್ಪಿದ ಅವಕಾಶ:
ಕನ್ನಡದಲ್ಲಿ ಹೊಸ ಇತಿಹಾಸ ಬರೆದ ರಂಗಿತರಂಗ ಚಿತ್ರದಲ್ಲಿ ಅಭಿನಯಿಸುವ ಅವಕಾಶವೊಂದು ತಿಮ್ಮಪ್ಪ ಕುಲಾಲ್ ಅವರ ಕೈ ತಪ್ಪಿರುವುದು ಅವರಿಗೆ ಬೇಸರ ಮೂಡಿಸಿದೆ. ಚಿತ್ರದಲ್ಲಿ ಸಾಯಿಕುಮಾರ್ ನಟಿಸಿದ ಪ್ರಮುಖ ಖಳನಾಯಕ ಪಾತ್ರಕ್ಕೆ ತಿಮ್ಮಪ್ಪ ಕುಲಾಲ್ ಅವರನ್ನು ಆಯ್ಕೆಮಾಡಲಾಗಿತ್ತು. ಆದರೆ ನಾಟಕದಲ್ಲಿ ಅಭಿನಯಿಸುವ ಅನಿವಾರ್ಯತೆಯಿಂದ ಈ ಅವಕಾಶವನ್ನು ಅವರು ಕಳೆದುಕೊಂಡಿದ್ದರು.
……………………………………
ವಿವಿಧ ನಾಟಕತಂಡದಲ್ಲಿ ಕಲಾವಿದರಾಗಿ ಕಾಣಿಸಿಕೊಂಡಿದ್ದ ನಮಗೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ದು ದೇವದಾಸ್ ಕಾಪಿಕಾಡ್ ಅವರು. ನಾಟಕ ಮಾತ್ರವಲ್ಲದೆ ಚಲನ ಚಿತ್ರದಲ್ಲೂ ಅಭಿನಯಿಸಲು ಅವಕಾಶ ನೀಡಿರುವ ಅವರೇ ನಮ್ಮ ಗುರುಗಳು ಎಂದು ವಿನಯತೆಯಿಂದ ನೆನೆಪಿಸಿಕೊಳ್ಳುತ್ತಾರೆ ಈ ಸಹೋದರರು.
……………………………………
ಚಿತ್ರ -ವರದಿ :ಸಂದೀಪ್ ಸಾಲ್ಯಾನ್, ಬಂಟ್ವಾಳ