ಆಷಾಡ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ‘ಗುರುಪೂರ್ಣಿಮೆ’ ಅಥವಾ ‘ವ್ಯಾಸಪೂರ್ಣಿಮೆ’ಯನ್ನು ಆಚರಸಲಾಗುತ್ತದೆ. ಆ ದಿನ ವೇದವ್ಯಾಸರು ಅವತರಿಸಿದ ದಿನ. ಅವರು ಒಂದೇ ಆಗಿದ್ದ ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು. ವ್ಯಾಸ ಎಂದರೆ ವಿಭಾಗಿಸು ಎಂಬರ್ಥವಿದೆ. ಕೃಷ್ಣದ್ವೈಪಾನರು ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು. ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದು. ಗು ಎಂದರೆ ಅಜ್ಷಾನ ರು ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವರೋ ಅವರೇ ನಮ್ಮ ಗುರು. ಮಂತ್ರ,ಪೂಜೆ,ದೇವರ ವಿಷಯವಾಗಿ ತಿಳಿಸುವವರು ಶಿಕ್ಷಾಗುರುವಾದರೆ, ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವರು ಆಧ್ಯಾತ್ಮಿಕಗುರುಗಳು. ‘ಗುರುಪೂರ್ಣಿಮೆ’ ಯಂದು ಗುರುಗಳಿಗೆಲ್ಲರಿಗೂ ಗೌರವಿಸಿ ನಮಸ್ಕರಿಸುವ ಸಂಪ್ರದಾಯವಿದೆ. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜಯ ಶಲಾಕಯಾ/ ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ/ ಅಂದರೆ ‘ಶಿಷ್ಯನ ಅಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ ಅಂಜನದಿಂದ ಗುಣಪಡಿಸಿ ಅವನ ಕೀರ್ತಿಯನ್ನು ಎಲ್ಲೆಡೆ ಹರಡುವಂತೆ ಮಾಡಿದ ಶ್ರೀ ಗುರುವಿಗೆ ನಮಸ್ಕಾರಗಳು’. ವೇದ ಮಂತ್ರಗಳನ್ನು ಹೇಳುವಾಗಲೂ ಹಾಗೂ ಎಲ್ಲಾ ಕಾರ್ಯಗಳಿಗೂ ಮೊದಲು ‘ಓಂ ಗುರುಭ್ಯೋನಮಃ’ ‘ಹರಿಃ ಓಂ’ ಎಂದು ಗುರುಪೂಜೆ ಮಾಡುವ ಪದ್ಧತಿ ನಮ್ಮಲ್ಲಿದೆ.ಮುಖ್ಯವಾಗಿ ಐದು ಬಗೆಯ ಗುರುಗಳಿರುವರು. ಉಪನಯನ ಮಾಡಿದವನು,ವಿದ್ಯೆ ಕಲಿಸಿದವನು,ಅನ್ನದಾತನಾದವನು,ಭಯದಲ್ಲಿ ರಕ್ಷಿಸಿದವನು,ತಂದೆಯಾದವನು.ಇವರೆಲ್ಲರೂ ಅಜ್ಞಾನವನ್ನು ಹೋಗಲಾಡಿಸುತ್ತಾರೆ. ‘ನಹಿಃ ಜ್ಞಾನೇನ ಮುಕ್ತಿಃ’ ಜ್ಞಾನವಿಲ್ಲದೆ ಮುಕ್ತಿಯಿಲ್ಲವೆಂದು ಮೂರು ಶಬ್ಧಗಳ ಮೂಲಕ ಮಾನವ ಜಾತಿಗೆ ದಾರಿ ತೋರಿದ್ದಾರೆ ಮಹಾತ್ಮರು. ಮಾನವನು ಜನ್ಮಜನ್ಮಾಂತರದಿಂದ ಕರ್ಮ ಸಂಸ್ಕಾರಗಳ ಜಂಜಾಟದೊಳಗೆ ಮುಳುಗಿದ್ದಾನೆ. ಎಲ್ಲಿಯವರೆಗೆ ಕರ್ಮಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಸದ್ಗುರುವು ಜ್ಞಾನವೆಂಬ ಕತ್ತರಿಯಿಂದ ಕರ್ಮಬಂಧನವನ್ನು ತೆಗೆದು ಹಾಕುತ್ತಾನೆ. ಆದ್ದರಿಂದ ಜ್ಞಾನವನ್ನು ಕೊಡುವವನೇ ಸದ್ಗುರು.ಜ್ಞಾನವೆಂದರೆ ನಮ್ಮ ಬುದ್ಧಿ ಮತ್ತು ಶಾಸ್ತ್ರಗಳಲ್ಲಿರುವ ಅರಿವೂ ಆಗಿದೆ. ಇವುಗಳೆಲ್ಲವೂ ನಮ್ಮ ಪಂಚೇಂದ್ರಿಗಳ ಮೂಲಕ ಪ್ರಾಪ್ತವಾಗುತ್ತದೆ. ಕೆಲವು ಮಹಾಜ್ಷಾನಿಗಳು ನಾನು ಯಾರೆಂದು ತಿಳಿಯುವುದೇ ಜ್ಞಾನವೆಂದಿದ್ದಾರೆ. ಭಗವಾನ ರಮಣ ಮಹರ್ಷಿಗಳೂ ಇದನ್ನೇ ಹೇಳುತ್ತಾರೆ. ಇದನ್ನು ತಿಳಿಯಲು ಸರಿಯಾದ ಸದ್ಗುರು ಬೇಕಾಗುವುದು. ಪುರಂದರ ದಾಸರೂ ಸಹ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ಎಂದಿದ್ದಾರೆ.
೨. ಗುರುವಿನ ಮಹತ್ವ. ಕ್ರಿ.ಶ. ೧೨೧೨ ರಲ್ಲಿ ಮಹಾರಾಷ್ಟ್ರದ ಭಕ್ತ ಕುಂಬಾರನ ಮನೆಯಲ್ಲಿ ನಡೆದ ಸಂತ ಶ್ರೇಷ್ಠರ ಸಭೆಯಲ್ಲಿ ನಡೆದ ಘಟನೆ ಗುರುವಿನ ಮಹತ್ವವನ್ನು ಹೇಳುತ್ತದೆ. ಗೋರ ಕುಂಬಾರನಿಗೆ ಸಭೆಗೆ ಆಗಮಿಸಿದ ಸಂತರ ತಲೆಯನ್ನು ಕುಟ್ಟಿ ಮಡಿಕೆ ಪಕ್ಕಾ ಅಥವಾ ಕಚ್ಚಾ ಯಾವುದೆಂದು ತಿಳಿಸಲು ಆದೇಶಿಸುತ್ತಾರೆ ಜ್ಞಾನದೇವರು. ಅದರಂತೆ ಎಲ್ಲಾ ಸಂತರನ್ನೂ ಭಕ್ತಿಯಿಂದ ಸ್ವಾಗತಿಸಿದ ಗೋರನು ಎಲ್ಲರ ತಲೆಯನ್ನು ಕುಟ್ಟಿ ಪರೀಕ್ಷಿಸಿ ನಾಮದೇವರ ತಲೆಯನ್ನು ಬಿಟ್ಟು ಎಲ್ಲರ ತಲೆಗಳೂ ಪಕ್ವವಾಗಿವೆ ಎಂದು ಹೇಳುತ್ತಾನೆ. ಪಾಡುರಂಗನನ್ನು ಸಾಕ್ಷಾತ್ಕರಿಸಿಕೊಂಡ ನಾಮದೇವನಿಗೆ ಇದನ್ನು ಕೇಳಿ ಅಪಾದ ಮಸ್ತಕ ಉರಿದು ಕ್ರೋಧದಿಂದ ಬಡಬಡಿಸುತ್ತಾ ಹೊರ ನಡೆದು, ಪಂಡರಾಪುರಕ್ಕೆ ಬಂದು ಪಾಡುರಂಗನಲ್ಲಿ ಗೋರನು ಆಡಿದ ನುಡಿಗಳನ್ನು ನಿವೇದಿಸಿ ‘ಹೇ ದೇವಾ ಈ ನಿನ್ನ ಭಕ್ತನಿಗೆ ಆದ ಅವಮಾನ ಕೇಳೆದೆಯಾ? ಏಕೆ ತಟಸ್ತನಾಗಿದ್ದೀಯಾ?ಆ ಗೋರ ಕುಂಬಾರನ ಗರ್ವ ಮುರಿಯಲಾರೆಯಾ?’ಎಂದು ಗೋಗರೆದಾಗ ವಿಠ್ಠಲನು ‘ನಾಮದೇವ ಇದುವರೆಗೆ ನೀನು ಯಾರನ್ನೂ ಗುರುವೆಂದು ಮಾನ್ಯ ಮಾಡಿಲ್ಲ. ಗುರುವಿಲ್ಲದೇ ಜ್ಞಾನ ಲಭ್ಯವಾಗುವುದಿಲ್ಲ.ಆದ್ದರಿಂದಲೇ ನಿನ್ನ ಅರಿವು ಪಕ್ವಗೊಂಡಿಲ್ಲ. ಮಹಾಜ್ಞಾನಿ ಗೋರ ಕುಂಬಾರ ಸೂಚ್ಯವಾಗಿ ನಿನಗೆ ಮಾರ್ಗ ತೋರಿದ್ದಾನೆ’ಎನ್ನುತ್ತಾನೆ. ನಾಮದೇವನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಬೆಂದು ಶ್ರೀ ನಾಗನಾಥನ ಕ್ಷೇತ್ರವಾದ ದಾರುಕವನ[ಔಂದಾ]ಕ್ಕೆ ಬಂದು ಶಿವಾಲಯದೊಳಗೆ ಪ್ರವೇಶಿಸುತ್ತಾನೆ. ಅಲ್ಲಿ ವಿಸೋಬಾ ಖೇಚರನೆಂಬ ಮಹಾ ಶಿವಭಕ್ತನೊಬ್ಬ ನಾಗೇಶ್ವರ ಲಿಂಗದ ಮೇಲೆ ಕಾಲುಗಳನ್ನಿಟ್ಟು ಮಲಗಿರುತ್ತಾನೆ.ಅದನ್ನು ಸಹಿಸದ ನಾಮದೇವ ‘ಇದೇನು ಅನ್ಯಾಯ,ಲಿಂಗದ ಮೇಲೆ ಕಾಲಿಟ್ಟಿರುವಿರಲ್ಲ/ ಇದೆಂಥಾ ಘೋರ ಕೃತ್ಯ?ಶಿವ ಶಿವಾ..ತೆಗೆಯಿರಿ.ಇದು ಅಪರಾಧ ಎಂದಾಗ ಆ ವೃದ್ಧ ‘ಕಾಲುಗಳನ್ನು ಎತ್ತಿ ಇಡಲು ನನಗೆ ಶಕ್ತಿಯಿಲ್ಲ, ನೀನೇ ನನ್ನ ಕಾಲುಗಳನ್ನೆತ್ತಿ ಬೇರೆಡೆಗೆ ಇಡು ನಿನಗೆಪುಣ್ಯ ಬಂದೀತು’.ಎನ್ನುತ್ತಾನೆ.ಅದರಂತೆ ನಾಮದೇವ ಕಾಲುಗಳನ್ನೆತ್ತಿ ಬೇರೆಡೆಗೆ ಇಟ್ಟಾಗ ಅಲ್ಲೂ ಶಿವಲಿಂಗವಿದ್ದಿತು. ಕಾಲುಗಳನ್ನಿಟ್ಟಲ್ಲೆಲ್ಲಾ ಲಿಂಗಗಳೇ ಇದ್ದವು. ಆಗ ಜ್ಞಾನೋದಯಗೊಂಡ ನಾಮದೇವ ಆ ವೃದ್ಧನನ್ನೇ ತನ್ನ ಗುರುವೆಂದು ಅರಿತು ಕ್ಷಮೆ ಯಾಚಿಸಿದಾಗ ಶರಣಾಗಿ ತನ್ನ ಅಹಂಕಾರ ಅಜ್ಞಾನಕ್ಕಾಗಿ ಕ್ಷಮೆ ಯಾಚಿಸಿ,ತನ್ನನ್ನು ಶಿಶ್ಯನನ್ನಾಗಿ ಸ್ವೀಕರಿಸಿ ಮುಕ್ತಿಪಥ ತೋರಿಸುವಂತೆ ಪ್ರಾರ್ಥಿಸುತ್ತಾನೆ.ಆ ಮಹಾಶಯನು ‘ಮಗು ಆ ಭಗವಂತನು ಈ ಜಗತ್ತಿನ ಅಣುರೇಣು ತೃಣಕಾಷ್ಠದಲ್ಲಿದ್ದಾನೆ.ಸರ್ವಂತರ್ಯಾಮಿಯಾದ ಅವನು ಸರ್ವವನ್ನೂ ವ್ಯಾಪಿಸಿದ್ದಾನೆ. ಅಜ್ಞಾನಿಗಳು ನಾವು ಅವನನ್ನು ಗುಂಡಾರದಲ್ಲಿ ಹುಡುಕುತ್ತೇವೆ’ಎಂದು ಉಪದೇಶಿಸುತ್ತಾನೆ.
ಸೀತಾ, ಹರಿಹರ
ಗುರುಪೂರ್ಣಿಮೆ – ಗುರುವಿನ ಮಹತ್ವ -ಅಂದರೆ..?
our culture
2 Mins Read