ಭಾಷಾ ಭಾವೈಕ್ಯಕ್ಕೆ ಕುಂಬಾರ ಸಮಾಜ ವೇದಿಕೆಯಾಗಿದೆ : ಖಾನಾಪುರ ಶಾಸಕ ಅರವಿಂದ ಪಾಟೀಲ
ಖಾನಾಪುರ: ತ್ರಿಪದಿ ಕವಿ ಸರ್ವಜ್ಞ, ಸಂತ ಶಿರೋಮಣಿ ಗೋರಾ ಕುಂಬಾರ ಮತ್ತು ಕುಂಬಾರ ಗುಂಡಯ್ಯ ಜಯಂತ್ಯುತ್ಸವ ಕನ್ನಡ ಹಾಗೂ ಮರಾಠಿ ಭಾಷಿಕ ಕುಂಬಾರ ಸಮಾಜ ಭಾವೈಕ್ಯಕ್ಕೆ ವೇದಿಕೆಯಾಗಿದೆ ಎಂದು ಶಾಸಕ ಅರವಿಂದ ಪಾಟೀಲ ಅಭಿಪ್ರಾಯ ಪಟ್ಟರು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ತಾಲ್ಲೂಕು ಘಟಕ ಹಾಗೂ ಸಂತ ಗೋರಾ ಕುಂಬಾರ ಸಮಾಜ ವಿಕಾಸ ಮಂಡಳಗಳು ಭಾನುವಾರ ಆಯೋಜಿಸಿದ್ದ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಗಡಿಭಾಗದಲ್ಲಿ ಎರಡೂ ಭಾಷೆಯನ್ನಾಡುವ ಮತ್ತು ಲಿಂಗಾಯತ, ಮರಾಠಾ ಸಮುದಾಯಗಳಿಗೆ ಸೇರಿದ ಕುಂಬಾರ, ಕಮ್ಮಾರ, ಕ್ಷೌರಿಕ, ಬಡಿಗೇರ ಮತ್ತಿತರ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಉಭಯ ಭಾಷೆ ಮತ್ತು ಸಮುದಾಯಗಳ ಕುಂಬಾರ ಸಮುದಾಯದವರು ಸಂಘಟಿತರಾಗಿದ್ದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಕುಂಬಾರ, ಕಂಬಾರ, ಬಡಿಗ, ಗಾಣಿಗ ಸೇರಿದಂತೆ ಹಿಂದುಳಿದ ಸಮುದಾಯದವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ತಲತಲಾಂತರದಿಂದ ಬಂದ ತಮ್ಮ ಮೂಲವೃತ್ತಿಯನ್ನು ಕಾಪಾಡಿಕೊಂಡು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ನಾಗರ ಪಂಚಮಿಯ ನಾಗಪ್ಪ, ಚೌತಿಯ ಗಣೇಶ, ಮಣ್ಣೆತ್ತಿನ ಅಮಾವಾಸ್ಯೆಯ ಬಸವಣ್ಣ, ಗುಳ್ಳವ್ವ ಮತ್ತಿತರ ಧಾರ್ಮಿಕ ವಿಗ್ರಹಗಳು, ಅಲಂಕಾರಿಕ ಉತ್ಪನ್ನಗಳ ತಯಾರಿಕೆಯಲ್ಲಿ ಕುಂಬಾರರದು ಎತ್ತಿದ ಕೈಯಾಗಿದೆ. ಸರ್ಕಾರದಿಂದ ಕುಂಬಾರ ಸಮಾಜದ ಉತ್ತೇಜನಕ್ಕೆ ವಿವಿಧ ಯೋಜನೆಗಳಿವೆ. ಸಮಾಜದ ಪ್ರತಿಯೊಬ್ಬರೂ ಅವುಗಳ ಪ್ರಯೋಜನ ಪಡೆಯಲು ಸಂಘಟನೆಯಿಂದ ಸಹಾಯ ಮಾಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಮುಖಂಡ ನಂಜುಡಪ್ಪ ಕುಂಬಾರ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘದ ರಾಜ್ಯಾಧ್ಯಕ್ಷ ಲಿಂಗರಾಜ ಕುಂಬಾರ, ಗೋವಾ ಘಟಕದ ರಾಜ್ಯಾಧ್ಯಕ್ಷ ಸತೀಶ ಕುಂಕಳೇಕರ, ರಾಜ್ಯ ಉಪಾಧ್ಯಕ್ಷೆ ಸಂಗೂತಾಯಿ ಕಟ್ಟಿಮನಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ, ರಾಜಶ್ರೀ ವೇರಣೇಕರ, ಮೇಘಾ ಕುಂದರಗಿ, ಬಾಳಾಸಾಹೇಬ ಕುಂಬಾರ, ಶಿವಾನಂದ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಕಸ್ತೂರಿ ಕುಂಬಾರ, ಕವಿತಾ ಕುಂಬಾರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಕುಂಬಾರ ಸಮಾಜದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಛತ್ರಪತಿ ಶಿವಾಜಿ ವೃತ್ತದಿಂದ ಕಾರ್ಯಕ್ರಮ ನಡೆಯುವ ವೇದಿಕೆಯವರೆಗೆ ತ್ರಿಪದಿ ಕವಿ ಸರ್ವಜ್ಞ, ಸಂತಶಿರೋಮಣಿ ಗೋರಾ ಕುಂಬಾರ ಮತ್ತು ಕುಂಬಾರ ಗುಂಡಯ್ಯ ಅವರ ಭಾವಚಿತ್ರಗಳ ಮೆರವಣಿಗೆ ಜರುಗಿತು.
ಹುಕ್ಕೇರಿ ತಾಲ್ಲೂಕು ಯಮಕನಮರಡಿಯ ವಿಠ್ಠಲ ರುಕ್ಮಿಣಿ ದೇವಾಂಗ ಮಠದ ಧರ್ಮಾಧಿಕಾರಿ ಸಂತ ರಾಜು ಮಹಾರಾಜರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳಿಗೆ ಚುನಾಯಿತರಾದ ಸಮಾಜದ ಜನಪ್ರತಿನಿಧಿಗಳನ್ನು ಹಾಗೂ ಉತ್ತಮ ಅಂಕಗಳನ್ನು ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಶಿಕ್ಷಕ ಶಿವಾನಂದ ಕುಂದರಗಿ ಸ್ವಾಗತಿಸಿದರು. ರಾಜಕುಮಾರ ಕುಂಬಾರ ನಿರೂಪಿಸಿದರು. ಕೃಷ್ಣಾ ಕುಂಬಾರ ವಂದಿಸಿದರು.