ಚಿಕ್ಕೋಡಿ: ಇಂದು ಮಣ್ಣಿನ ಮಡಿಕೆಗೆ ಬಹಳಷ್ಟು ಬೇಡಿಕೆ ಇದೆ. ಸರ್ಕಾರ ಕುಂಬಾರರಿಗಾಗಿ ಮಾಡಿರುವ ಕುಂಭ ಕಲಾ ನಿಗಮವನ್ನು ಅನಿಷ್ಠಾನಗೊಳಿಸಬೇಕು ಮತ್ತು ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತೆ ಕರ್ನಾಟಕ ಪ್ರದೇಶದ ಕುಂಬಾರ ಸಂಘದ ರಾಜ್ಯಾಧ್ಯಕ್ಷ ಲಿಂಗರಾಜ ಕುಂಬಾರ ಒತ್ತಾಯಿಸಿದರು.
ತಾಲೂಕಿನ ಕೋಥಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಚಿಕ್ಕೋಡಿ ತಾಲೂಕು ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಘದ ರಾಜ್ಯಾಧ್ಯಕ್ಷರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಅತ್ಯಂತ ಹಿಂದುಳಿದವರ ಕಡುಬತನದ ಕುಂಬಾರ ಸಮಾಜವನ್ನು 2ಎ ಬದಲಾಗಿ ಎಸ್ಸಿ ಅಥವಾ ಎಸ್ಟಿಗೆ ಸೇರ್ಪಡೆ ಮಾಡಬೇಕು. ಕುಂಬಾರ ಕುಟುಂಬಗಳಿಗೆ ಸರ್ಕಾರ ಕನಿಷ್ಠ ಪ್ರತಿ ತಿಂಗಳು 6000 ರೂ.ಗಳ ಗೌರವ ಧನ ಕೊಡಬೇಕು. ಅದರ ಮೂಲಕ ಕಷ್ಟದಲ್ಲಿರುವ ಕುಂಬಾರರ ಸಂಕಷ್ಟ ನಿವಾರಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಕುಂಬಾರರಿಗೆ ಸುಮ್ಮನೆ 6000 ರೂ. ಗೌರವಧನ ಕೊಡುವುದು ಬೇಡ. ಅದೇ ಹಣ ಕೊಟ್ಟು ಅವರಿಂದ ಮಡಿಕೆ ಖರೀದಿಸಿ, ಅವುಗಳನ್ನು ಸರ್ಕಾರಿ ಶಾಲೆಗಳಲ್ಲಿ ಸಸಿ ಕುಂಡಲಿಗೆ ಉಪಯೋಗಿಸಿ, ಇಲ್ಲವೇ ಶಾಲಾ ಮಕ್ಕಳಿಗೆ ತಂಪಾದ ಕುಡಿಯುವ ನೀರು ತುಂಬಿಡಲು ಬಿಂದಿಗೆಯನ್ನು ಉಪಯೋಗಿಸುವ ಮೂಲಕ ಕುಂಬಾರರ ಸಂಕಷ್ಟವನ್ನು ಸರ್ಕಾರ ದೂರಮಾಡಲು ಮುಂದಾಗುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂದಿನ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ಕುಂಬಾರರನ್ನು 2ಎ ಬದಲಾಗಿ ಎಸ್ಸಿ ಅಥವಾ ಎಸ್ಟಿಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಪ್ರದೇಶ ಕುಂಬಾರ ಸಂಘದಿಂದ ಉಗ್ರ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ಸರ್ವಜ್ಞ ಪ್ರಾಧಿಕಾರ ಸ್ಥಾಪನೆ ಮೂಲಕ ಸರ್ವಜ್ಞ ಅವರ ಚಿಂತನೆಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಥಳಿ ಗ್ರಾ.ಪಂ. ಅಧ್ಯಕ್ಷೆ ಅನಿತಾ ಕುಂಬಾರ, ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಜಿ. ಕುಂಬಾರ ಉಪಸ್ಥಿತರಿದ್ದರು.