ಗುಳ್ಳವನ ಮಣ್ಣ ತರಲಿಲ್ಲ
ಗುಲಗುಂಜಿ ಹಚ್ಚಿ ಆಡಲಿಲ್ಲ
ಸುಳ್ಳ ಬಂತವ್ವ ನಾಗರಪಂಚಮಿ||
ಒಂದು ಮೂಲ್ಯಾಗ ಒಂದ ಪತೂರಿ
ಪತೂರ್ಯಾಗ ಪನಿವಾರ, ಶಿವ ನಿನ್ನ ಮುತ್ತಿನಂಥ ಜನಿವಾರ
ಗುಳ್ಳವ್ವ ನಿನ್ನ ಕುಸಬ್ಯಾಗ ಪನಿವಾರ
ಸುಳ್ಳ ಬಂತವ್ವ ನಾಗರಪಂಚಮಿ
ಮಣ್ಣೆತ್ತಿನ ಅಮಾವಾಸ್ಯೆಯ ನಂತರ ನಾಲ್ಕು ವಾರಗಳ ಕಾಲ ಉತ್ತರ ಕರ್ನಾಟಕದಲ್ಲಿ ಮಹಿಳೆಯರು ಆಚರಿಸುವ ಗುಳ್ಳವನ ಪೂಜೆ ವಿಶಿಷ್ಟವಾದುದು.
ಗ್ರಾಮೀಣ ವೈವಿಧ್ಯಮಯ ಆಚರಣೆ, ನಂಬಿಕೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಗುಳ್ಳವನ ಪೂಜೆ ಮಹತ್ವವೆನಿಸುತ್ತದೆ. ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ರೈತರು ತಮ್ಮ ಎತ್ತುಗಳನ್ನು ಶೃಂಗರಿಸುವ ಹಾಗೂ ಮಣ್ಣಿನ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯದೊಂದಿಗೆ ಭೂಮಿ ತಾಯಿಯನ್ನು ಪ್ರಕೃತಿಯ ಆದಿ ದೇವತೆ ರೂಪದಲ್ಲಿ ಕಾಣುವುದಕ್ಕಾಗಿ ಈ ಗುಳ್ಳವ್ವ ಆಚರಣೆಯಲ್ಲಿದೆ ಎನ್ನುವುದು ಪ್ರತಿತಿ.
ಕುಂಬಾರರು ಮಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ಗುಳ್ಳವ್ವನ ಆಕೃತಿಗಳನ್ನು ಮಹಿಳೆಯರು ಕಟ್ಟಿಗೆ ಮಣೆಯ ಮೇಲೆ ಕುಳ್ಳರಿಸಿಕೊಂಡು, ಸಂಭ್ರಮ, ಸಡಗರದಿಂದ ತಮ್ಮ ಮನೆಗೆ ತರುತ್ತಾರೆ. ಇದೆ ವೇಳೆ ಗುಳ್ಳವನಿಗೆ ಗುಲಗಂಜಿ, ಜೋಳ, ಗೋವಿನಜೋಳ, ಬಿಳಿ ಕುಸುಬೆಯನ್ನು ಚುಚ್ಚಿ ಅರಿಶಿಣ, ಕುಂಕುಮದಿಂದ ಗುಳ್ಳವನನ್ನು ಅಲಂಕರಿಸುತ್ತಾರೆ.
ಕಡೆ ಗುಳ್ಳವ್ವವನ್ನು ಮಂಗಳವಾರ ಕುಂಬಾರರ ಮನೆಯಿಂದ ತಂದು ಮಹಿಳೆಯರು ಆರತಿಯೊಂದಿಗೆ ಮನೆ ಮನೆಗೆ ತೆರಳಿ ಪೂಜಿಸುತ್ತಾರೆ. ಮರುದಿನ ಬಗೆ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಿ ವಿವಿಧ ಸ್ಥಳಗಳಿಗೆ ತೆರಳಿ ಅಲ್ಲಿಯೇ ಒಟ್ಟಾಗಿ ಜಾತಿ, ಮತ, ಭೇದಗಳನ್ನು ಮರೆತು ಒಟ್ಟಾಗಿ ಕುಳಿತು ಭೋಜನ ಮಾಡುತ್ತಾರೆ. ಹೀಗೆ ಗುಳ್ಳವ್ವನ ಪೂಜೆ ನಾಲ್ಕು ವಾರಗಳವರೆಗೆ ಸಾಗುತ್ತದೆ. ಅಥಣಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಿಂದೆ ದೊರೆಯುವ ಮಣ್ಣಿನಿಂದ ಗುಳ್ಳವ್ವನನ್ನು ತಯಾರಿಸುತ್ತಿದ್ದರು. ಆದರೆ ಈಗ ಮಣ್ಣಿನ ಕೊರತೆಯಿಂದಾಗಿ ಉಚಿತವಾಗಿ ದೊರೆಯುವ ಮಣ್ಣನ್ನು ಖರೀದಿ ಮಾಡಿ ತರಬೇಕಾಗಿದೆ ಎಂದು ಹೇಳುತ್ತಾರೆ.
ವಿಶಿಷ್ಟ ಶೃಂಗಾರ;- ಕುಂಬಾರರ ಮನೆಯಿಂದ ತಂದ ಗುಳ್ಳವನಿಗೆ ಮಹಿಳೆಯರೆಲ್ಲರೂ ಸೇರಿಕೊಂಡು ಸೀರೆ,ರವಿಕೆ, ನಡುಪಟ್ಟು,ಕಿವಿಯೋಲೆ,ಕೊರಳ ದಾಗಿಣ ಹಾಕಿ ವಿಶಿಷ್ಟವಾಗಿ ಶೃಂಗಾರ ಮಾಡುತ್ತಾರೆ. ಇವಳ ಮೂರ್ತಿಯ ಬಳಿಯೇ ಗಂಡ ಗೊಗ್ಗಪ್ಪನ ಮೂರ್ತಿಯನ್ನು ತಯಾರಿಸಿ ಆತನ ಬಾಯಿಯಲ್ಲಿ ಬೀಡಿ ಇಟ್ಟು ವ್ಯಂಗ್ಯ ಮಾಡುವುದು ಒಂದು ಸಂಪ್ರದಾಯ.
ಮಣ್ಣಿನ ಮಕ್ಕಳ ಸಂಭ್ರಮದ ಹಬ್ಬ:- ನಾಡಿನಾಧ್ಯಂತ ಉತ್ತಮ ಮಳೆ,ಬೆಳೆಯಾಗಿ ರೈತನ ಬಾಳು ಹಸನಾಗಲಿ ಎಂಬ ಇಷ್ಟಾರ್ಥವನ್ನಿಟ್ಟುಕೊಂಡು ಗುಳ್ಳವನ ಪೂಜೆಯನ್ನು ಮಾಡಲಾಗುತ್ತದೆ. ಆಷಾಢ ಮಾಸದ ಸೋಮವಾರ ಸಂಜೆ ಊರ ಹೊರವಲಯದ ಕೆರೆಗೆ ಪೂಜೆ ಸಲ್ಲಿಸಿ ಕೆರೆಯ ರೆವೆ ಮಣ್ಣನ್ನು ಮನೆಗೆ ತರುತ್ತಾರೆ, ಮಂಗಳವಾರ ಸ್ನಾನ ಮಾಡಿ ಮಡಿಯಿಂದ ಮಣ್ಣಿನ ಮೂರ್ತಿ ತಯಾರಿಸಿ ಪೂಜಿಸುತ್ತಾರೆ. ಹೀಗೆ ಮುರು ಗುಳ್ಳವ್ವನ ಮಾಡಿ ನಾಲ್ಕನೇ ಗುಳ್ಳವ್ವನನ್ನು ಕುಂಬಾರ ಮನೆಯಿಂದ ತಂದು ಹಬ್ಬವನ್ನು ಆಚರಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಮಹಿಳೆಯರ ನೆಚ್ಚಿನ ಆಚರಣೆಯಾಗಿರುವ ಗುಳ್ಳವ್ವನ ಪೂಜೆ ಆಧುನಿಕತೆಯ ಪ್ರಭಾವದಿಂದ ಕಳೆಗುಂದುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಚರಿಸುತ್ತಿದ್ದರು. ಆದರೆ ಈ ಆಚರಣೆ ಈಗ ಕೇವಲ ಗ್ರಾಮೀಣ ಮಹಿಳೆಯರು ಮಾತ್ರ ಆಚರಿಸುತ್ತಿದ್ದಾರೆ. ನಗರದಲ್ಲಿ ಗುಳ್ಳವ್ವ ಮಾಯವಾಗತೊಡಗಿದ್ದಾಳೆ ಜೊತೆ ಜೊತೆಗೆ ಆಚರಣೆ ಮಾಡುವ ಜನರ ಸಂಖ್ಯೆ ಕ್ಷೀಣಿಸುತ್ತಿದ್ದು, ಹಾಗಾಗಿ ಮುಂದೊಂದು ದಿನ ಗುಳ್ಳವ್ವನ ಪೂಜೆ ಮರೆಯಾದರೂ ಅಚ್ಚರಿ ಪಡಬೇಕಾಗಿಲ್ಲ.