ಪಿರಿಯಾಪಟ್ಟಣ : ತಾಲೂಕು ಕೇಂದ್ರದಲ್ಲಿ ಕುಂಬಾರ ಸಮುದಾಯ ಭವನ ನಿರ್ಮಾಣ ಮಾಡಲು ಜಾಗ ನಿಗದಿಗೊಳಿಸಿದರೆ ಸರಕಾರದಿಂದ ೫೦ ಲಕ್ಷ ರೂಪಾಯಿ ಅನುದಾನ ಕೊಡಿಸುತ್ತೇನೆ ಎಂದು ಶಾಸಕ ಕೆ ವೆಂಕಟೇಶ್ ಭರವಸೆ ನೀಡಿದ್ದಾರೆ.
ಪಿರಿಯಾಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಸರ್ವಜ್ಞ ಜಯಂತಿಯಲ್ಲಿ ಅವರು ಮಾತನಾಡಿದರು. ತಾಲೂಕು ಕೇಂದ್ರ ಮಾತ್ರವಲ್ಲ ಇತರ ಅನೇಕ ಕಡೆ ಸಮುದಾಯ ಭವನದ ನಿರ್ಮಾಣಕ್ಕೂ ಶ್ರಮಿಸುವುದಾಗಿ ಹೇಳಿದ ಅವರು ಸಮಾಜಕ್ಕೆ ಆದರ್ಶಗಳನ್ನು ನೀಡಿದ ಮಹನೀಯರನ್ನು ನೆನೆಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಪ್ರತಿಯೊಬ್ಬ ಆದರ್ಶ ಪುರುಷರ ಜಯಂತಿಯನ್ನು ಆಚರಿಸುವುದು ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಎಂದರು.
ಸಾಹಿತಿ ಮಂಜಪ್ಪ ಕುಂಬಾರ ಮಾತನಾಡಿ, ಸರ್ವಜ್ಞ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿದರು. ಅವರು ವಚನಗಳ ಮೂಲಕ ಜನರಿಗೆ ಬದುಕುವ ಕಲೆಯನ್ನು ಕಳಿಸಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಕುಂಬಾರಿಕೆ ಕಣ್ಮರೆಯಾಗುತ್ತಿದೆ. ದೇವರಾಜ ಅರಸು ನಿಗಮದಿಂದ ಕುಂಭಕಲಾ ಅಭಿವೃದ್ಧಿ ನಿಗಮ ಸ್ವತಂತ್ರವಾಗಿಸಿ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದರು.
ಸಮಾಜ ಬಾಂಧವರು ತಮ್ಮ ಹಕ್ಕುಗಳನ್ನು ಪಡೆಯಲು ಭೇದಭಾವ ತೊರೆದು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಬಸವ ಗುಂಡಯ್ಯ ಸ್ವಾಮೀಜಿ ಸಲಹೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ನಿರ್ದೇಶಕ ಕೃಷ್ಣಪ್ರಸಾದ್, ಮಹಿಳಾ ಅಧ್ಯಕ್ಷೆ ರೇಣುಕಮ್ಮ, ತಹಶೀಲ್ದಾರ್ ರಂಗರಾಜು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ : ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್ ಭರವಸೆ
Kulal news
1 Min Read