ಕುಂಬಾರ ಯುವ ವೇದಿಕೆ ಒಕ್ಕೂಟದ ನೂತನ ಕೇಂದ್ರ ಕಚೇರಿ ಉದ್ಘಾಟನೆ
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಣ್ಣಿನ ಮಗುವಾಗಿ ಹುಟ್ಟಿ, ಮಣ್ಣನ್ನೇ ನಂಬಿ ಬದುಕುವ ಕುಂಬಾರ ಸಮಾಜದವರ ಬಾಳಿಗೆ ಕರಾವಳಿಯ ಕುಲಾಲ ಸಂಘಟನೆಗಳು ಆಶಾಕಿರಣವಾಗಿ ಮೂಡಿಬಂದಿವೆ. ಸಮಾಜಸೇವೆಯ ಮೂಲಕ ಇಡೀ ರಾಜ್ಯಕ್ಕೇ ಮಾದರಿಯಾಗಿ ನಿಂತಿರುವ ಇಂತಹ ಸಂಘಟನೆಗಳು ಪ್ರತಿಯೊಂದು ಊರಲ್ಲೂ ತಲೆ ಎತ್ತಿದರೆ, ಕತ್ತಲಲ್ಲಿರುವ ಹೆಣ್ಣುಮಕ್ಕಳು ಮತ್ತು ಯುವಕರ ಬದುಕು ಹಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ಕುಂಭ ನಿಗಮದ ಅಧ್ಯಕ್ಷರಾದ ಡಾ. ಶ್ರೀನಿವಾಸ ವೇಲು ಅವರು ನುಡಿದರು.
ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ನೂತನ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಲೆತಲಾಂತರಗಳಿಂದ ಮಣ್ಣಿನಲ್ಲೇ ಕಲಾಕೃತಿಗಳನ್ನು ಸೃಷ್ಟಿಸುತ್ತಾ, ಮಡಕೆ ಮಾಡುತ್ತಾ ಕಷ್ಟದ ಜೀವನ ಸಾಗಿಸುತ್ತಿರುವ ಕುಂಬಾರರ ಕಣ್ಣೀರನ್ನು ಒರೆಸುವ ಕೆಲಸ ನಿಗಮದಿಂದ ಆಗಲಿದೆ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ, ಕರಕುಶಲ ಕಲೆಗೆ ಹೊಸ ಚೈತನ್ಯ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದೇ ಸುಸಂದರ್ಭದಲ್ಲಿ, ಬಡತನದ ನಡುವೆಯೂ ಛಲಬಿಡದೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಮಾಜಕ್ಕೆ ಕೀರ್ತಿ ತಂದ ಜಾಣ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸನ್ಮಾನಿಸಿ, ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಲಾಯಿತು.
ಸಮಾರಂಭದಲ್ಲಿ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ರಾಜ್ಯಾಧ್ಯಕ್ಷ ಸುಧಾಕರ್ ಸಾಲಿಯಾನ್, ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ್, ಜಿಲ್ಲಾಧ್ಯಕ್ಷ ಲ. ಅನಿಲ್ ದಾಸ್, ಮಹಿಳಾ ಸಂಘಟನೆಯ ಒಕ್ಕೂಟದ ಅಧ್ಯಕ್ಷೆ ಭಾರತಿ ಶೇಷಪ್ಪ ಹಾಗೂ ಯುವ ವೇದಿಕೆಯ ಗೌರವಾಧ್ಯಕ್ಷ ತೇಜಸ್ವಿರಾಜ್ ಅವರು ವೇದಿಕೆಯನ್ನು ಅಲಂಕರಿಸಿದ್ದರು. ಇವರೊಂದಿಗೆ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಗಂಗಾಧರ್ ಬಂಜನ್, ದಯಾನಂದ್ ಅಡ್ಯಾರ್, ಶೇಷಪ್ಪ ಮಾಸ್ಟರ್, ಮಹಾಬಲ ಮಾಸ್ಟರ್, ಚಂದ್ರಶೇಖರ್, ಗಣೇಶ್ ಕುಲಾಲ್, ಅರುಣ್ ತಡಂಬೈಲ್, ಗಣೇಶ್ ಎಂ, ಬಾಬು ಚಂದ್ರ, ದಯಾನಂದ್ ಪಡ್ರೆ, ಮಮತಾ ಅಣ್ಣಯ್ಯ ಕುಲಾಲ್ ಮತ್ತು ಪೂರ್ಣ ಸುಧಾಕರ್ ಸೇರಿದಂತೆ ಹಲವರು ಭಾಗವಹಿಸಿ ಸಮಾಜದ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದರು.

