ಮಂಗಳೂರು : ಸ್ಕೋಲಿಯೋಸಿಸ್ ಎಂಬ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಪಾಣೆಮಂಗಳೂರು ಸಮೀಪದ ನರಿಕೊಂಬು ನಿವಾಸಿ ಭವ್ಯಾ ಕುಲಾಲ್ ಅವರಿಗೆ `ಜೈ ತುಳುನಾಡು’ ಫೇಸ್ಬುಕ್ ಮತ್ತು ವಾಟ್ಸಪ್ ಗುಂಪಿನ ನೇತೃತ್ವದಲ್ಲಿ 20,000 ರೂಪಾಯಿ ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳಾದೇವಿ ರಾಮಕೃಷ್ಣ ಮಿಷನ್ ಅಶ್ರಮದ ಸ್ವಾಮೀಜಿಯಾದ ಜೀತಕಾಮಾನಂದ ಮಹಾರಾಜರ ಸಮ್ಮುಖದಲ್ಲಿ ಇತ್ತೀಚೆಗೆ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ `ಹಿಂದೂ ವಾರಿಯರ್ಸ್’; `ಅಮೃತ ಸಂಜೀವಿನಿ’ ಹಾಗೂ `ಜೈ ತುಳುನಾಡು’ ಗುಂಪಿನ ನಿರ್ವಾಹಕರುಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಫೇಸ್ಬುಕ್ ಗಳಿಂದ ಕೆಲವು ಸಮಾನ ಮನಸ್ಕ ಯುವಕ ಯುವತಿಯರನ್ನು ಒಟ್ಟು ಸೇರಿಸಿ ಅವರಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತಾ 3 ಸೇವಾ ಯೋಜನೆಗಳನ್ನು ಯಶಸ್ವೀಯಾಗಿ ಪೂರೈಸಿದ `ಜೈ ತುಳು ನಾಡು’ ತಂಡದ 4ನೇ ಸೇವಾ ಯೋಜನೆ ಇದಾಗಿತ್ತು.
ಪಾಣೆಮಂಗಳೂರಿನ ನರಿಕೊಂಬು ನಿವಾಸಿ ಚಂದಪ್ಪ ಕುಲಾಲ್ ಅವರ ಪುತ್ರಿಯಾಗಿರುವ 24 ವರ್ಷದ ಭವ್ಯ ಪದವಿ ಶಿಕ್ಷಣ ಪಡೆದು ಬಳಿಕ ಕಾಲೇಜು ಫೀಸು ಭರಿಸಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿದ್ದರು. ನಂತರ ಬೀಸಿರೋಡು ಬಳಿಯ ಕಚೇರಿಯೊಂದರಲ್ಲಿ ಅಲ್ಪ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡು ತಾನು ಅಂಚೆ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದರು. ಅದರ ಜೊತೆಗೆ ಪದವಿ ಶಿಕ್ಷಣ ಮಾಡುತ್ತಿರುವ ತನ್ನ ತಂಗಿಯ ಶಿಕ್ಷಣದ ವೆಚ್ಚವನ್ನು ಇವರೇ ಬರಿಸುತ್ತಿದ್ದರು.
ತನ್ನ ಶಾಲಾ ದಿನಗಳಲ್ಲಿ ತನ್ನ ಬೆನ್ನಿನ ಬಲ ಭಾಗ ಸ್ವಲ್ಪ ಉಬ್ಬಿದಂತೆ ಕಂಡು ಏನೋ ಚಿಕ್ಕ ಸಮಸ್ಯೆ ಇರಬಹುದೆಂದು ವೈದ್ಯರಿಗೆ ತೋರಿಸಿದರು. ಆದರೆ ಅವರಿಗೆ `ಸ್ಕೋಲಿಯೋಸಿಸ್ (ವಕ್ರಗೊಂಡ ಬೆನ್ನು ಮೂಳೆ)’ ಸಮಸ್ಯೆ ಉಂಟಾಗಿದ್ದು ಚಿಕಿತ್ಸೆಗೆ ತುಂಬ ಖರ್ಚು ಇದೆ ಎಂದು ಹೇಳಿದಾಗ ಆ ಕುಟುಂಬಕ್ಕೆ ಗರಬಡಿದಂತಾಗಿತ್ತು. ಹೊಟ್ಟೆಗೇ ಸರಿಯಾಗಿ ಹಿಟ್ಟಿಲ್ಲದ ಮೇಲೆ ಚಿಕಿತ್ಸೆಗೆ ಎಲ್ಲಿಂದ ಹಣ ಎನ್ನುವಷ್ಟರ ಮಟ್ಟಿಗೆ ಮನೆಯಲ್ಲಿ ತೀರಾ ಬಡತನ. ನೋವಿನಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆಯಲಾಗದ ಪರಿಸ್ಥಿತಿ. ಹೆಚ್ಚು ಹೊತ್ತು ನಿಂತರೆ ಕೂತರೆ ಅಥವಾ ಭಾರ ಎತ್ತಿದಂತೆ ಭವ್ಯ ಅವರಿಗೆ ತಡೆಯಲಾಗದ ನೋವು ಕಾಣಿಸಿಕೊಳ್ಳುತ್ತಿದೆ.
ಗಂಭೀರ ಸಮಸ್ಯೆಗೆ ಒಳಗಾಗಿರುವ ಈಕೆಯ ಸಮಸ್ಯೆಯನ್ನು ಮೂಳೆ ತಜ್ಞರು ಹಾಗೂ ನರ ತಜ್ಞರು ಜಂಟಿಯಾಗಿ ನಡೆಸಬೇಕಾಗಿದ್ದು ಇದಕ್ಕಾಗಿ ಸಾಕಷ್ಟು ಹಣವೂ ಬೇಕಾಗಿದೆ. ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಸಮಸ್ಯೆ ಜೋರಾಗಿ ಒಂದು ಕಡೆ ಬಲ ಕಳೆದುಕೊಳ್ಳಬಹುದಾದ ಪರಿಸ್ಥಿತಿಯೂ ಇದೆ. ತನ್ನ ಚಿಕಿತ್ಸೆಗೆ ಹಣ ಹೊಂದಾಣಿಕೆ ಆಗದಿದ್ದಲ್ಲಿ ತಾನು ಹೀಗೆಯೇ ಬದುಕುತ್ತೇನೆ ಎಂದು ಭವ್ಯ ನಿರ್ಧರಿಸಿದ್ದಾರೆ. ಆದರೆ ಈ ಹುಡುಗಿ ಹೀಗೆಯೇ ಬಾಳಬಾರದೆಂಬ ದೃಷ್ಟಿಯಿಂದ ಹೃದಯ ವೈಶಾಲ್ಯತೆಯಿಂದ `ಜೈ ತುಳುನಾಡು’ ತಂಡ ತಮ್ಮಿಂದಾದ ಧನ ಸಹಾಯವನ್ನು ನೀಡಿ ಮಾನವೀಯತೆ ಮೆರೆದಿದೆ.