ಮುಂಬಯಿ: ನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲೊಂದಾದ ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 35ನೇ ಮಹಾಸಭೆಯು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಜರಗಿತು.
ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಭೆಗೆ ಚಾಲನೆಯಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಜ್ಯೋತಿ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಯ ಪಾಲುದಾರರನ್ನು ಸ್ವಾಗತಿಸಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು, ಸದಸ್ಯರನ್ನು ಈ ಸಂದರ್ಭದಲ್ಲಿ ಸಂತೋಷದಿಂದ ಅಭಿನಂದಿಸುತ್ತಿದ್ದೇನೆ. ಎಲ್ಲಾ ಬಾಂಧವರಿಗೆ ಸಾಲ ನೀಡಲು ನಮ್ಮ ಸೊಸೈಟಿಯು ಬದ್ಧವಾಗಿದೆ. ಉಪನಗರಗಳಾದ ಕಲ್ಯಾಣ್, ಬೊರಿವಲಿ ಮತ್ತು ನವಿ ಮುಂಬಯಿಯ ನೆರೂಲ್ನಲ್ಲಿ ಶಾಖೆಗಳನ್ನು ಹೊಂದಿರುವ ನಮ್ಮ ಸಂಸ್ಥೆ, ಇನ್ನು ಹೆಚ್ಚು ಶಾಖೆಗಳನ್ನು ಹೊಂದಲಿದ್ದು ಸದಸ್ಯತನದ ಸಂಖ್ಯೆಯನ್ನು ಇನ್ನೂ ಹೆಚ್ಚಿಸಬೇಕಾಗಿದೆ. ಇದರಿಂದ ನಮ್ಮ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಸಂಸ್ಥೆಯ ಅಭಿವೃದ್ಧಿಗೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸೊಸೈಟಿಯ ಸಿಬಂದಿಗಳ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ಪ್ರಮುಖ ಕಾರಣವಾಗಿದೆ. ನಮ್ಮ ಆರ್ಥಿಕ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯ ನಮ್ಮ ಮುಂದಿದೆ. ಸಂಸ್ಥೆಯು ಬಡವ-ಬಲ್ಲಿದ ಎನ್ನದೆ ಎಲ್ಲ ಜಾತೀಯ ಬಾಂಧವರಿಗೆ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡಿ ಸಹಕರಿಸುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಹಾಸಭೆಯ ಕಾರ್ಯಕಲಾಪವನ್ನು ನಡೆಸಿಕೊಟ್ಟ ಸೊಸೈಟಿಯ ಕಾರ್ಯದರ್ಶಿ ಪಿ. ದೇವದಾಸ್ ಎಲ್. ಕುಲಾಲ್ ಅವರು ಗತಸಭೆಯ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿ, ಶೀಘ್ರದಲ್ಲೇ ನಾಲಾಸೋಪಾರ ಮತ್ತು ಪುಣೆಯಲ್ಲಿ ಸೊಸೈಟಿಯ ನೂತನ ಶಾಖೆಗಳನ್ನು ಆರಂಭಿಸಲಾಗುವುದು. ಸಂಸ್ಥೆಯ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಬೇಕು. ನಮ್ಮ ಸಂಸ್ಥೆಯು ಜಾತಿ, ಮತ, ಧರ್ಮವನ್ನು ಮೀರಿ ನಿಂತಿದೆ. ಸಂಸ್ಥೆಯ ಸಿಬಂದಿಗಳ ಪಾತ್ರ ಸಂಸ್ಥೆಯ ಅಭಿವೃದ್ಧಿಗೆ ಮೂಲವಾಗಿದ್ದು, ಸಂಸ್ಥೆಯನ್ನು ಅಭಿವೃದ್ಧಿಯ ಪಥದತ್ತ ಸಾಗಿಸುತ್ತಿರುವ ಎಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಸಭೆಯಲ್ಲಿ ಸೊಸೈಟಿಯ ಪಾಲುದಾರರಾದ ಶಂಕರ್ ವೈ, ಮೂಲ್ಯ, ಜಯ ಅಂಚನ್, ದಿನೇಶ್ ಕುಲಾಲ್ , ಲಕ್ಷ್ಮಣ್ ಮೂಲ್ಯ, ರಘು ಮೂಲ್ಯ, ಸುರೇಶ್ ಬಂಜನ್, ಮಮತಾ ಗುಜರನ್, ಸುಮತಿ ಬಂಜನ್, ಜೈರಾಜ್, ನಿರ್ದೇಶಕರಾದ ಹಿಂದೂರಾವ್ ಎಂ. ಥೋರಟ್, ನ್ಯಾಯವಾದಿ ಸವಿನಾ ಎಸ್. ಕುಲಾಲ್, ದೇವದಾಸ್ ಎಂ. ಬಂಜನ್, ಉಪಕಾರ್ಯಾಧ್ಯಕ್ಷ ಪಿ. ಶೇಖರ್ ಮೂಲ್ಯ ಮೊದಲಾದವರು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಸೂಕ್ತ ಸಲಹೆ-ಸೂಚನೆಗಳನ್ನಿತ್ತು ಸಹಕರಿಸಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ಇತರ ನಿರ್ದೇಶಕರಾದ ಡಿ. ಐ. ಮೂಲ್ಯ, ಚಂದು ಕೆ. ಮೂಲ್ಯ, ಬಾಬು ಜಿ. ಅಂಚನ್, ಭಾರತಿ ಪಿ. ಆಕ್ಯìನ್, ಸುರೇಖಾ ಆರ್. ಕುಲಾಲ, ಗಿರೀಶ್ ವಿ. ಕರ್ಕೇರ, ದೇವದಾಸ್ ಎಂ. ಬಂಜನ್, ರಾಜೇಶ್ ಎಸ್. ಬಂಜನ್ ಉಪಸ್ಥಿತರಿದ್ದರು. ಸೊಸೈಟಿಯ ನೂತನ ಲೆಕ್ಕ ಪರಿಶೋಧಕರಾಗಿ ಆಶೋಕ್ ಶೆಟ್ಟಿ ಮತ್ತು ಕಂಪೆನಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ಡಿ. ಎನ್. ಶೆಟ್ಟಿ ಮತ್ತು ಕಂಪೆನಿ ಅವರನ್ನು ಪುನರಾಯ್ಕೆ ಮಾಡಲಾಯಿತು.
ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. 2015-2016ನೇ ಶೈಕ್ಷಣಿಕ ಸಾಲಿನ ಸಿಎ ಪರೀಕ್ಷೆಯಲ್ಲಿ ಉತ್ತಿರ್ಣರಾದ ಅಕ್ಷತ್ ಎಸ್. ಮೂಲ್ಯ, ಡಾ| ಅನುಶಾ ಬಂಗೇರ ಅವರನ್ನು ಗೌರವಿಸಲಾಯಿತು. ವರದಿ ವರ್ಷದಲ್ಲಿ ಸೊಸೈಟಿ ಯಲ್ಲಿ ಅತ್ಯಧಿಕ ಹಣ ಸಂಗ್ರಹಿಸಿದವರನ್ನು ಹಾಗೂ ಕುಲಾಲ ಸಂಘದ ಸ್ಥಳೀಯ ಸಮಿತಿಗಳ ಮತ್ತು ಉಪಸಮಿತಿಗಳ ಪ್ರಮುಖರನ್ನು ಗೌರವಿಸಲಾಯಿತು.
ಕಳೆದ ವಾರ ನಿಧನ ಹೊಂದಿದ ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್, ಸೊಸೈಟಿಯ ಉಪಕಾರ್ಯಾಧ್ಯಕ್ಷರಾಗಿದ್ದ ಕರುಣಾಕರ ಜೆ. ಮೂಲ್ಯ ಮತ್ತು ವರದಿ ವರ್ಷದಲ್ಲಿ ಅಗಲಿದ ಇತರ ಪಾಲುದಾರರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕುರ್ಲಾ ಸಂಘ ಮುಂಬಯಿ ಮತ್ತು ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.