ಯಾವ ಹಬ್ಬಕ್ಕೂ ಇಲ್ಲದ ಒಂದು ವಿಶೇಷತೆ ಈ ಗೌರೀ ಗಣೇಶ ಹಬ್ಬಗಳಿಗಿವೆ. ಅದೇನೆಂದರೆ, ಆ ಜಗದಂಬಿಕೆಯಾದ, ಹರನ ನಲ್ಮೆಯ ಮಡದಿ ಪಾರ್ವತೀದೇವಿ ತಾನು ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಬಂದಿರುತ್ತಾಳೆ. ಪಾರ್ವತೀ ದೇವಿ, ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥಿವೀ ಎಂದೂ ಹೆಸರಿದೆ. (ಪೃಥಿವೀ ಎಂದರೆ ವ್ಯಾಪಿಸಿರುವವಳು ಎಂದರ್ಥ).
ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ, ಪರಶಿವನನ್ನು ಪ್ರಾರ್ಥಿಸುತ್ತಾಳೆ, “ಒಡೆಯಾ, ತಾಯಿಯ ಮನೆಗೆ ಹೋಗಿಬರುತ್ತೇನೆ, ಅನುಜ್ಞೆ ಕೊಡು” ಎಂದು.
ಹರನು ಪಾರ್ವತಿದೇವಿ ಕೈಲಾಸದೊಳಗೆ ಸರಸವಾಡುತ್ತ ತನ್ನ ಪುರುಷನೊಡನೆ I ವರ ಭಾದ್ರಪದ ಶುದ್ಧ ತದಿಗೆ ನಾಳೇ ದಿನ ಅರಸರೇ ತವರು ಮನೆಗ್ಹೋಗಿ ಬರುವೆ II
ಸರಸ ಹೃದಯದ ಗೌರೀವಲ್ಲಭ ನುಡಿಯುತ್ತಾನೆ, “ನೀ ಹೋದರೆ ನನ್ನನ್ನು ನೋಡಿಕೊಳ್ಳುವರ್ಯಾರು” ಎಂದು. “ಜಗದ ರಕ್ಷಣೆಯನ್ನು ಮಾಡುವ ನಿಮ್ಮನ್ನು ನಾನು ನೋಡಿಕೊಳ್ಳಬೇಕೆ, ಮೂರು ದಿನದ ಮಟ್ಟಿಗೆ ಕಳುಹಿಸಿಕೊಡಿ” ಎಂದು ಪ್ರಾರ್ಥಿಸುತ್ತಾಳೆ.
ಅಲ್ಲಿಗೆ ಹೋದರೇ ಇಲ್ಲಿ ನನಗಾರುಂಟು ಚೆಲ್ವಕಂಗಳೆ ನೀ ತಿಳಿದು ಪೇಳೆ I ಎಲ್ಲ ಯಾತಕ್ಕೆ ಸ್ವಾಮಿ ಮೂರು ದಿನವಿದ್ದು ನಿ- ಮ್ಮಲಡಿಯ ಸೇವೆಗೆ ತಿರುಗಿ ನಾ ಬರುವೆ II
ಆಗ ರುದ್ರದೇವರು, ಹೋಗಿ ಬಾ ಎಂದು ಹೇಳುವ ರುದ್ರದೇವರು, ತನ್ನ ಪ್ರೇಮದ ಮಡದಿಯ ಮೇಲಣ ಪ್ರೀತಿಯಿಂದಲೂ, ಅವಳಿಗೆ ತವರಿನ ಮೇಲೆ ಇರುವ ಅಭಿಮಾನವನ್ನು ತಿಳಿದಿದ್ದರಿಂದಲೂ ಮತ್ತೊಂದು ಮಾತನ್ನು ಹೇಳುತ್ತಾರೆ – “ಮೂರು ದಿನ ಐದು ದಿನ ಮೀರಿದರೆ ಏಳುದಿನ ದಾರಿ ನೋಡುತಲಿರುವೆ ನೀರೆ ನೀ ಹೋಗೆಂದ I ಕರಿಮುಖನ ಒಡಗೊಂಡು ಕರೆವುದಕೆ ನಾ ಬರುವೆ ಹಿರಿದುಪಚಾರವೇನುಂಟು ನೀ ತಿಳಿದು ಪೇಳೆ” ಮೂರು ದಿನ ಅಂತಷ್ಟೇ ಅಲ್ಲ, ಐದು ದಿನ ಅಥವಾ ಏಳು ದಿನವಾದರೂ ಇದ್ದು ಬಾ. ನೀ ಹೊರಡು, ನಾನು ಗಣಪತಿಯ ಸಮೇತನಾಗಿ ಬರುತ್ತೇನೆ, ನಿನ್ನನ್ನು ಕರೆದೊಯ್ಯಲು ಎಂದು ಹೇಳುತ್ತಾನೆ. ಹೀಗೆ ಹೇಳಿ ವೃಷಭವನ್ನೇರಿ, ಪಾರ್ವತಿಯನ್ನೂ ಕೂಡಿಸಿಕೊಂಡು ಮಾವನ ಮನೆಗೆ – ಮೇನಕೆ, ಹಿಮವಂತರ ಮನೆಗೆ – ಬಿಟ್ಟು ಬರುತ್ತಾರೆ ರುದ್ರದೇವರು. ಹೆಂಡತಿಯನ್ನು ಬೀಳ್ಕೊಡುವಾಗ – ವರಸಾಲಿಗ್ರಾಮದ ನರಸಿಂಹಮೂರ್ತಿಯ ಪರಮಹರಭಕ್ತರ ಮನೆಯೊಳಗಿದ್ದು I ಸಿರಿಯ ಸಂಪತ್ತುಗಳ ವರವನೇ ನೀಡಿ ಸಡ- ಗರದಿಂದ ನೀನೋಡಾಡಿ ಬೇಗ ಬಾರೇ II ಎಂದು ಆದೇಶಿಸುತ್ತಾರೆ. ಸಾಲಿಗ್ರಾಮದ ಸಾನ್ನಿಧ್ಯವಿರುವ, ನರಸಿಂಹನನ್ನು ಅರ್ಥಾತ್ ಶ್ರೀಹರಿಯನ್ನು ಆರಾಧಿಸುವ ಶ್ರೇಷ್ಠ ಶಿವಭಕ್ತರ ಮನೆಯಲ್ಲಿ ನೀನಿದ್ದು ಅವರ “ಬಾಳ ಬಡತನವ ಬಿಡಿಸಿ ಐಶ್ವರ್ಯಗಳ ಕೊಟ್ಟು” ಬದುಕಿನ ಬವಣೆಗಳನ್ನು ಕಳೆದು, ಸಿರಿ ಸಂಪತ್ತುಗಳನ್ನು ಅವರಿಗೆ ಕರುಣಿಸಿ, ಪ್ರೀತಿಯ ಮಗಳಾಗಿ ಅವರ ಮನೆಯಲ್ಲಿ ಓಡಾಡಿಕೊಂಡು ನೀನು ಬೇಗ ಬಂದುಬಿಡು ಎಂದು ಭಕ್ತರಿಗೆ ವರಪ್ರದಳಾಗುವಂತೆ ತಿಳಿಸುತ್ತಾರೆ. (ಇದೇ ಕಾರಣಕ್ಕೆ ಸ್ವರ್ಣಗೌರಿಯ ವ್ರತದಂದು ಸಾಂಪ್ರದಾಯವನ್ನು ಬಲ್ಲ ಸ್ಮಾರ್ತರ ಮನೆಗಳಲ್ಲಿ ಮೊದಲಿಗೆ ನರಸಿಂಹರೂಪದ ಶ್ರೀಹರಿಗೆ ಪೂಜೆ ಸಲ್ಲಿಸಿ ಆ ಬಳಿಕ ಸ್ವರ್ಣಗೌರಿಯನ್ನು ಪೂಜಿಸುತ್ತಾರೆ) ಆ ರುದ್ರದೇವರಿಗೆ ತನ್ನ ನಲ್ಮೆಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮಾರನೆಯ ದಿವಸವೇ ಗಣಪತಿಯನ್ನು ಕೊಟ್ಟು ಕಳುಹಿಸುತ್ತಾರೆ. ಹೀಗಾಗಿ ತೃತೀಯಾ ತಿಥಿಯಂದು ಗೌರೀ ಹಬ್ಬ. ಅದರ ಮಾರನೆಯ ದಿವಸ ಚತುರ್ಥೀಯಂದು ಗಣಪತಿಯ ಹಬ್ಬ. ತಾಯಿಯ ಮನೆಗೆ ಮಗಳು ಬಂದಂತೆ, ಸಮಗ್ರ ಜಗತ್ತಿನ ತಾಯಿಯಾದ ಗೌರೀದೇವಿ ನಮ್ಮ ಮನೆಗೆ ಮಗಳಾಗಿ ಬರುತ್ತಾಳೆ. ಮನೆಗೆ ಬಂದ ನಮ್ಮ ಮಗಳು ಹೊರಡುವಾಗ ನಿಮ್ಮ ಮನೆ ಚೆನ್ನಾಗಿರಲಿ ಎಂದು ಹರಸಿದರೇ, ತವರು ಮನೆ ಸುಖ ಸಂತೋಷಗಳಿಂದ, ಸಿರಿ ಸಂಪತ್ತುಗಳಿಂದ ಕೂಡುತ್ತದೆ, ಅಂತಹುದರಲ್ಲಿ ಜಗತ್ಸ್ವಾಮಿನಿಯಾದ ಪಾರ್ವತೀದೇವಿ ಅನುಗ್ರಹ ಮಾಡಿದಲ್ಲಿ ನಾವು ಸಾತ್ವಿಕವಾದ ಸಂಪತ್ತಿನಿಂದ ಭರಿತರಾಗುತ್ತೇವೆ, ಸಾಧನೆಯ ಮಾರ್ಗದಲ್ಲಿ ನಡೆಯುತ್ತೇವೆ. ಹೀಗಾಗಿ, ಈ ಸ್ವರ್ಣಗೌರೀವ್ರತವನ್ನು ವಿನಾಯಕವ್ರತವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಶುದ್ಧವಾದ ಕ್ರಮದಲ್ಲಿ ಮಾಡಬೇಕು. ಶ್ರೀಹರಿ-ಗುರುಗಳು ಮೆಚ್ಚುವಂತೆ ಆಡಂಬರವಿಲ್ಲದೇ, ಭಕ್ತಿಯಿಂದ ಮಾಡಬೇಕು. ಮದುವೆಯಾಗಿ ಹೋಗಿ ಗಂಡನ ಮನೆಯನ್ನು ಬೆಳಗುತ್ತಿರುವ ಸಂತಸದ ಚಿಲುಮೆಯಾದ ಮಗಳು ಬಂದಾಗ ಎಷ್ಟು ಸಂತೋಷ ಸಡಗರ ಪಡುತ್ತೇವೆಯೋ ಅದರ ಸಾವಿರಪಟ್ಟು ಸಂತೋಷ ಸಡಗರದಿಂದ ನಾವು ಗೌರೀಹಬ್ಬವನ್ನು ಆಚರಿಸಬೇಕು. ಕಾರಣ, ಜಗದಂಬೆ ಮಗಳಾಗಿ ಬರುತ್ತಿದ್ದಾಳೆ, ವರಗೌರಿಯಾಗಿ ಬರುತ್ತಿದ್ದಾಳೆ. ತೃತೀಯಾ ತಿಥಿಯೇ ಯಾಕೆ ಸ್ವರ್ಣಗೌರೀವ್ರತ? ಈ ಪ್ರಶ್ನೆಗೆ ಶ್ರೀ ವರಾಹದೇವರು ವರಾಹಪುರಾಣದಲ್ಲಿ ನಮಗೆ ಉತ್ತರ ನೀಡಿದ್ದಾರೆ. ಪರಮಾತ್ಮ ಒಂದೊಂದು ತಿಥಿಯನ್ನು ಒಬ್ಬೊಬ್ಬ ದೇವತೆಗೆ ನೀಡಿದಾಗ ತನ್ನ ಪ್ರೀತಿಯ ತಂಗಿಯಾದ ಪಾರ್ವತಿಗೆ (ಪರಮಾತ್ಮನ ಯಜ್ಞ, ಕಪಿಲ ರೂಪಗಳಿಗೆ ಸತೀರೂಪದ ಗೌರೀದೇವಿ ತಂಗಿಯಾಗಬೇಕು. ಯಜ್ಞ ಮತ್ತು ಕಪಿಲನ ಅಮ್ಮಂದಿರು ಸತಿಯ ಅಮ್ಮ ಪ್ರಸೂತಿಯ ಅಕ್ಕಂದಿರು) “ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್” ತನ್ನ ತಂಗಿಯಾದ ಪಾರ್ವತಿಗೆ ತೃತೀಯಾ ತಿಥಿ ನೀಡಿದ ಕಾರಣಕ್ಕೇ, ಕಾರ್ತೀಕ ಶುದ್ಧ ತೃತೀಯಾದಂದು (ದೀಪಾವಳಿಯ ನಂತರ) ಅಣ್ಣತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗಿ ಅವರ ಕೈಯಿಂದ ಮಾಡಿದ ಅಡಿಗೆಯನ್ನು ಉಂಡು ಅವರಿಗೆ ಉಡುಗೊರೆ ನೀಡಿ ಬರುತ್ತಾರೆ. ಒಟ್ಟಾರೆ ತೃತೀಯಾ ತಿಥಿ ಪಾರ್ವತೀದೇವಿಯ ಅಧೀನ. ಪ್ರತೀಮಾಸದ ತೃತೀಯಾದಂದೂ ಗೌರಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಭಾದ್ರಪದಮಾಸದ ತೃತೀಯಾದಂದು ಸ್ವರ್ಣಗೌರೀವ್ರತವನ್ನು ಆಚರಿಸಬೇಕು. ಗೌರೀದೇವಿಯ ಪ್ರತಿಮೆ ಸ್ವರ್ಣಗೌರೀ ವ್ರತದಲ್ಲಿ ಮಣ್ಣಿನ ಗೌರೀದೇವಿಯ ಪ್ರತಿಮೆಯನ್ನು ಮಾಡಿಸಬೇಕು. (ಗಣೇಶನ ಪ್ರತಿಮೆಗಳು ಕಲರಿಲ್ಲದೇ ದೊರೆಯುತ್ತವೆ, ಗೌರೀ ಪ್ರತಿಮೆ ಮಾತ್ರ ದೊರೆಯುವದೇ ಇಲ್ಲ. (ಆದರೆ ಹಳ್ಳಿಗಳಲ್ಲಿನ ಕುಂಬಾರರ ಮನೆಗೆ ಹೋಗಿ, ಪ್ರತಿಮೆಯಾಗಬೇಕಾದರೇ ಕೇವಲ ಮಣ್ಣಿನ – ಇನ್ನೂ ಕೆಮಿಕಲ್ಲಿನ ಬಣ್ಣ ಬಳಿಯದ – ಪ್ರತಿಮೆಯನ್ನು ತಂದಿಟ್ಟುಕೊಳ್ಳುವದು ಅತ್ಯಂತ ಸೂಕ್ತ). ಇದು ಸ್ವರ್ಣಗೌರೀವ್ರತ, ಸ್ವರ್ಣ ಎಂದರೆ ಬಂಗಾರ. ಬಂಗಾರದಲ್ಲಿ ಪ್ರತಿಮೆಯನ್ನು ಮಾಡಿ, ಪೂಜಿಸಿ ಆ ಬಳಿಕ ಪ್ರತೀನಿತ್ಯವೂ ಗೌರೀಶಂಕರರ ಆರಾಧನೆಯನ್ನು ಮಾಡುವ ಸದ್ಭಕ್ತರಿಗೆ ದಾನ ಮಾಡುವದೂ ಸಹ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದರಿಂದ ಎಂದಿಗೂ ಕುಂದಿಲ್ಲದ ಸಂಪತ್ತು ನಮ್ಮದಾಗುತ್ತದೆ. ಶಕ್ತಿಯಿದ್ದಲ್ಲಿ ಹಾಗೆ ಮಾಡಬಹುದು. ಇಲ್ಲದಿದ್ದರೆ ಚಿಂತೆಯಿಲ್ಲ. ನಮ್ಮ ದೇವರು, ನಮ್ಮ ದೇವತೆಯರು ಕರುಣಾಳುಗಳು, ಒಂದು ದಳ ತುಳಸಿಗೆ, ಒಂದು ಬಿಲ್ವಪತ್ರೆಗೆ, ಒಂದು ಹೂವಿಗೆ, ಒಂದು ಗರಿಕೆಗೆ, ಬಿಂದು ಗಂಗೋದಕಕ್ಕೆ ಒಲಿಯುವವರು. ಹೀಗಾಗಿ ಮಣ್ಣಿನಲ್ಲಿ ಪ್ರತಿಮೆಯನ್ನು ಮಾಡಿಸಿ, ಪೂಜಿಸಿ ಶುದ್ಧವಾದ ನೀರಿನಲ್ಲಿ ವಿಸರ್ಜಿಸುವದು ಶ್ರೇಷ್ಠ ಕ್ರಮ. ಅಷ್ಟೇ ಅಲ್ಲ, ನೀವು ಬಂಗಾರದಲ್ಲಿ ಗೌರಿಯ ಪ್ರತಿಮೆ ಮಾಡಿಸಿದರೂ, ಮಣ್ಣಿನಲ್ಲಿ ಒಂದು ಪ್ರತಿಮೆಯನ್ನು ಮಾಡಿಸಲೇಬೇಕು. ಮಣ್ಣಿನಲ್ಲಿಯೇ ಯಾಕೆ ಮಾಡಿಸಬೇಕು? ಅದ್ಭುತವಾದ ಉತ್ತರಗಳು ಇದಕ್ಕಿವೆ. ಪಾರ್ವತೀದೇವಿ ಸಮಗ್ರ ಚರಾಚರವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿವೀ ಎಂದು ಕರೆಸಿಕೊಳ್ಳುತ್ತಾಳೆ ಎಂದು ಶ್ರೀಮದಾಚಾರ್ಯರು ತಿಳಿಸುತ್ತಾರೆ. (ಪೃಥಿವೀ ಎಂದರೆ ವ್ಯಾಪಿಸಿರುವವಳು ಎಂದರ್ಥ. ಪೃಥು, ಪೃಥ್ವೀ, ಪೃಥಿವೀ = ವಿಶಾಲ ವ್ಯಾಪ್ತ.) ಆ ತಾಯಿ ಪಾರ್ವತಿ, ತನ್ನವರ ಮೇಲೆ ಅನುಗ್ರಹ ಮಾಡಲು ಕೈಲಾಸದಿಂದ ಕೆಳಗಿಳಿದು ಬರುತ್ತಾಳೆ. ಮಳೆಗಾಲದ ಈ ಸಮಯದಲ್ಲಿ ಮಳೆಯ ಮುಖಾಂತರ ಧರೆಗಿಳಿದು ಮಣ್ಣಿನ ಕಣಕಣದಲ್ಲಿಯೂ ಅವಳು ವ್ಯಾಪಿಸಿರುತ್ತಾಳೆ. ಹೀಗಾಗಿ ಮಳೆ ಬಿದ್ದು ಮೆತ್ತಗಾದ ಕೆರೆಯ ಜೇಡಿ ಮಣ್ಣನ್ನು ತಂದು ಕುಂಬಾರರು ಪ್ರತಿಮೆಗಳನ್ನು ಮಾಡಬೇಕು. (ಕುಂಬಾರರು ಮಣ್ಣು ತರುವದಕ್ಕೂ, ಪ್ರತಿಮೆ ಮಾಡುವದಕ್ಕೂ ಶಾಸ್ತ್ರೀಯವಾದ ವಿಧಿಯಿದೆ). ಅಷ್ಟೇ ಅಲ್ಲ. ಅನ್ನವನ್ನು ಮಾಡುವ ಮಡಿಕೆಯನ್ನು ಮಾಡುವ ಕುಂಬಾರರ ಮನೆಯಿಂದಲೇ ಅನ್ನಪೂರ್ಣೆ ಬರಬೇಕು ಎನ್ನುವ ಮಹತ್ತ್ವದ ಕಾರಣಕ್ಕೆ ಕುಂಬಾರರು ಮಾಡಿದ ಪ್ರತಿಮೆಯೇ ಪೂಜೆಗೆ ಅರ್ಹವಾದದ್ದು. ಅದರಲ್ಲಿ ಮಾತ್ರ ತಾಯಿಯ ಸನ್ನಿಧಾನ.
ನಮ್ಮ ಹಿಂದೂಧರ್ಮ ಪರಮ ಪರಿಶುದ್ಧವಾದದ್ದು. ಜಾತಿ, ಜಾತಿ ಎಂದು ಇವತ್ತಿನ ಮೂರ್ಖರು ಹೀಗಳೆಯುತ್ತಾರೆ. ಆದರೆ ಪ್ರತಿಯೊಂದು ಜಾತಿಗೂ ಒಂದೊಂದು ವಿಶಿಷ್ಟ ಕರ್ತವ್ಯವಿದೆ. ಸಮಾಜದಲ್ಲಿ ಶ್ರೇಷ್ಠ ಗೌರವವಿದೆ. ಮದುವೆಯಂತಹ ಪರಮಮಂಗಳ ಕಾರ್ಯ ಕ್ಷೌರಿಕರಿಲ್ಲದೇ ಆರಂಭವಾಗುವದೇ ಇಲ್ಲ. ಆ ಕ್ಷೌರಿಕರ ವಾದ್ಯವೇ ಮಂಗಳವಾದ್ಯ. ನೀವು ತಂದು ವೀಣೆ ಕೊಳಲು ನುಡಿಸಿದರೂ ಅದು ಅವತ್ತಿನ ಮಂಗಳವಾದ್ಯಗಳಲ್ಲ. ಹಾಗೆ, ಕುಂಬಾರರು ಮಾಡಿದ ಮಣ್ಣಿನ ಪ್ರತಿಮೆಯಲ್ಲಿಯೇ ದೇವರ ಸನ್ನಿಧಾನ. ಇವತ್ತು ನಾವು ಜೇಬಿನಿಂದ ಹಣ ತೆಗೆದು ಕೊಟ್ಟು ಪ್ರತಿಮೆ ತರುತ್ತೇವಲ್ಲ, ಅದು ಅತ್ಯಂತ ಅಶಾಸ್ತ್ರೀಯ. ವೀಳ್ಯದೆಲೆ, ಅಡಿಕೆಗಳ, ಫಲ ಪುಷ್ಪಗಳ ಜೊತೆಯಲ್ಲಿ ಕುಂಬಾರ ಗಂಡಹೆಂಡತಿಯರಿಗೆ ಸೀರೆ, ರವಿಕೆ, ಪಂಚೆ, ಶಲ್ಯಗಳನ್ನು ನೀಡಿ ಹಣವನ್ನು ನೀಡಬೇಕು. ನಮ್ಮ ಮನೆಗೆ ದೇವರನ್ನು ನೀಡುವ, ಅಡುಗೆ ಮಾಡಲು ಪಾತ್ರೆಗಳನ್ನು ತಯಾರು ಮಾಡಿಕೊಡುವ, ಕುಂಬಾರ ಜಾತಿಗೆ ನಾವು ಸಲ್ಲಿಸುವ ಗೌರವ ಅದು. ಮತ್ತು, ನಾವೇ ನಡೆದು ಕುಂಬಾರರ ಮನೆಗೆ ಹೋಗಿ ಅಲ್ಲಿಂದ ಮಂಗಳ ವಾದ್ಯದ ಸಮೇತವಾಗಿ ಪ್ರತಿಮೆಗಳನ್ನು ತರಬೇಕು. ಅವರಿಗೇ ತರಹೇಳಬಾರದು, ಮತ್ತು ದರ್ಪದಿಂದ ಕೆಲಸದವರಿಗೆ ತರಹೇಳಬಾರದು.
ಇದರ ಆಧ್ಯಾತ್ಮಿಕ ಮುಖವನ್ನು ನೋಡೋಣ ಕೈಲಾಸದ ಪರ್ವತದಿಂದ ಮೇಘದ ರೂಪದಲ್ಲಿ ಹೊರಟ ಪಾರ್ವತೀದೇವಿ ಮಳೆಯಾಗಿ ಭೂಮಿಯನ್ನು ಸೇರುತ್ತಾಳೆ. ಹೀಗೆ, ಮಳೆಗಾಲದ ಈ ‘ಮಣ್ಣಿ’ನಲ್ಲಿ ಸ್ವಾಭಾವಿಕವಾಗಿ ಸುಗಂಧಮಯಳಾದ ಪಾರ್ವತೀದೇವಿಯ ಸನ್ನಿಧಾನವಿರುತ್ತದೆ. ಕುಂಬಾರರು ಮಣ್ಣಿಗೆ ‘ನೀರು’ ಸೇರಿಸಿ ಪ್ರತಿಮೆ ಮಾಡಿದಾಗ ರೂಪಸಹಿತಳಾಗಿ ಪಾರ್ವತಿ ಸನ್ನಿಹಿತಳಾಗುತ್ತಾಳೆ. ಕುಂಬಾರರ ಮನೆಯಿಂದ ಆ ಪ್ರತಿಮೆಯನ್ನು ವಾದ್ಯಗಳ ಸಮೇತವಾಗಿ ತರುವಾಗ ‘ಗಾಳಿ’ಯಲ್ಲಿರುವ ಪಾರ್ವತೀದೇವಿ ಪ್ರತಿಮೆಯಲ್ಲಿ ಸೇರುತ್ತಾಳೆ. ನಾವು ಅದನ್ನು ಆರತಿಯೆತ್ತಿ ಮನೆಯೊಳಗೆ ತಂದಿಟ್ಟು ಪ್ರತಿಮೆಯ ಮುಂದೆ ದೀಪ ಹಚ್ಚಿದಾಗ ಅದರಲ್ಲಿನ ‘ಜ್ಯೋತೀ’ರೂಪದಿಂದ ತಾಯಿ ಪ್ರತಿಮೆಯನ್ನು ಸೇರುತ್ತಾಳೆ.
ಆ ಬಳಿಕ ಮಾರನೆಯ ದಿವಸ ಪ್ರಾಣಪ್ರತಿಷ್ಠಾಪನೆಯ ಮಂತ್ರಗಳನ್ನು ಹೇಳಿದಾಗ ಅದರಲ್ಲಿ ‘ಆಕಾಶ’ಕ್ಕೆ ನಿಯಾಮಕಳಾದ ಪಾರ್ವತೀದೇವಿ ಸನ್ನಿಹಿತಳಾಗುತ್ತಾಳೆ. ಹೀಗೆ, ಭೂಮಿ, ಜಲ, ವಾಯು, ಅಗ್ನಿ, ಆಕಾಶಗಳೆಂಬ ಪಂಚಭೂತಗಳಲ್ಲಿ ನೆಲೆನಿಂತ ತಾಯಿ ಪಾರ್ವತಿ ಪ್ರತಿಮೆಯಲ್ಲಿ ಸನ್ನಿಹಿತಳಾಗಿ ನಮ್ಮಿಂದ ಪೂಜೆಗೊಂಡು ಮತ್ತೆ ಕಡೆಯ ದಿವಸ ಮಂತ್ರಗಳನ್ನು ಹೇಳಿದಾಗ ಆಕಾಶದಲ್ಲಿ, ಹೊರಡುವಾಗ ಮಾಡುವ ಆರತಿಯಿಂದ ಅಗ್ನಿಯಲ್ಲಿ, ವಾದ್ಯಗಳ ಸಮೇತ ದಾರಿಯಲ್ಲಿ ಹೋಗುವಾಗ ವಾಯುವಿನಲ್ಲಿ ಮತ್ತು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರು ಭೂಮಿಗಳಲ್ಲಿ ಸೇರುತ್ತಾಳೆ. ಗಣಪತಿಯೂ ಸಹ ಇದೇ ರೀತಿಯಲ್ಲಿ ಪಂಚಭೂತಾತ್ಮಕನಾಗಿ ನಮ್ಮ ಮನೆ ಸೇರುತ್ತಾನೆ. ಮತ್ತೆ ನೀರಿನಲ್ಲಿ ವಿಸರ್ಜಿಸಿದಾಗ ಆ ಸಮಗ್ರ ದೈವೀ ಶಕ್ತಿ ಜಗತ್ತಿನಲ್ಲಿ ಜಗತ್ತಿನಲ್ಲಿ ವ್ಯಾಪಿಸಿ ನಿಲ್ಲುತ್ತದೆ. ಅಂದರೆ, ಪಂಚಭೂತಗಳಲ್ಲಿನ ದೇವತಾಶಕ್ತಿಯನ್ನು ಒಂದೆಡೆ ಸೇರಿಸಿ, ಆ ಶಕ್ತಿಸ್ವರೂಪಿಣಿಯನ್ನು, ವಿಘ್ನನಿವಾರಕನನ್ನು ಭಕ್ತಿಯಿಂದ ಪೂಜಿಸಿ ಆ ನಂತರ ಆ ಶಕ್ತಿಯನ್ನು ಮತ್ತೆ ಪಂಚಭೂತಗಳಲ್ಲಿ ಸೇರಿಸುತ್ತೇವೆ. ಕೃಷಿಯಲ್ಲಿ ಬಿತ್ತನೆಯ ಕೆಲಸ ಆರಂಭವಾಗುವ ಈ ಕಾಲದಲ್ಲಿ ನೀರು ಮಣ್ಣು ಗಾಳಿಗಳಲ್ಲಿ ದೈವೀಶಕ್ತಿಯನ್ನು ಜಾಗೃತಗೊಳಿಸುತ್ತದೆ, ಈ ಸ್ವರ್ಣಗೌರೀ ಪೂಜೆ ಮತ್ತು ಗಣಪತಿಯ ಆರಾಧನೆ. ಹೀಗೆ ಮಣ್ಣು-ನೀರು-ಗಾಳಿ-ಬೆಂಕಿ-ಆಕಾಶಗಳೆಂಬ ಪಂಚಭೂತಗಳಲ್ಲಿನ ಜಗದಂಬಿಕೆಯನ್ನು, ವಿಶ್ವನಾಥನನ್ನು, ಗಣಪತಿಯನ್ನು ಅವರ ಅಂತರ್ಯಾಮಿಯಾದ ಲಕ್ಷ್ಮೀರಮಣ ನಾರಾಯಣನನ್ನು ಆರಾಧಿಸುವ ದಿವ್ಯವಾದ ಹಬ್ಬ ಗೌರೀ ಗಣೇಶ ಹಬ್ಬಗಳು. ಇದು ಕೇವಲ ಗೌರೀ ಗಣಪತಿ ಹಬ್ಬದ ವಿಶೇಷತೆಗಳು. ನಾವು ಅನಂತವ್ರತ, ವರಮಹಾಲಕ್ಷ್ಮೀವ್ರತ ಮುಂತಾದವನ್ನು ಕಲಶದೊಳಗೆ ದೇವರನ್ನು ಆವಾಹಿಸಿ ಪೂಜಿಸುತ್ತೇವೆ. ಆದರೆ, ಗೌರೀ-ಗಣಪತಿಯ ವ್ರತಗಳಲ್ಲಿ ಮಾತ್ರ ಮಣ್ಣಿನ ಪ್ರತಿಮೆಗಳಲ್ಲಿ ಪೂಜೆ. ಕಾರಣ, ಗೌರೀ-ಗಣೇಶರ ಸನ್ನಿಧಾನ ಈ ಸಂದರ್ಭದಲ್ಲಿ ಪಂಚಭೂತಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮಳೆಯ ನೀರಿನಿಂದ ತೋಯ್ದ ಮಣ್ಣಿನಲ್ಲಿ ವ್ಯಾಪಿಸಿ ಇರುತ್ತದೆ.
– ವಿಷ್ಣುದಾಸ ನಾಗೇಂದ್ರಾಚಾರ್ಯ