ಕಾಸರಗೋಡು: ಬಾಡೂರು ಚಾಕಟೆಚಾಲು ನಿವಾಸಿ ಪದ್ಮನಾಭ ಎಂಬವರ ಪತ್ನಿ ಜಯಂತಿ ಮೂಲ್ಯ (೪೦) ಅವರ ಮೃತದೇಹ ಬಂದ್ಯೋಡು ಬಳಿಯ ಹೇರೂರು ಹೊಳೆಯಲ್ಲಿ ಪತ್ತೆಯಾಗಿದೆ.
ಹೇರೂರು ಮಯ್ಯರಮೂಲೆ ಎಂಬಲ್ಲಿ ಹೊಳೆಬದಿ ಪೊದೆಗಳೆಡೆ ಸಿಲುಕಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಜೀರ್ಣಾವಸ್ಥೆಯಲ್ಲಿದೆ. ತೆಂಗಿನಕಾಯಿ ಹಿಡಿಯಲೆಂದು ಹೊಳೆಗೆ ತೆರಳಿದವರಿಗೆ ಮೃತದೇಹ ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಹಾಗೂ ಜಯಂತಿಯ ಸಂಬಂಧಿಕರು ಸ್ಥಳಕ್ಕೆ ತೆರಳಿ ಮೃತದೇಹದ ಗುರುತುಹಚ್ಚಿದ್ದಾರೆ.
ಜುಲೈ ತಿಂಗಳ ೮ರಂದು ಬೆಳಿಗ್ಗೆ ೧೦ ಗಂಟೆ ಬಳಿಕ ಜಯಂತಿ ನಿಗೂಢವಾಗಿ ನಾಪತ್ತೆ ಯಾಗಿದ್ದರು. ಈ ಬಗ್ಗೆ ಪತಿ ಪದ್ಮನಾಭ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಜಯಂತಿಯ ತವರು ಮನೆಯವರು ಕೂಡಾ ಜಿಲ್ಲಾ ಪೊಲೀಸಧಿಕಾರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ಮನೆಯವರು ವಿವಿಧೆಡೆ ಹುಡುಕಾಡಿದರೂ ಜಯಂತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಸಿ.ಐ ನೇತೃತ್ವದ ಶ್ವಾನದಳ ತಲುಪಿ ಶೋಧ ನಡೆಸಿತ್ತು. ಅಲ್ಲದೆ ಬಾಡೂರು ಹೊಳೆಯಲ್ಲಿ ಕರಾವಳಿ ರಕ್ಷಣಾ ಪಡೆಯ ಮುಳುಗು ತಜ್ಞರು, ಅಗ್ನಿಶಾಮಕದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರೂ ಪತ್ತೆಹಚ್ಚಲಾಗಿಲ್ಲ. ಶೋಧ ಮುಂದುವರಿಯುತ್ತಿದ್ದಂತೆ ಜಯಂತಿಯ ಮೃತದೇಹ ಹೊಳೆಯಲ್ಲಿ ಪತ್ತೆ ಯಾಗಿದೆ. ಜಯಂತಿ ನೀರುಪಾಲಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಮೃತದೇಹ ವನ್ನು ಪೊಲೀಸರು ಪಂಚನಾಮೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರ ಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ನಲ್ಕ ಮಂಜಳಗಿರಿ ನಿವಾಸಿ ಶಂಕರ ಮೂಲ್ಯ-ಸುಶೀಲ ದಂಪತಿಯ ಪುತ್ರಿಯಾದ ಜಯಂತಿ ಪತಿ, ಮಕ್ಕಳಾದ ಜಯಪ್ರಕಾಶ, ಅಶ್ವಿನಿ, ಸಹೋದರಿಯರಾದ ಚಂದ್ರಾವತಿ, ರೇವತಿ, ಅನ್ನ ಪೂರ್ಣ, ಉಷ ಮೊದಲಾದವರನ್ನು ಅಗಲಿದ್ದಾರೆ.