ರಾಯಚೂರು : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ-ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ದಿನಾಂಕ 30 ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ನಿರ್ದೇಶಕ ಜಿ.ನಾಗಪ್ಪ ಗಿರಣಿ ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಹಿಂದುಳಿದ ವರ್ಗಗಳ ಸಮುದಾಯ ವ್ಯಾಪ್ತಿಯಲ್ಲಿ ಬರುವ ತಿಗಳ, ಮಡಿವಾಳ, ಉಪ್ಪಾರ, ಸವಿತಾ ಹಾಗೂ ಕುಂಬಾರ ಸಮುದಾಯದವರು ವಿವಿಧ ಸಾಲ-ಸೌಲಭ್ಯ ಪಡೆಯಲು ದಿನಾಂಕ ವಿಸ್ತರಿಸಲಾಗಿದೆ. ಈ ಹಿಂದೆ ಜೂನ್ 16 ಕ್ಕೆ ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಮೇಲ್ಕಂಡಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಈ 5 ಸಮುದಾಯಗಳ ಫಲಾನುಭವಿಗಳಿಗೆ ಮಾತ್ರ ಸಾಲ ಪಡೆಯಲು 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸ್ವಯಂ ಉದ್ಯೋಗ ಪಡೆಯಲು ಮಡಿವಾಳ ಸಮಾಜಕ್ಕೆ 10 ಲಕ್ಷ 50 ಸಾವಿರ ರೂ., ಕುಂಬಾರರಿಗೆ 9 ಲಕ್ಷ 75 ಸಾವಿರ ರೂ., ಉಪ್ಪಾರ ಸಮಾಜಕ್ಕೆ 15 ಲಕ್ಷ 75 ಸಾವಿರ ರೂ ಹಾಗೂ ಸವಿತಾ ಸಮಾಜಕ್ಕೆ 5 ಲಕ್ಷ 25 ಸಾವಿರ ರೂ. ಸಾಲ ನೀಡಲಾಗುತ್ತದೆ. ಸಂಪ್ರಾದಾಯಿಕ ಸಾಲ ಮಡಿವಾಳ, ಕುಂಬಾರ, ಉಪ್ಪಾರ ಮತ್ತು ಸವಿತಾ ಸಮಾಜಕ್ಕೆ ತಲಾ 14 ಲಕ್ಷ ರೂ. ಸಾಲ ನೀಡಲಾಗುತ್ತದೆ.
ಶಿಕ್ಷಣ ಸಾಲ ಸಿಇಟಿ ಹೊರೆತುಪಡಿಸಿ 4 ಸಮಾಜದ ಪ್ರತಿ ಇಬ್ಬರು ವಿದ್ಯಾರ್ಥಿಗಳಿಗೆ 1 ಲಕ್ಷ 20 ಸಾವಿರ ರೂ. ಸಾಲ ನೀಡಲಾಗುತ್ತದೆ. ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆಬಾವಿ ಹಾಕಿಸಿಕೊಳ್ಳುವ ಮಡಿವಾಳ, ಕುಂಬಾರ, ಸವಿತಾ ಮತ್ತು ಉಪ್ಪಾರ ಸಮುದಾಯಕ್ಕೆ ತಲಾ 4 ಲಕ್ಷ ರೂ. ಮತ್ತು ಕೌಶಲ್ಯ ತರಬೇತಿ ಪಡೆಯಲು ಸವಿತಾ, ಮಡಿವಾಳ ಹಾಗೂ ಕುಂಬಾರ ಸಮುದಾಯಕ್ಕೆ ತಲಾ 5 ಲಕ್ಷ ರೂ. ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಬಂಧ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಈ ಮೇಲ್ಕಂಡ 5 ಸಮುದಾಯಗಳ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪುನಃ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದೆ. ಇದರ ಸೌಲಭ್ಯ ಪಡೆದುಕೊಂಡು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಬಿ.ಬಸವನಗೌಡ ಪಾಟೀಲ್, ಮಹೇಶ ಪಾಟೀಲ್ ಉಪಸ್ಥಿತರಿದ್ದರು.