ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಗೌರವಾಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರದಂದು ರಾತ್ರಿ ವಿಧಿವಶರಾದರು.
ಕಳೆದ ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ವಡಾಲ ವೆಸ್ಟ್ ನಲ್ಲಿರುವ ಅವರ ಸ್ವಗೃಹ ಕವಿತಾ ಅಪಾರ್ಟ್’ಮೆಂಟ್ ನಲ್ಲಿ ಜು. ೨೦ ಬುಧವಾರದಂದು ರಾತ್ರಿ ಕೊನೆಯುಸಿರೆಳೆದರು. ಸಾಲ್ಯಾನ್ ಅವರ ಅಂತ್ಯಕ್ರಿಯೆಯು ಗುರುವಾರ ಬೆಳಿಗ್ಗೆ ನಡೆಯಲಿದೆ.
ಮುಂಬಯಿಯಲ್ಲಿ ಸುಮಾರು ಅರ್ಧ ಶತಮಾನದಿಂದ ಆರತಿ ಪ್ರಿಂಟರ್ಸ್ ಹೆಸರಲ್ಲಿ ಮುಖ್ಯವಾಗಿ ಕನ್ನಡ ಮುದ್ರಣ ಕ್ಷೇತ್ರದಲ್ಲಿ ಖ್ಯಾತರಾದ ಪಿ. ಕೆ. ಸಾಲ್ಯಾನ್ ಅವರು ಮುಂಬಯಿ ಕುಲಾಲ ಸಂಘದಲ್ಲಿ ದಶಕಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ ದುಡಿದು ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಮೃತರು ಪತ್ನಿ ಸಾವಿತ್ರಿ ಪಿ. ಸಾಲ್ಯಾನ್ , ಮಕ್ಕಳಾದ ಜೈರಾಜ್ , ಶ್ಯಾಮರಾಜ್, ರವಿರಾಜ್, ಆರತಿ – ಶ್ರೀಧರ್, ಸೊಸೆಯಂದಿರು, ಮೊಮ್ಮಕ್ಕಳು ಸಹಿತ ಅಪಾರ ಬಂಧು ವರ್ಗವನ್ನು ಬಿಟ್ಟು ಅಗಲಿದ್ದಾರೆ.
——————————————
ಪಿ. ಕೆ. ಸಾಲ್ಯಾನ್ ಅವರಿಗೆ ನುಡಿನಮನ
—————————————–
ಮುಂಬಯಿ: ನನ್ನ ಆತ್ಮೀಯರಾದ, ನಗರದ ಹಿರಿಯ ಕನ್ನಡಿಗರೊಬ್ಬರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಿ. ಕೆ. ಸಾಲ್ಯಾನ್ ಅವರು ಎಲ್ಲರೊಳಗೊಂದಾಗಿ ಬದುಕು ಕಟ್ಟಿದವರು. ಕುಲಾಲ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರು. ರಾಜಕೀಯವಾಗಿ ಅಮ್ಮೆಂಬಳ ಬಾಳಪ್ಪ, ಸಾಹಿತ್ಯಕವಾಗಿ ಸೀತಾರಾಮ ಕುಲಾಲರು ಕುಲಾಲ ಸಮಾಜಕ್ಕೆ ಹೆಸರು ತಂದರೆ, ಪಿ. ಕೆ. ಸಾಲ್ಯಾನ್ ಅವರು ಸಮಾಜ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಸಮಾಜ ಬಾಂಧವರ, ತುಳು-ಕನ್ನಡಿಗರ ಮನ-ಮನೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ಸ್ನೇಹ-ಬಾಂಧವ್ಯಕ್ಕೆ ಉತ್ತಮ ನಿದರ್ಶನ ಎಂದರೆ ಅದು ಪಿ. ಕೆ. ಸಾಲ್ಯಾನ್. ಸದಾ ಸಮಾಜದ ಒಳಿತಿಗಾಗಿ ಚಿಂತಿಸುತ್ತಿದ್ದ ಅವರು ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.
ಜು. 28ರಂದು ಸಂಜೆ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಕುಲಾಲ ಸಂಘ ಮುಂಬಯಿ ಗೌರವಾಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರ ಸಂತಾಪ ಸೂಚಕ ಸಭೆಯಲ್ಲಿ ಉಪಸ್ಥಿತರಿದ್ದು ನುಡಿನಮನಗೈದ ಅವರು, ಕುಲಾಲ ಸಮಾಜದ ಕಣ್ಮಣಿಯಾಗಿದ್ದ ಅವರ ಆದರ್ಶ, ತತ್ವಗಳು ಸಮಾಜಕ್ಕೆ ದಾರಿದೀಪವಾಗಲಿ ಎಂದು ನುಡಿದರು.
ಮೈಸೂರು ಅಸೋಸಿಯೇಶನ್ ಟ್ರಸ್ಟಿ ಮಂಜುನಾಥಯ್ಯ ಅವರು ಮಾತನಾಡಿ, ಓರ್ವ ವ್ಯಕ್ತಿ ಎಷ್ಟು ಸಮಯ ಬದುಕಿದ ಎನ್ನುವುದು ಮುಖ್ಯವಲ್ಲ. ಅವರು ಬದುಕಿದಾಗ ಮಾಡಿದ ಒಳ್ಳೆಯ ಕಾರ್ಯಗಳು ಶಾಶ್ವತವಾಗಿ ಉಳಿಯುವಂತಾಗಬೇಕು. ಅಂತಹ ದಾರಿಯಲ್ಲಿ ಪಿ. ಕೆ. ಸಾಲ್ಯಾನ್ ಅವರು ಸಾಗಿದ್ದಾರೆ. ಕರ್ಮಯೋಗಿ, ಧರ್ಮಿಷ್ಟ, ಕರ್ಮಿಷ್ಟರಾಗಿದ್ದ ಅವರು ಎಲ್ಲರಿಗೂ ಆದರ್ಶಪ್ರಾಯರು ಎಂದರು. ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್ ಮಾತನಾಡಿ, ಪಿ. ಕೆ. ಸಾಲ್ಯಾನ್ ಅವರೋರ್ವ ವಿನಯಶೀಲ, ಕ್ರಿಯಾಶೀಲ, ಉತ್ತಮ ಸಂಘಟಕರಾಗಿ ಎಲ್ಲರ ಮನೆ-ಮನಗಳನ್ನು ಬೆಳಗಿದವರು ಎಂದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಸುಭಾಷ್ ಶೆಟ್ಟಿ ಮಾತನಾಡಿ, ಎಲ್ಲ ಸಮಾಜವನ್ನು ಸಮಾನ ರೀತಿಯಲ್ಲಿ ಕಂಡ ಅಪರೂಪದ ವ್ಯಕ್ತಿ ಅವರಾಗಿದ್ದಾರೆ. ಸರಳ ಸ್ವಭಾವ, ನೇರ ನಡೆ-ನುಡಿಯ ಸಾಲ್ಯಾನ್ ತುಳುವ ಕನ್ನಡಿಗರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.
ಕರ್ನಾಟಕ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ, ಬಿಲ್ಲವ ಜಾಗೃತಿ ಬಳಗದ ಕಾರ್ಯದರ್ಶಿ ಹರೀಶ್ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಗೋಪಾಲ್ ಪಾಲನ್, ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಧರ್ಮೇಶ್ ಸಾಲ್ಯಾನ್, ತುಳು ಸಂಶೋಧಕ ಜಯಕರ್ ಪೂಜಾರಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ, ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್, ಶ್ರೀ ಮದ್ಭಾರತ ಮಂಡಳಿಯ ಉಪಾಧ್ಯಕ್ಷ ರಘುನಾಥ ಕುಂದರ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ವಾಸು ದೇವಾಡಿಗ, ಯಕ್ಷಗಾನ ಕಲಾಪೋಷಕ, ಅರ್ಥದಾರಿ ಕೆ. ಕೆ. ಶೆಟ್ಟಿ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಭಂಡಾರಿ, ಗುರುತು ಮಾಸಿಕದ ಸಂಪಾದಕ ಬಾಬು ಶಿವ ಪೂಜಾರಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಬಿಲ್ಲವ ಜಾಗೃತಿ ಬಳಗದ ಮಾಜಿ ಕಾರ್ಯದರ್ಶಿ ಕೇಶವ ಕೋಟ್ಯಾನ್, ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘದ ಉಪಾಧ್ಯಕ್ಷ ದಯಾಸಾಗರ್ ಚೌಟ, ವೀರ ಕೇಸರಿ ಕಲಾವೃಂದದ ಅಧ್ಯಕ್ಷ ಪಯ್ನಾರು ರಮೇಶ್ ಶೆಟ್ಟಿ, ವಿದ್ಯಾದಾಯಿನಿ ಸಭಾ ಗೌರವ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ನುಡಿನಮನ ಸಲ್ಲಿಸಿ, ಪಿ. ಕೆ. ಸಾಲ್ಯಾನ್ ಅವರ ಸಿದ್ಧಿ, ಸಾಧನೆ, ವ್ಯಕ್ತಿತ್ವ, ಅವರು ಸಲ್ಲಿಸಿದ ಕೊಡುಗೆಗಳನ್ನು ವಿವರಿಸಿದರು.
ಸಭೆಯಲ್ಲಿ ಉದ್ಯಮಿ ಶ್ರೀನಿವಾಸ ಕಾಂಚನ್, ಕೊಂಕಣಿ ವೆಲ್ಫೆàರ್ ಅಸೊಸಿಯೇಶನ್ ಅಧ್ಯಕ್ಷ ಹ್ಯಾರಿ ಆರ್. ಸಿಕ್ವೇರಾ, ಎಸ್. ಕೆ. ಸುಂದರ್, ರಾಮರಾಜ್ಯ ಕ್ಷತ್ರಿಯ ಸಂಘದ ರಾಜ್ ಕುಮಾರ್ ಕಾರ್ನಾಡ್, ಕಲಾ ಸೌರಭದ ಪದ್ಮನಾಭ ಸಸಿಹಿತ್ಲು ಮತ್ತು ಶೇಖರ್ ಸಸಿಹಿತ್ಲು, ಮೋಹನ್ ಬಂಗೇರ, ಪಂಡಿತ್ ನವೀನ್ಚಂದ್ರ ಸನಿಲ್, ಬಿಲ್ಲವ ಜಾಗೃತಿ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ರಾಜು ಶ್ರೀಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಾಫಲ್ಯ ಸೇವಾ ಸಂಘದ ಕೋಶಾಧಿಕಾರಿ ಭಾಸ್ಕರ ಸಪಲಿಗ, ಸಿಎ ಸುಧೀರ್ ಶೆಟ್ಟಿ, ವಸಂತ್ ಸುವರ್ಣ, ಅಮೂಲ್ಯ ಪತ್ರಿಕೆಯ ಉಪ ಸಂಪಾದಕ ಶಂಕರ್ ವೈ. ಮೂಲ್ಯ, ತೀಯಾ ಬೆಳಕು ಸಂಪಾದಕ ಶ್ರೀಧರ್, ಪದ್ಮಶಾಲಿ ಸಮಾಜದ ಎರ್ಮಾಳ್ ಚಂದ್ರಶೇಖರ್ ಶೆಟ್ಟಿಗಾರ್, ಡಿ. ಎನ್. ಅಮೀನ್, ಕುಲಾಲ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಮತಿ ಬಂಜನ್, ಕಾರ್ಯಾಧ್ಯಕ್ಷೆ ಮಮತಾ ಗುಜರನ್ ನುಡಿನಮನ ಸಲ್ಲಿಸಿದರು.
ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಿ. ಕೆ. ಸಾಲ್ಯಾನ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ದೇವದಾಸ್ ಸಾಲ್ಯಾನ್ ಅವರು ಪಿ. ಕೆ. ಸಾಲ್ಯಾನ್ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.
———————
ಬಹುಕಾಲದಿಂದ ಅನ್ಯೋನ್ಯ ಸಂಬಂಧವನ್ನು ಹೊಂದಿದವರು ಪಿ. ಕೆ. ಸಾಲ್ಯಾನ್. ಬಂಟರ ಸಂಘದ ಮುದ್ರಣದ ಕಾರ್ಯವನ್ನು ನಡೆಸುತ್ತಿದ್ದ ಅವರು ಸಮಯಪ್ರಜ್ಞೆಗೆ ಹೆಸರಾಗಿದ್ದರು. ಪರಿಶ್ರಮ, ಶ್ರದ್ಧೆಯಿಂದ ಅಚ್ಚುಕಟ್ಟಾಗಿ ತಮಗೆ ನೀಡಿದ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಅವರ ಅಗಲುವಿಕೆಯಿಂದ ನನ್ನ ಹತ್ತಿರದ ಬಂಧುವೊಬ್ಬರನ್ನು ಕಳೆದುಕೊಂಡಂತಾಗಿದೆ
– ಎಂ. ಡಿ. ಶೆಟ್ಟಿ (ನಗರದ ಹಿರಿಯ ಕನ್ನಡಿಗ).
ಪಿ. ಕೆ. ಸಾಲ್ಯಾನ್ ಅವರನ್ನು ಕಳೆದುಕೊಂಡ ಕುಲಾಲ ಸಮಾಜ ದುಃಖ ಸಾಗರದಲ್ಲಿ ಮುಳುಗಿದೆ. ಸಮಾಜ ಮತ್ತು ಸಂಘವನ್ನು ಸಮರ್ಥವಾಗಿ ಮುನ್ನಡೆಸಿದ ಅವರು ತಮ್ಮ ಜೀವನವನ್ನೇ ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಕನಸಿನ ಕೂಸಾದ ಭವ್ಯ ಕುಲಾಲ ಭವನದ ಯೋಜನೆ ಮಂಗಳೂರಿನಲ್ಲಿ ಸಾಕಾರಗೊಳ್ಳಲಿದೆ. ನನ್ನ ಮಾತಾ-ಪಿತರು ನನ್ನ ಸಮಾಜ ಸೇವೆಗೆ ಪ್ರೇರಣೆಯಾಗದಿದ್ದರೂ, ಪಿ. ಕೆ. ಸಾಲ್ಯಾನ್ ಅವರು ನನಗೆ ಆದರ್ಶರಾದರು. ಅವರ ಆಜ್ಞೆಯಂತೆ ಅಧ್ಯಕ್ಷ ಪದವಿಯನ್ನು ಪಡೆದೆ. ಅವರ ಆದರ್ಶ ತತ್ವಗಳಿಂದ ಸಮಾಜವನ್ನು, ಸಂಘವನ್ನು ಮುನ್ನಡೆಸುವ ಅನಿವಾರ್ಯತೆ ನಮ್ಮ ಮೇಲಿದೆ
– ಗಿರೀಶ್ ಬಿ. ಸಾಲ್ಯಾನ್
(ಅಧ್ಯಕ್ಷರು: ಕುಲಾಲ ಸಂಘ ಮುಂಬಯಿ).
ನನ್ನ ಮಟ್ಟಿಗೆ ಪಿ. ಕೆ. ಸಾಲ್ಯಾನ್ ಎಂದರೆ ಪ್ರೀತಿಯ ಕನ್ನಡಿಗ. ಇಂತಹ ಗೆಳೆಯನನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು. ಅವರು ನಮ್ಮಿಂದ ದೂರವಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನತನವನ್ನು ಬದಿಗಿಟ್ಟುಕೊಂಡು ಎಲ್ಲ ಸಮುದಾಯದೊಂದಿಗೆ ಬೆರೆತವರು
– ಡಾ| ಮಂಜುನಾಥ್
(ಟ್ರಸ್ಟಿ: ಎನ್ಕೆಇಎಸ್ ಶಾಲೆ ವಡಾಲ)