ಮೈಸೂರು : ಕುಂಬಾರ ಸಮಾಜ ಎ.ವರ್ಗಕ್ಕೆ ಸೇರಿದ್ದರೂ ಸಹ ತಾಲೂಕಿನಲ್ಲಿ ಸುಮಾರು ಐವತ್ತು ಸಾವಿರ ಮತದಾರರನ್ನು ಹೊಂದಿರುವ ಕುರುಬ ಸಮಾಜದ ವಿರುದ್ಧ ಸ್ಫರ್ಧೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಪುರಸಭೆ ಹಾಗೂ ತಾಲೂಕು ಕುಂಬಾರರ ಸಂಘದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರ ಈಗಾಗಲೇ ಜಾತಿ ಸಮೀಕ್ಷೆ ನಡೆಸಿದ್ದು, ಇದು ಪ್ರಕಟಗೊಂಡ ನಂತರ ಜಾತಿವಾರು ಒಳ ಮೀಸಲಾತಿ ಜಾರಿಗೆ ತಂದು ಸೂಕ್ಷ್ಮಾತಿಸೂಕ್ಷ್ಮ ಸಮಾಜಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಬೇಕು. ಆಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಹನೀಯರ ಜಯಂತಿ ಆಚರಣೆಗಳಿಂದ ಸಮಾಜಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲ. ಜಯಂತಿಯ ದಿನದಂದು ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದೆ ಜನರ ನಿಂದನೆಗೆ ಒಳಗಾಗುತ್ತೇವೆ. ಅದಕ್ಕಾಗಿ ಸರ್ಕಾರ ಎಲ್ಲ ಮಹನೀಯರ ಜಯಂತಿಗಳನ್ನು ವರ್ಷದ ಒಂದು ದಿನ ಮಾತ್ರ ಒಟ್ಟಿಗೆ ಆಚರಣೆ ಮಾಡಬೇಕು ಎಂದ ಶಾಸಕರು ಪ್ರತಿಯೊಂದು ಸಮಾಜದ ಜಯಂತಿ ದಿನದಂದು ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಎರಡು ಘಂಟೆ ಹೆಚ್ಚು ಅವಧಿ ಸಾರ್ವಜನಿಕರ ಕೆಲಸವನ್ನು ಮಾಡಿದಾಗ ಜಯಂತಿಗಳಿಗೆ ನಿಜವಾದ ಅರ್ಥ ಬರಲಿದೆ ಎಂದು ತಿಳಿಸಿದರು.
ನನ್ನ ಅಧಿಕಾರವಧಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಮಾಜಗಳ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದು, ವಾಲ್ಮೀಕಿ, ಸವಿತಾ, ಮಡಿವಾಳ, ವಿಶ್ವಕರ್ಮ, ಗಾಣಿಗ ಮತ್ತು ಕುಂಬಾರ ಸಮಾಜದ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ತಲಾ 50 ಲಕ್ಷ ರೂಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದು, 2015ರ ಆಗಸ್ಟ್ 5ರಂದು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಸ್ವಾಮೀಜಿಯಾದವರು ಮಠಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿದ್ದು, ಕುಂಬಾರರ ಸ್ವಾಮಿಗಳು ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಮುಂದಿನ ವರ್ಷ ಜಯಂತಿಯನ್ನು ಸರಳವಾಗಿ ಆಚರಿಸಲು ಸಮಾಜದ ಮುಖಂಡರು ಒಪ್ಪಿದ್ದೆ ಆದಲ್ಲಿ ಜಯಂತಿಗೆ ಖರ್ಚಾಗುವ ಹಣದ ಜತೆಗೆ ನನ್ನ ವೈಯಕ್ತಿಕ ಹಣವನ್ನು ಸೇರಿಸಿ ಸ್ವಾಮೀಜಿಗಳಿಗೆ ಹೊಸ ಕಾರು ಕೊಡಿಸಲಾಗುತ್ತದೆ ಎಂದು ಶಾಸಕರು ಹೇಳಿದರು.
ಇದಕ್ಕೂ ಮೊದಲು ಕೃಷ್ಣರಾಜೇಂದ್ರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಿಂದ ಪುರಸಭಾ ಬಯಲು ರಂಗ ಮಂದಿರದವರೆಗೆ ಸಂತ ಕವಿ ಸರ್ವಜ್ಞರ ಭಾವಚಿತ್ರವನ್ನು ಕುಂಭ ಕಳಸ ಮತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕುಂಬಾರ ಗುರು ಪೀಠದ ಬಸವ ಕುಂಬಾರ ಗುಂಡಯ್ಯಸ್ವಾಮೀಜಿ, ಸಾಹಿತಿ ಮಂಜಪ್ಪ ಕುಂಬಾರ, ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಎಸ್.ಪ್ರಕಾಶ್, ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ಡಾ.ಎಂ.ಪಿ.ವರ್ಷ ಮಾತನಾಡಿದರು.
ಪುರಸಭಾಧ್ಯಕ್ಷೆ ಪಾರ್ವತಿ ನಾಗರಾಜು, ಸದಸ್ಯರಾದ ಕೆ.ಎಲ್.ಕುಮಾರ್, ಕೆ.ಎಲ್.ರಾಜೇಶ್, ಮಾಜಿ ಸದಸ್ಯ ದಾಸಶೆಟ್ಟಿಶ್ರೀನಿವಾಸ್, ತಾ.ಪಂ. ಸದಸ್ಯೆ ಶೋಭ, ಸರ್ವಜ್ಞ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಬಸವರಾಜು, ಸದಸ್ಯ ಲ್ಯಾಬ್ಪ್ರಸನ್ನ, ಗ್ರಾ.ಪಂ. ಸದಸ್ಯರಾದ ಸಣ್ಣಮ್ಮ, ವಿಷ್ಣು, ಮಂಜು, ತಹಸೀಲ್ದಾರ್ ಜಿ.ಹೆಚ್.ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಚಂದ್ರು, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ ಇದ್ದರು.