ಸರಿ ಸುಮಾರು 30 ವರ್ಷಗಳ ಹಿಂದಿನ ಮಾತಿದು. ತುರ್ತು ಪರಿಸ್ಥಿತಿಯ ಕರಾಳ ದಿನಗಳಿಂದ ಹಳ್ಳಿಗಳಲ್ಲಿ ಜನರು ನಿಧಾನ ಹೊರಬರುತ್ತಿದ್ದರು. ಬಡವರ ಗುಡಿಸಲುಗಳಿಂದಲೂ ಹರಿದ ಚಡ್ಡಿಯ ಗೊಂದಲದ ಮನಸ್ಥಿತಿಯ ಮಕ್ಕಳೂ ಸಹಾ ಶಾಲೆಯತ್ತ ಮುಖ ಮಾಡಿದ ದಿನಗಳು..
1986 ಜುಲೈ ತಿಂಗಳ ಒಂದು ದಿನ. ನಾನು ಕೇವಲ ಅಣ್ಣಯ್ಯನಾಗಿದ್ದೆ . ಈಗಿನಂತೆ ಹೆಸರಿನ ಹಿಂದೆ ಡಾಕ್ಟರ್ ಇರಲಿಲ್ಲ, ಮುಂದೆ ಕುಲಾಲ್ ಇರಲಿಲ್ಲ. ಜಾತಿಯ ಬಗ್ಗೆ ಈಗಿನಷ್ಟು ಕುತೂಹಲ ಕಾಳಜಿ ಇರಲಿಲ್ಲ. ಮನದಲ್ಲಿ ಇದ್ದದ್ದು ಒಂದು ಮಾತ್ರ.. ಓದಬೇಕು.. ಓದಿ ಹೋರಾಡಬೇಕು, ಹೋರಾಡಿ ನಮ್ಮಿಂದ ಕಸಿದುಕೊಂಡ ಗದ್ದೆಯನ್ನ ವಾಪಸು ಪಡೆಯಬೇಕು. ಆಗ ಕೋಟ ಕುಂದಾಪುರಗಳಲ್ಲಿ ಬಡವರ ಪರವಾಗಿ, ಕಾಂಗ್ರೆಸ್ ವಿರುದ್ಧವಾಗಿ ಹೋರಾಡುತ್ತಿದ್ದ ಕಮ್ಯೂನಿಸ್ಟ್ ಲೀಡರುಗಳೇ ನನಗೆ ನಾಯಕರು. ಚಂದಮಾಮ, ಬಾಲಮಿತ್ರ, ಬೊಂಬೆಮನೆಯಿಂದ ಪ್ರಜಾಮತದಂತಹ ಪತ್ರಿಕೆಗಳತ್ತ, ಕಾರಂತರ ಚಿಂತನೆಗಳಿಗೆ ಮನವಾಲಿತ್ತು. ಯುವಕ ಮಂಡಲ ಸಂಘ ಶಾಖೆ ಹೊರತುಪಡಿಸಿ ಜಾತಿ ಸಂಘಗಳ ಬಗ್ಗೆ ಲವಲೇಶವೂ ಗೋತ್ತಿರಲಿಲ್ಲ ..!
ಹಳ್ಳಿಯ ಶಾಲೆಯಲ್ಲಿ ದೇವಸ್ಥಾನದ ಚಾವಡಿಯಲ್ಲಿ ನಾವು ಓದುತ್ತಿದ್ದೆವು. ದೂರದ ದೊಡ್ಡಪ್ಪ ಸಂಬಂಧಿಯವರ ಮಗ ಆನಂದ ಕುಂಬಾರ ಅದೇ ಹೈಸ್ಕೂಲ್ ನಲ್ಲಿ ಓದಿ ಮಂಗಳೂರಿನಲ್ಲಿ ಓದುತ್ತಿದ್ದರು. ಕುಂದಾಪುರದಲ್ಲಿ ಡಾ ಎಮ್ ವಿ ಕುಲಾಲ್ ಎಂಬ ವೈದ್ಯರಿದ್ದಾರೆ ಎಂಬ ಅರಿವಿತ್ತು. ಇಷ್ಟು ಬಿಟ್ಟರೆ ಜಾತಿಯ ಜನಗಳ ಬಗ್ಗೆ ಅಷ್ಟೇನೂ ನೀರೀಕ್ಷೆ ಗಳಿರಲಿಲ್ಲ. ಜಾತಿಯ ಸಂಘಟನೆಗಳ ಬಗ್ಗೆಯೂ ತಿಳಿದಿರಲಿಲ್ಲ. ಆದರೆ ಬಂಡಾಯ ಸಾಹಿತ್ಯ, ಕ್ರಾಂತಿಕಾರಿ ಭಾಷಣ ನೇರಾನೇರ ಚರ್ಚೆ ನನ್ನನ್ನ ಹೆಚ್ಚು ಆಕರ್ಷಿಸುತ್ತಿತ್ತು. ಕಾರಣ 1982 ಏಷ್ಯಾಡ್ ಬೇಕೋ ಬೇಡವೋ ಎಂಬ ಭಾಷಣದಲ್ಲಿ ಬಡವರ ರಾಷ್ಟ್ರವಾದ ನಮಗೆ ಬೇಡವಿತ್ತು ಎಂದು ವ್ಯವಸ್ಥೆ ವಿರುದ್ಧವಾಗಿ ಮಾತಾಡುವ ಅವಕಾಶ 1982ರಲ್ಲಿ ಕೋಟೇಶ್ವರ ಕುಂದಾಪುರದ ಶಾಲೆಗಲ್ಲಿ ಮಾಸಿದ ಬಟ್ಟೆಯ ಹುಡುಗನಾಗಿದ್ದ ನನಗೆ ವಾದಿಸಲು ಅವಕಾಶ ಸಿಕ್ಕಿತು. ಬಹುಮಾನದ ಜೊತೆಗೆ ವ್ಯವಸ್ಥೆಗೆ ವಿರುದ್ಧವಾಗಿ ಮಾತಾಡುವ ಧೈರ್ಯವೂ ಬಂದಿತ್ತು.
1986ರಲ್ಲಿ ದೇವಸ್ಥಾನದ ಚಾವಡಿಯಲ್ಲಿ ಹತ್ತನೇ ತರಗತಿಗೆ ಸರಿಯಾದ ಶಿಕ್ಷಕರಿಲ್ಲದ ಶಾಲೆಗೇ ಪ್ರಥಮನಾಗಿ ಪಾಸಾದಾಗ ಬದುಕಿಗೆ ಗುರಿ ಇರಲಿಲ್ಲ. ಆದರೆ ಹಾಸ್ಟೆಲ್ ನಲ್ಲಿದ್ದ ಬಾಲಕೃಷ್ಣ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ(ಈಗ ಒಬ್ಬರು ಸರ್ಜನ್, ಇನ್ನೊಬ್ಬರು ಬೊಸ್ಚಕೋದಲ್ಲಿ ಇಂಜಿನೀಯರ್ ) ಎಂಬಿಬ್ಬರು ದೂರದ ಕುಂದಾಪುರದ ಭಂಡಾರ್ಕಾರ್ಸ್ ಗೆ ಪಿಯುಸಿ ಗೆ ಸೇರಿದ್ದು, ವಿಜ್ಞಾನ ವಿಷಯ ತೆಗೆದುಕೊಂಡದ್ದು ತಿಳಿದಿತ್ತು. ಹಾಗೂ ಹೀಗೂ ಮಾಡಿ ಭಂಡಾರ್ಕಾರ್ಸ್ ಗೆ ಸೇರಿ science ತೆಗೆದುಕೊಂಡು ಸರಕಾರೀ ಹಾಸ್ಟೆಲ್ ಸೇರಿದ್ದೂ ಆಯಿತು. ಬಂಟ ವಿದ್ಯಾರ್ಥಿಗಳಿಗೆ ಸಂಘಗಳಿಂದ ವಿದ್ಯಾರ್ಥಿ ವೇತನ ಸಿಗುವುದನ್ನ ಕಂಡು ಮಂಗಳೂರಿನ ಕುಲಾಲ್ ಸಂಘಕ್ಕೆ ಅರ್ಜಿ ಹಾಕಿದ್ದೆ. Scholarship ಸಿಕ್ಕಿತ್ತು.
40 ರೂಪಾಯಿಯ scholarship ಪಡೆಯಲು ದೂರದ ಕುಂದಾಪುರದಿಂದ 10 ರೂಪಾಯಿ ಖರ್ಚು ಮಾಡಿ ಬಂದಿದ್ದೆ. ಅಲ್ಲಿಂದ ಬದುಕು ಮಗ್ಗಲು ಬದಲಾಯಿಸಿತ್ತು. ಜಾತಿ ಸಂಘಟನೆಯ ಬಗ್ಗೆ ಪ್ರೀತಿ, ಹೋರಾಟದ ಬಗ್ಗೆ ವಿಶೇಷ ಒಲವು ಮೂಡಿತ್ತು .
ಕ್ರಾಂತಿಕಾರಿ ನಾಯಕರಾದ ಜನತಾ ಗೋಪಾಲ್, ಕೃಷ್ಣ ಸ್ನಫ್ ವರ್ಕ್ಸ್ ನ ಸದಾನಂದರ ಜೊತೆ ಸಾಮಾಜಿಕ ಹೋರಾಟಗಾರ ಅಮ್ಮೆoಬಳ ಬಾಳಪ್ಪ, ಸಹಕಾರಿ ಧುರೀಣ ಬಿ ಎಸ್ ಕುಲಾಲ್ ಅವರ ಪರಿಚಯವಾಗಿತ್ತು .
ಡಾ ಎಮ್. ವಿ. ಕುಲಾಲ್ ರವರ ಕೈಯಿಂದ ವಿದ್ಯಾರ್ಥಿ ವೇತನ ಪಡೆದಾಗ ಸ್ವರ್ಗವೇ ಕೈಗೆಟುಕಿದಂತಿತ್ತು . ಅವರು ಭಾಷಣದಲ್ಲಿ ದೂರದೂರಿನ ವಿದ್ಯಾರ್ಥಿಗಳು ಬಂದ ಬಗ್ಗೆ ಖುಷಿಯಿಂದ ಮಾತಾಡಿದರು. ಹತ್ತಿರದವರು ಬಾರದ ಬಗ್ಗೆ ಖೇದ ವ್ಯಕ್ತಪಡಿಸಿದಾಗ ದೂರದಿಂದ ಬಂದ ನನಗೆ ಒಳಗೊಳಗೇ ಖುಷಿಯಾಗಿತ್ತು .
ಊಟದ ವೇಳೆಯಲ್ಲಿ ಬಾಳಪ್ಪರು ನಮ್ಮೊಡನೆ ಮಾತಾಡಿದರು. ಕೆಲವು ಪತ್ರಿಕೆಯನ್ನ ಓದಲು ಕೊಟ್ಟರು. ಆ ದಿನಗಳಲ್ಲಿ ಉತ್ತುಂಗದಲ್ಲಿದ್ದ ಮಂಡಲ್ ಕಮಿಷನ್ ಹೋರಾಟದ ಬಗ್ಗೆ ಹೇಳಿದರು. ಬಡವರಿಗೆ-ಹಿಂದುಳಿದವರಿಗೆ ಅದು ಆಶಾ ಕಿರಣ ವಾಗಲಿದೆ, ನೀವೆಲ್ಲಾ ಹೋರಾಟಕ್ಕೆ ಧುಮುಕಿ ವಿಪಿ ಸಿಂಗ್ ಮುಂತಾದವರಿಗೆ ಬೆಂಬಲ ಕೊಡಿ ಅಂದರು. ನಮ್ಮನ್ನು ಹುರಿದುಂಬಿಸಿ ತಮ್ಮ ತಮ್ಮ ಕಾಲೇಜ್ ಗಳಲ್ಲಿ ಜನಜಾಗೃತಿ ಮೂಡಿಸಲು ಅಂಚೆ ಕಾರ್ಡ್ ಚಳುವಳಿ ಮಾಡುವಂತೆ ಹೇಳಿದರು. ಕಾರ್ಡ್ ನಲ್ಲಿ ಹೇಗೆ ಬರೆಯಬೇಕು.. ಏನನ್ನ ಬರೆಯ ಬೇಕು ಎಂಬುದನ್ನ ಬಾಳಪ್ಪರ ಜೊತೆಯಲ್ಲಿದ್ದ ಇನ್ನೊಬ್ಬ ಚುರುಕು ಕಣ್ಣುಗಳ ಕೃಶ ಶರೀರದ ಯುವಕ ಬರೆದು ಹತ್ತು ಪೈಸೆಯ ಹತ್ತು ಕಾರ್ಡ್ ಗಳನ್ನ ನನಗೆ ಕೊಟ್ಟು ಅದನ್ನ ಪರಿಚಯದವರಿಗೆ ಪೋಸ್ಟ್ ಮಾಡಲು ಹೇಳಿದರು. ಆ ಯುವಕ ಮತ್ಯಾರು ಅಲ್ಲ ದೈಪಲ ಮಾಧವ ಕುಲಾಲ್ ಅರ್ಥಾತ್ ಡಿ ಎಂ ಕುಲಾಲ್ ಬಂಟ್ವಾಳ. ಓಲ್ಡ್ ಕೆಂಟ್ ರಸ್ತೆಯ ಕುಲಾಲ ಸಂಘಕ್ಕೆ RTO ಪಕ್ಕದಲ್ಲೇ ರಸ್ತೆ ಇತ್ತು .ಸಂಘದ ಎದುರೇ employment ಆಫೀಸ್ ಇತ್ತು . ಸಂಘದಲ್ಲಿ ನಿಂತು ನೋಡಿದ್ರೆ ನೆಹರು ಮೈದಾನದಲ್ಲಿ ಆಟ ಆಡುವವರು ಕಾಣುತ್ತಿದ್ದರು. ಸರಕಾರಿ ಕಾಲೇಜ್ ಹಾಗು ಟೌನ್ ಹಾಲ್ ನಡುವೆ ಗಡಿಯಾರ ಗೋಪುರದ ಬಳಿ ದೋಣಿಯಾಕಾರದ ಬಸ್ಸ್ಟ್ಯಾಂಡ್ ಇತ್ತು . ನಾವು ನಡೆದುಕೊಂಡೇ ಸದಾನಂದರ ಅಂಗಡಿಯ ಮೂಲಕ ಬಸ್ಸ್ಟ್ಯಾಂಡ್ ತಲುಪಿ ಊರನ್ನ ಸೇರಿಕೊಂಡೆವು. ಅಂದಿನಿಂದ ಜಾತಿ ಸಂಘ ಹಾಗು ಹೋರಾಟದ ಬಗ್ಗೆ ಕಾಳಜಿ ಮೂಡಿತು.
ಬದುಕು ಬದಲಾಗಿತ್ತು.. ಪಿಯುಸಿ ನಂತರ MBBS ಗೆ ಸೇರಲಾಗಲಿಲ್ಲ. ಸರಕಾರೀ ಹಾಸ್ಟೆಲ್ ಕಟ್ಟಡ ಕುಸಿದಿದ್ದರಿಂದ ಹಾಸ್ಟೆಲ್ ಆರಂಭವಾಗಿದ್ದು ತಡವಾಗಿತ್ತು. ಹೀಗಾಗಿ ಒಂದು ವರ್ಷ ಕಾಲೇಜಿಗೆ ಹೋಗಲಾಗದೆ ಗದ್ದೆ-ತೋಟದ ಕೆಲಸದ ನಡುವೆಯೂ ಸಾಮಾಜಿಕ ಹೋರಾಟ ಕಾಡುತ್ತಲೇ ಇತ್ತು. ಮತ್ತೆ ಕಾಲೇಜಿಗೆ ಸೇರಿ ಹಾಸ್ಟೆಲ್ ಸೀಟ್ ಪಡೆದೆ.
ಕುಲಾಲ್ ಸಂಘ ದ scholarshipನಿಂದ ಬಾಳಪ್ಪ ಹಾಗು ಡಿ ಎಮ್ ಕುಲಾಲ್ ಮತ್ತಿತರರ ನಿರಂತರ ಸಂಪರ್ಕವಾಯಿತು. B.sc ಪದವಿ ಬಳಿಕ MBBS ಹೆಸರಲ್ಲಿ ಮೈಸೂರು ಮಣಿಪಾಲಗಳನ್ನ ಸುತ್ತಿ ಪುನಃ ಕೆಎಂಸಿ ಮಂಗಳೂರಿಗೆ ಬಂದು ಅಶೋಕನಗರದ ಸರಕಾರೀ ಹಾಸ್ಟೆಲ್ ಗೆ ಸೀಟ್ ಸಿಗುವವರೆಗೆ ನೆಲೆ ನಿಲ್ಲಲು ಸ್ಥಳ ಹುಡುಕುತ್ತ ಪುನಃ ಬಂದದ್ದು ಅದೇ ಓಲ್ಡ್ ಕೆಂಟ್ ರಸ್ತೆಯ ಕುಲಾಲ್ ಸಂಘಕ್ಕೆ !
ಬಾಳಪ್ಪ, ವಿಶ್ವನಾಥ್, ದಾಮೋದರ, ಚಂದ್ರಶೇಖರ, ಪೊಲೀಸ್ ಕೃಷ್ಣಣ್ಣರವರ ಮೂಲಕ ಮಂಗಳಾದೇವಿಯ ಕಟ್ಟಡದಲ್ಲಿ ನಿಂತು 2 ತಿಂಗಳು ಅತ್ತಾವರದ ಕೆಎಂಸಿ ಕಾಲೇಜ್ ಗೆ ಹೋಗುವಾಗ ಪೊಲೀಸ್ ಕೃಷ್ಣಣ್ಣ ಅವರು ಕುಲಾಲ್ ಭವನದ ಮೇಲ್ವಿಚಾರಕರಾಗಿದ್ದರು. ಈಗ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ಇರುವ ನವೀನ್ ಅಮ್ಮೆoಬಲ ನನ್ನ ರೂಮ್ ಮೇಟ್ ಆಗಿದ್ದರು. ಬಳಿಕ ಅಶೋಕ್ ನಗರ ಸರಕಾರೀ ಹಾಸ್ಟೆಲ್ ನಲ್ಲಿ ಸೀಟ್ ಸಿಕ್ಕಿತ್ತು. ಮಂಗಳಾದೇವಿ ಕುಲಾಲ್ ಭವನ ಬಿಡುವ ಹೊತ್ತಿಗೆ ಬಾಳಪ್ಪನವರು ಡಿ ಎಂ ಕುಲಾಲ್ ರವರನ್ನ ಮಂಗಳಾದೇವಿ ಕುಲಾಲ್ ಭವನದ ಖಾಲಿಯಾಗಿದ್ದ ಮೇಲ್ವಿಚಾರಕ ಸ್ಥಾನಕ್ಕೆ ನೇಮಿಸಿದ್ದರ. ಇದರಿಂದಾಗಿ ಮತ್ತೊಮ್ಮೆ ಡಿ ಎಮ್ ಕುಲಾಲ್ ಸಂಪರ್ಕ ಬಂದರು . ಬಾಳಪ್ಪ, ಜನತಾ ಗೋಪಾಲ, ಸದಾನಂದ, ದೇವಪ್ಪ, ಉರ್ವ ವಿಶ್ವನಾಥ್, incometax ವಿಶ್ವನಾಥ್, ದಾಮೋದರ, ಗೋವಿಂದ, ದೂಮಪ್ಪರವರ ಒಡನಾಟದಿಂದ ಸಮಾಜವಾದದಿಂದ ಬಂದ ನಾನು ಕುಲಾಲ್ ಸಮುದಾಯದ ಪರವಾಗಿ ದುಡಿಯತೊಡಗಿದೆ . ಕುಲಾಲ ಸಂಘ ಮುಂಬೈ, ಬೆಂಗಳೂರು, ಬಂಟ್ವಾಳ, ಕೊಲ್ಯ, ಕುಂದಾಪುರದವರ ಸಹಾಯ ಪಡೆದಿದ್ದ ನಾನು ನನಗರಿವಿಲ್ಲದೆ ಜಾತಿಯ ಹೋರಾಟ ಚಿಂತನೆ ಸಭೆ ಚರ್ಚೆ ಗಳಲ್ಲಿ ಭಾಗವಹಿಸಿದ್ದೆ. 1995 ರ ಪಕ್ಷಿಕೆರೆಯ ಕುಲಾಲ ಸಮ್ಮೇಳನದಿಂದ ಪ್ರೇರಿತನಾಗಿ ನನ್ನ ಹೆಸರನ್ನ ಅಣ್ಣಯ್ಯ ಕುಲಾಲ್ ಉಳ್ತೂರು ಅಂತ ಬದಲಾಯಿಸಿಕೊಂಡು ಜಾತಿ ಹಾಗು ಊರನ್ನು ಸೇರಿಸಿಕೊಂಡೆ .
ಅತೀ ಚಿಕ್ಕ ಪ್ರಾಯದಲ್ಲಿ ಕುಲಾಲ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ಸೇರಿ, 2002 ರಲ್ಲಿ ಸಂಘಟನಾ ಕಾರ್ಯದರ್ಶಿ ಹಾಗು 2003 ರಲ್ಲಿ ಪ್ರಧಾನ ಕಾರ್ಯದರ್ಶಿ ಆದೆ. ದೇವಿ ದೇವಸ್ಥಾನ, ವೀರನಾರಾಯಣ ದೇವಸ್ಥಾನಗಳಲ್ಲಿ ಅಭಿವೃದ್ಧಿಯಲ್ಲಿ ತೊಡಗಿಕೊಂಡು ಕುಲಾಲ ಸಂಘದ 75 ವರ್ಷಗಳ ಆಚರಣೆಯಾದ ಬಳಿಕ ಮತ್ತೆ ಮನಸ್ಸು ಸಾಮಾಜಿಕ ಹೋರಾಟದತ್ತ ಹೊರಳಿತು. ಕನ್ನಡ ಪರ ಹೋರಾಟ, ರಸ್ತೆ-ರೈಲು-ಮೂಲಭೂತ ಹೋರಾಟ-ಜೈಲು-ಕೇಸು ಅಂತ ಜಾತಿ ಸಂಘದಿಂದ ದೂರವಾಗಿದ್ದೆ .
ಮತ್ತೆ 2008 ರಲ್ಲಿ ರಾಜ್ಯ ಮಟ್ಟದ ಕುಂಬಾರ ಸಂಘಟನೆ, ಗುರುಪೀಠಗಳ ವಿಷಯ ಬಂದಾಗ ಬಾಳೋಡಿ ಮಹಾಬಲ ಹಾಂಡ ಮತ್ತೆ ನನ್ನನ್ನು ಸಂಘಕ್ಕೆ ಎಳೆದು ತಂದರು. ರಾಜ್ಯ ಕುಂಬಾರ ಸಂಘ, ಪ್ರಜಾಪತಿ ಕುಂಬಾರ ಸಂಘ, ಕುಲಾಲ ಯುವವೇದಿಕೆ ಎಂದು ಇಲ್ಲಿಯವರೆಗೆ ನಡೆದು ಬಂದೆ . ಆದರೆ ನನ್ನ ಮನಸ್ಸು ಮಿಡಿಯುವುದು ಜಾತಿ-ಧರ್ಮ ಮೀರಿ ನಿಂತ ಸಾಮಾಜಿಕ ಹೋರಾಟ ಹಾಗು ಸಮಸ್ಯೆಗಳಿಗೆ ಜಾಸ್ತಿ. ಕನ್ನಡಪರ ಹೋರಾಟ, ಪರಿಸರ ಹೋರಾಟ, ವೈದ್ಯಕೀಯ ಜಾಗೃತಿ ಬರಹ, ಭಾಷಣ, ಸಾಹಿತ್ಯ, ಚರ್ಚೆಗಳು ನನ್ನ ಬದುಕಿನ ಬೇರ್ಪಡಿಸಲಾಗದ ಭಾಗಗಳು. ಜಾತಿ ಆಧಾರಿತ ಹೋರಾಟಗಳಿಗಿಂತ ಸಾಮಾಜಿಕ ಹೋರಾಟ ಹೆಚ್ಚು ತೃಪ್ತಿ ಕೊಡುತ್ತದೆ.
ಕುಂದಾಪುರದಂತಹ ರಾಜಕೀಯದ ಕುರುಕ್ಷೇತ್ರದಲ್ಲಿ ರಾಜಕೀಯವನ್ನ ಅತೀ ಹತ್ತಿರದಿಂದ ಕಂಡು ಬಂದ ನನಗೆ ರಾಜಕೀಯ ಅಂದ್ರೆ ಅದೇನೋ ಖುಷಿ. ಕುಂಬಾರ ಸಮುದಾಯದ ಮಂತ್ರಿ ಸಂಸದರನ್ನ ಕಾಣಬೇಕು, ಬಡ ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನೈಜ ತುಡಿತದಿಂದ ಕುಂಬಾರ ಸಂಘಟನೆಯಲ್ಲಿ ಇದ್ದೇನೆ ಹೊರತು, ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಕುಲಾಲ ಸಮಾಜವನ್ನ ಗುರುತಿಸಲಿ ಎಂಬ ಕಾರಣಕ್ಕೆ ನನ್ನ ಕ್ಲಿನಿಕ್ ಗೆ `ಕುಲಾಲ್ ಹೆಲ್ತ್ ಸೆಂಟರ್ ‘ ಎಂದು ಹೆಸರಿಟ್ಟು ಹುಂಬ ಧೈರ್ಯ ತೋರಿದೆ. ಮಂಗಳೂರಲ್ಲಿ ಶೆಟ್ಟರು, ಭಟ್ಟರು, ಕೊಂಕಣಿಯವರನ್ನ ಬಿಟ್ಟರೆ ಬೇರೆ ಜಾತಿಯವರಿಗೆ ಜಾತಿ ಆಧಾರಿತ ವೈದ್ಯಕೀಯ ವೃತ್ತಿ ಮಾಡಲು ಸಾಧ್ಯವಿಲ್ಲ ಎಂಬ ಅರಿವಿದ್ದೂ ಸಹಾ ಈ ಸಾಹಸ.
ನನ್ನ ಮದುವೆ ಕೂಡಾ ಕುಲಾಲ ಭವನದಲ್ಲೇ ಆಗಿತ್ತು. ಆದರೂ ಸಹ ನನಗೆ ಜಾತಿ ಗಿಂತ ಸಾಮಾಜಿಕ ಸಂಘಟನೆ ಹೆಚ್ಚು ಮುದಕೊಡುತ್ತದೆ. ಹುಟ್ಟೂರಿಗೆ, ಹುಟ್ಟಿದ ಜಾತಿಯ ಋಣ ತೀರಿಸುವುದು ಬದುಕಿನ ಭಾಗ. ಹಾಗಂತ ಜಾತಿಯೇ ಬದುಕಾಗಬಾರದು ಎಂಬುದು ನನ್ನ ದೃಢ ನಿರ್ದಾರ .ಆದರೂ ಸಹಾ ಸಾಮಾಜಿಕ ಹೋರಾಟ, ಕನ್ನಡ ಹೋರಾಟ, ರೈಲ್ವೆ ಹೊರಾಟಗಳ ಜೊತೆ ತೀರಾ ವೈಯಕ್ತಿಕ ಸಂಕಷ್ಟ ಬಂದಾಗ ನನ್ನ ಹೆಗಲಿಗೆ ಹೆಗಲು ಕೊಟ್ಟು ನನ್ನೊಂದಿಗೆ ನಿಲ್ಲುವ ಜಾರ್ಜ್, ಶಶಿಧರ ಶೆಟ್ಟಿ, ಸ್ವರ್ಣಸುಂದರ, ಹಮೀದ್ ಹಸ್ಸನ್ ಸುರೇಶ್ ಪೂಜಾರಿ, ವಿಶ್ವನಾಥ್ ಪೂಜಾರಿ, ಸುರೇಶ್ ಆಚಾರ್ , ಪ್ರವೀಣ್ ಆಚಾರ್, ನಾರಾಯಣ ಬಂಗೇರಾ ಮುಂತಾದವರಲ್ಲಿ ಹೆಚ್ಚಿನವರು ಅನ್ಯ ಜಾತಿಯವರು. ಹಾಗಾಗಿ ನನಗನಿಸುತ್ತೆ ನಾನಿನ್ನೂ ಸಮಾಜವಾದಿ ಸಾಮಾಜಿಕ ಚಿಂತಕನಾಗಿಯೇ ಉಳಿದಿದ್ದೇನೆ ಅಂತ. ಅದನ್ನೇ ನಾನು ಬಯಸುವುದು ಕೂಡಾ…(……ಮುಂದುವರಿಯುವುದು)
ಡಾ. ಅಣ್ಣಯ್ಯ ಕುಲಾಲ್ ಉಳ್ತೂರು


