ಮಂಗಳೂರು : ಮಂಗಳೂರಿನ ಎಂಆರ್’ಪಿಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಾಲ ಸಮುದಾಯದ ಸಮಾನ ಮನಸ್ಕ ಉದ್ಯೋಗಿಗಳ ಸಮಾಜ ಸೇವಾ ಸಂಘಟನೆ ಅಮೂಲ್ಯ ಸೇವಾ ಪ್ರತಿಷ್ಠಾನದ ವತಿಯಿಂದ ೨೦೧೬ ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜುಲೈ ೧೦ರಂದು ಮಂಗಳೂರು ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಮಾತೃಸಂಘದ ಬಿ.ಎಚ್ ಬಂಗೇರ ಸಭಾ ಭವನದಲ್ಲಿ ಸಭಾಭವನದಲ್ಲಿ ನಡೆಯಿತು.
ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಕುಲಾಲ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಹಾಗೂ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಅಮೂಲ್ಯ ಪ್ರತಿಭಾ ಪುರಸ್ಕಾರ -೨೦೧೬ ನೀಡಿ ಅಭಿನಂದಿಸಲಾಯಿತು. ದ ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು. ಮಾತೃ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ್ ಅಳಪೆ, ಅಮೂಲ್ಯ ಪ್ರತಿಷ್ಠಾನದ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿ ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಶ್ರೀ ಸುಧಾಕರ್ ಸಾಲಿಯಾನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಮಾರ್ಗದರ್ಶನ ನೀಡುವಂತಹ ನಿಟ್ಟಿನಲ್ಲಿ ಸಹಾಯವಾಣಿ ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
78 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆ,ಆರ್ಥಿಕ ಪರಿಸ್ಥಿತಿ ಹಾಗೂ ಇತರ ಚಟುವಟಿಕೆಗಳನ್ನು ಗಮನಿಸಿ ವಿದ್ಯಾರ್ಥಿಗಳ ಮನೆಗೆ ತೆರಳಿ ಸಂಗ್ರಹಿಸಿದ ದತ್ತಾಂಶಗಳ ಆಧಾರದ ಮೇಲೆ ಸುಮಾರು 2.5 ಲಕ್ಷದಷ್ಟು ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಶ್ರೀ ಗಣೇಶ್ ಎಂ ಸ್ವಾಗತಿಸಿ, ಅಮೂಲ್ಯ ಸೇವಾ ಪ್ರತಿಷ್ಠಾನ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು ಶ್ರೀ ಭಾಸ್ಕರ್, ಶ್ರೀ ಜಯೇಶ್ ಗೋವಿಂದ್ ಮತ್ತು ಶ್ರೀ ಯೋಗೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಶ್ರೀ ಯಶ್ವರಾಜ್ ಧನ್ಯವಾದ ಅರ್ಪಿಸಿದರು. ಶ್ರೀಮತಿ ಕವಿತಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ : ಸತೀಶ್ ಕುಲಾಲ್ ನಡೂರು