ಬದಿಯಡ್ಕ: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಇನ್ನೊಬ್ಬರು ಮೃತಪಟ್ಟಿದ್ದಾರೆ. ಏತಡ್ಕ ಬಳಿಯ ಆನೆಪಳ್ಳ ನಿವಾಸಿ ಬಾಲಕೃಷ್ಣ ಮೂಲ್ಯ (೭೦) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರಿಗೆ ಹತ್ತು ದಿನಗಳ ಹಿಂದೆ ಜ್ವರ ಬಾಧಿಸಿತ್ತು. ಬದಿಯಡ್ಕದ ಆಸ್ಪತ್ರೆಯಿಂದ ಔಷಧಿ ಪಡೆದರೂ ಗುಣವಾಗದ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರಿಗೆ ಡೆಂಗ್ಯೂ ಜ್ವರ ಬಾಧಿಸಿರುವುದು ಇಲ್ಲಿ ಪತ್ತೆಯಾಗಿದೆ. ಬಳಿಕ ಅವರನ್ನು ಶನಿವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.
ಮೃತರು ಪತ್ನಿ ಕಮಲ, ಮಕ್ಕಳಾದ ರಮೇಶ್ ಟೈಲರ್, ಜಯಂತ, ಸುಗಂಧಿ, ಅಳಿಯ ವಿಶ್ವನಾಥ ಮೊದಲಾದವರನ್ನು ಅಗಲಿದ್ದಾರೆ. ಪಂಚಾಯತ್ ಸದಸ್ಯೆ ಶೈಲಜಾ ಭಟ್ ಸಹಿತ ಹಲವರು ಮೃತರ ಮನೆಗೆ ಭೇಟಿನೀಡಿ ಸಂತಾಪ ಸೂಚಿಸಿದರು. ಏತಡ್ಕ ಬಳಿಯ ಚಾಲಕ್ಕೋಡು ನಿವಾಸಿ ಮಹಿಳೆಯೊಬ್ಬರಿಗೂ ಡೆಂಗ ಜ್ವರ ಬಾಧಿಸಿದ್ದು ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿವಿಧೆಡೆ ಡೆಂಗ್ಯೂ ಜ್ವರ ಪಸರಿಸುತ್ತಿದ್ದು ಕಳೆದ ಒಂದು ವಾರದಲ್ಲಿ ಜ್ವರ ಬಾಧಿಸಿ ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ತಲುಪಿದವರ ಪೈಕಿ ೧೫ ಮಂದಿಗೆ ಡೆಂಗ್ಯೂ ಜ್ವರ ಬಾಧಿಸಿರುವುದು ಪತ್ತೆಯಾಗಿದೆ. ಅಲ್ಲದೆ ೪೦೦ಕ್ಕೂ ಹೆಚ್ಚು ಮಂದಿಗೆ ವಿವಿಧ ಜ್ವರಬಾಧಿಸಿರುವುದಾಗಿ ತಿಳಿದುಬಂದಿದೆ. ಇಲ್ಲಿನ ಖಾಸಗಿ ಆಸ್ಪತ್ರೆ ಗಳಲ್ಲೂ ಒಳ-ಹೊರ ರೋಗಿಗಳಾಗಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕೃಷ್ಣ ಮೂಲ್ಯರ ನಿಧನದೊಂದಿಗೆ ಜಿಲ್ಲೆಯಲ್ಲಿ ಈವರ್ಷ ಡೆಂಗ್ಯೂಜ್ವರ ಬಾಧಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿತು. ರಾಜಪುರಂ ಕೊಟ್ಟೋಡಿ ಕಿರುಡಿಪ್ಪಳ್ಳ ಎಂಬಲ್ಲಿ ಈಟಯ್ಯಚ್ಚಾಲ್ ಚಾಕೋ ಎಂಬವರ ಪುತ್ರ ಸಿಬಿ ಚಾಕೋ (೩೩) ಮೃತಪಟ್ಟಿದ್ದರು. ಶಾರ್ಜಾ ದಲ್ಲಿದ್ದ ಸಿಬಿ ಚಾಕೋ ಒಂದು ವಾರ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಬಳಿಕ ಇವರಿಗೆ ಜ್ವರ ಬಾಧಿಸಿದ್ದು ತಪಾಸಣೆ ನಡೆಸಿದಾಗ ಡೆಂಗ್ಯೂ ಜ್ವರವೆಂದು ತಿಳಿದುಬಂದಿದೆ. ಇದರಿಂದ ಮಂಗಳೂ ರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಂದಡ್ಕ ಬಳಿಯ ವಸಂತ ನಾಯ್ಕ್ (೨೦) ಎಂಬವರು ಇತ್ತೀಚೆಗೆ ಡೆಂಗ್ಯೂ ಜ್ವರ ಬಾಧಿಸಿ ಮೃತಪಟ್ಟಿದ್ದಾರೆ.