ಬೆಳಗಾವಿ : ಭಾರತ ದೇಶ ಸಂಸ್ಕೃತಿಯ ನಾಡು. ಇದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಂಪ್ರದಾಯಗಳು, ಪರಂಪರೆಗಳು ಜೀವಂತ ಸಾಕ್ಷಿಯಾಗಿವೆ’ ಎಂದು ಡಾ. ವೀರೇಶ್ವರ ಸ್ವಾಮೀಜಿ ಹೇಳಿದರು.
ಉಗಾರ ಪಟ್ಟಣದ ಮಹಾದೇವ ಮಂದಿರದಲ್ಲಿ ನಡೆದ ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕುಂಬಾರ ಸಮಾಜ ಇವತ್ತಿಗೂ ಹಿಂದುಳಿದಿದೆ. ಆದ ಕಾರಣ ಸಮಾಜದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜ ಅಭಿವೃದ್ದಿಗಾಗಿ ಶ್ರಮಿಸಿದರೆ ಸಮಾಜ ಬಲಿಷ್ಠವಾಗಲು ಸಾಧ್ಯ’ ಎಂದು ಅವರ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮಂಗಸೂಳಿಯ ಶ್ರೀಗಿರಿ ಆಶ್ರಮದ ಗಿರಿಮಲ್ಲಿಕಾರ್ಜುನ ಸ್ವಾಮೀಜಿ, ‘ಸಮಾಜದ ವಿದ್ಯಾರ್ಥಿಗಳು ಎಷ್ಟೇ ಉನ್ನತದರ್ಜೆಗೆ ಏರಿದರೂ ಮೂಲ ಕಾಯಕ ಬಗ್ಗೆ ನಿಷ್ಕಾಳಜಿ ಮಾಡಬಾರದು.
ಹಿಂದಿನ ಕಾಲದಲ್ಲಿ ಎಲ್ಲರೂ ಮಣ್ಣಿನ ಮಡಿಕೆಯನ್ನು ಗೃಹಬಳಕೆ ವಸ್ತುವನ್ನಾಗಿ ಬಳಸುತ್ತಿದ್ದರು. ಆದರಿಂದ ಕುಂಬಾರನ ನೆನಪು ಸದಾ ಇರುತ್ತಿತ್ತು. ಈಗಿನ ಕಾಲದಲ್ಲಿ ಎಲ್ಲವೂ ಆಧುನಿಕರಣದಿಂದ ಮಣ್ಣಿನ ವಸ್ತುಗಳ ಬಳಿಕೆ ಕಡಿಮೆಯಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಉಗಾರ ಗುರುದೇವಶ್ರಾಮದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳಿಗ್ಗೆ ಕರಡಿ ಮೇಳ ವಾದ್ಯಗಳ ಜತೆಗೆ ಕುಂಭ ಮೆರವಣಿಗೆ ನಡೆಯಿತು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಗಣನೀಯ ಸಮಾಜ ಸೇವೆ ಸಲ್ಲಿಸಿದ ಶಂಕರ ಯಶವಂತ ಕುಂಬಾರ ದಂಪತಿಯನ್ನು ಸನ್ಮಾನಿಸಲಾಯಿತು.
ಮುಖಂಡರಾದ ಯೋಗೇಶ ಕುಂಬಾರ, ಶ್ರೀಪಾದ ಕುಂಬಾರ, ಕುಂಬಾರ ಸಹಕಾರಿ ಪತ್ತಿನ ಬ್ಯಾಂಕ್ ಅಧ್ಯಕ್ಷ ಗುರುರಾಜ ಕುಂಬಾರ, ಸುಭಾಷ ಕುಂಬಾರ, ವೀರಭದ್ರ ಕುಂಬಾರ, ಸ್ವಾತಿ ಯೋಗೇಶ ಕುಂಬಾರ, ಅಣ್ಣಾಸಾಬ ಕುಂಬಾರ, ಶಿವಶಂಕರ ಕುಂಬಾರ ಉಪಸ್ಥಿತರಿದ್ದರು.
***
ಸಂಘಟನೆ ಕೊರತೆಯ ಕಾರಣ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಜದ ಜನರು ಹಿಂದುಳಿಯಲು ಕಾರಣವಾಗಿದೆ. ಕಾರಣ ತಿಳಿದು ಮುನ್ನಡೆಯುವ ದಾರಿ ನೋಡಿಕೊಳ್ಳಿ.
–ಗಿರಿಮಲ್ಲಿಕಾರ್ಜುನ ಸ್ವಾಮೀಜಿ, ಮಂಗಸೂಳಿ ಶ್ರೀಗಿರಿ ಆಶ್ರಮ