ಲಿಂಗಸುಗೂರು: ಸಾಮಾಜಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಕುಂಬಾರ ಸಮಾಜ ಸಂಘಟಿತ ಹೋರಾಟಕ್ಕೆ ಮುಂದಾಗುವಂತೆ ಕರ್ನಾಟಕ ಪ್ರದೇಶ ಕುಂಬಾರ ಸಂಘದ ರಾಜ್ಯ ಅಧ್ಯಕ್ಷ ಲಿಂಗರಾಜ ಕುಂಬಾರ ಕರೆ ನೀಡಿದರು.
ಭಾನುವಾರ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಮತ್ತು ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಂಬಾರರು ಕಾಯಕ ಜೀವಿಗಳಾಗಿದ್ದು ಇತರೆ ಸಮಾಜದ ಸಹಭಾಗಿತ್ವದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವೀರಶೈವ ಲಿಂಗಾಯತ ಒಳ ಪಂಗಡಗಳಲ್ಲಿ ತಾತ್ಸಾರ ಮನೋಭಾವದಿಂದ ತಮ್ಮನ್ನು ಕಾಣುತ್ತಿರುವುದು ನೋವಿನ ಸಂಗತಿ ಎಂದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಚಾರ್ಯ ಡಾ. ಸಿ.ಬಿ. ಚಿಲ್ಕಾರಾಗಿ ಮಾತನಾಡಿ, ಸರ್ವಜ್ಞ ಒಳಗೊಂಡತೆ ಮಹಾನ್ ಮೇಧಾವಿಗಳನ್ನು ಕೊಡುಗೆಯಾಗಿ ನೀಡಿರುವ ಕುಂಬಾರ ಸಮಾಜಕ್ಕೆ ಸಾಮಾಜಿಕ ಮನ್ನಣೆ ದೊರೆತಿಲ್ಲ. ಆದಾಗ್ಯೂ ಕೂಡ ಭಾರತೀಯ ಸಂಸ್ಕೃತಿಯ ಕೊಂಡಿಗಳಾಗಿ ಕಾಯಕ ತತ್ವವನ್ನು ನಂಬಿಕೊಂಡು ಸುಂದರ ಬದುಕು ಕಟ್ಟಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದರು.
ಭೂತ, ಭವಿಷ್ಯಗಳ ಮೆಲಕು ಹಾಕದೆ, ವರ್ತಮಾನಕ್ಕೆ ತಕ್ಕಂತೆ ಕಾಯಕದಲ್ಲಿ ಬದಲಾವಣೆ ಕಾಣಬೇಕು. ತಿಗರಿ ನಂಬಿ ಬದುಕು ಕಟ್ಟಿಕೊಳ್ಳುವುದಕ್ಕಿಂತ ಅಧುನಿಕತೆಗೆ ಹೊಂದಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ಪ್ರತಿಭೆಗಳ ಪುರಸ್ಕಾರ, ಸಾಧನೆಗೈದವರಿಗೆ ಸನ್ಮಾನ ಏರ್ಪಡಿಸಿರುವುದು ಸ್ವಾಗತಾರ್ಹ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಸಮಾಜದ ನಿವೃತ್ತ ನ್ಯಾಯಾಧೀಶ ಪಂಪಾಪತಿ, ಎಚ್.ಎಲ್. ವೀರಮ್ಮ ದಂಪತಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ತಾಲ್ಲೂಕು ಅಧ್ಯಕ್ಷ ಲಿಂಬಣ್ಣ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನೌಕರರಾದ ಸಂಗಪ್ಪ ಕುಂಬಾರ, ಈಶ್ವರಪ್ಪ ಕುಂಬಾರ, ಶರಣಪ್ಪ ಕುಂಬಾರ, ಚಂದ್ರಶೇಖರ ಕುಂಬಾರ, ಅಮರೇಶ ಕುಂಬಾರ ಇದ್ದರು.