ಪುತ್ತೂರು : ಕಾರು ಖರೀದಿಗೆ ಪಡೆದ ಸಾಲದ ಮೊತ್ತ ಮರು ಪಾವತಿಸದೇ ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿರುವ ಘಟನೆ ವರದಿಯಾಗಿದೆ.
ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ನಿವಾಸಿ ಹಸೈನಾರ್ ಎಂಬವರ ಪುತ್ರ ಮಹಮ್ಮದ್ ಶಾಫಿ ಎಂಬಾತನೆ ದೂರುದಾರ. ಮಹಮ್ಮದ್ ಶಾಫಿ ಕುಂಬಾರರ ಸಹಕಾರ ಬ್ಯಾಂಕ್ ವಿಟ್ಲ ಶಾಖೆಯಿಂದ ಮಾ. 16 ರಂದು ದಾಖಲೆ ಪ್ರಸ್ತುತಪಡಿಸಿ ತನ್ನ ಹುಂಡೈ ಐ20 (ಕೆಎ19 ಎಮ್ಇ 9142) ಕಾರಿಗೆ 6.50 ಲಕ್ಷ ರೂಪಾಯಿ ಸಾಲ ಪಡೆದಿದ್ದರೆನ್ನಲಾಗಿದೆ.
ಕಂತು ಹಣ ಪಾವತಿಸುತ್ತ ಬಂದಿದ್ದ ಶಾಫಿಗೆ ಇತ್ತೀಚಿನ ಕೆಲ ಕಂತುಗಳನ್ನು ಪಾವತಿಸುವಲ್ಲಿ ವಿಳಂಬವಾಗಿತ್ತೆನ್ನಲಾಗಿದೆ. ಈ ಬಗ್ಗೆ ತಾನು ಸಾಲ ಪಡೆದಿದ್ದ ವಿಟ್ಲ ಶಾಖೆಯ ಮ್ಯಾನೇಜರ್ರಲ್ಲಿ ಮಹಮ್ಮದ್ ಶಾಫಿ ಕೆಲ ದಿನಗಳ ಹಿಂದೆ ಮಾತುಕತೆ ನಡೆಸಿದ್ದ ಕಾರಣ ಮೇ 30 ರಂದು ಬಾಕಿಯಿರುವ ಕಂತುಗಳನ್ನು ಪಾವತಿಸುವಂತೆ ಮ್ಯಾನೇಜರ್ ಸಹಿ ಮಾಡಿ ಪತ್ರ ನೀಡಿದ್ದರು. ಆದರೆ ಇದಕ್ಕೆ ಕ್ಯಾರೆನ್ನದ ಆತನ ಕಾರನ್ನು ಸಹಕಾರ ಸಂಘದ ಸಿಬ್ಬಂದಿಗಳು ಸೀಜ್ ಮಾಡಿದ್ದರು. ಇದರಿಂದ ಅವಮಾನಿತನಾದ ಶಾಫಿ, `ಬ್ಯಾಂಕ್ ಸಿಬ್ಬಂದಿಗಳ ಸುಮಾರು ಹತ್ತು ಜನರ ತಂಡವೊಂದು ಕಾರಿನಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಕಾರು ಮಾಲಕನ ಮೇಲೆ ಹಲ್ಲೆ ನಡೆಸಿ ಬೆಲೆ ಬಾಳುವ ವಾಚು ಸಹಿತ ಕಾರನ್ನು ಕಸಿದುಕೊಂಡು ಹೋಗಿದೆ’ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ದೂರಿನಲ್ಲಿ ಸತ್ಯಾಂಶ ಇಲ್ಲದಿರುವುದನ್ನು ಮನಗಂಡ ಪೊಲೀಸರು ಸ್ವೀಕರಿಸಿರಲಿಲ್ಲ. ಆ ಬಳಿಕ ನ್ಯಾಯಾಲಯದ ಮೆಟ್ಟಿಲೇರಿ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ, ಕಾರ್ಯದರ್ಶಿ ಜನಾರ್ದನ
ಮತ್ತು ಇತರ ಎಂಟು ಜನರ ವಿರುದ್ಧ ಬಂಟ್ವಾಳ ನ್ಯಾಯಾಲಯಕ್ಕೆ ಖಾಸಗಿ ಫಿರ್ಯಾದಿ ಸಲ್ಲಿಸಿದ್ದಾರೆ.