ಸಿಂದಗಿ: ಕುಂಬಾರ ಸಮುದಾಯಕ್ಕೆ ಪ್ರಾಚೀನ ಇತಿಹಾಸವಿದೆ. ಸಮಾಜದ ಸದಸ್ಯರು ಬಳಸುವ ತಿಗರಿ (ಚಕ್ರ) ಅನೇಕ ಅನ್ವೇಷಣೆಗಳಿಗೆ ಕಾರಣವಾಗಿದೆ. ಕುಂಬಾರ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಸಾಹಿತ ಡಾ.ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಚೌಡೇಶ್ವರಿ ಸಭಾಮಂಟಪದಲ್ಲಿ ಭಾನುವಾರ ಚೌಡೇಶ್ವರಿ ದೇವಿ ಸೇವಾ ಸಮಿತಿ, ಚೌಡೇಶ್ವರಿ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿ ಸರ್ವಜ್ಞನ ಜಯಂತ್ಯುತ್ಸವ, ಕುಂಬಾರ ಸಮಾಜದ ಚಿಂತನ-ಮಂಥನ ಹಾಗೂ ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಸದಸ್ಯರಿಗೆ, ವಿಜಯಪುರ ಜಿಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನಿಂದ ಸ್ಥಾಪಿತವಾದ ಲಿಂಗಾಯತ ಧರ್ಮದಲ್ಲಿ ಕುಂಬಾರರನ್ನು ಇನ್ನು ಶೋಷಿತ ವರ್ಗವಾಗಿ ಕಾಣಲ್ಪಡುತ್ತಿದ್ದಾರೆ. ಸಮಾಜದಲ್ಲಿ ಪ್ರತಿಭೆಗಳಿದ್ದರೂ ಬೆಳಕಿಗೆ ಬರುತ್ತಿಲ್ಲ. ಜನ ಪ್ರತಿನಿಧಿಗಳಂತೂ ಇಲ್ಲವೆ ಇಲ್ಲ.
ಕುಂಬಾರ ಸಮಾಜಕ್ಕೆ ಸೇರಿದ ಸರ್ವಜ್ಞ ತ್ರಿಪದಿಗಳನ್ನು ರಚಿಸಿ ಸಾರ್ವಕಾಲಿಕ ಸತ್ಯಗಳನ್ನು ಜಗತ್ತಿಗೆ ತೋರಿಸಿದನು. ಇವನ ತ್ರಿಪದಿಗಳನ್ನು ಪಂಚಮವೇದಗಳೆಂದು ಕರೆದರೂ ತಪ್ಪಾಗಲಾರದು ಎಂದು ಹೇಳಿದರು.
ಸರ್ವಜ್ಞನ ಜಯಂತ್ಯುತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಸರ್ವಜ್ಞನಂತೆ ನಮ್ಮ ಪ್ರತಿಭೆಗಳು ಸಹ ಬೆಳಗುವಂತಾಗಲಿ ಎಂದು ಹೇಳಿದರು.
ವಿಧಾನಪರಿಷತ್ತ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ಮಾತನಾಡಿ ಶರಣರನ್ನು,ವಾಗ್ಮಿಗಳನ್ನು, ದಾರ್ಶನಿಕರನ್ನು ಒಂದೇ ಜಾತಿಗೆ ಸೀಮಿತ ಮಾಡುವುದು ಬೇಡ. ಪ್ರತಿಬೆಗೆ ಜಾತಿ ಇಲ್ಲ.
ಪ್ರತಿಭಾವಂತರನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಅವರು ಮೇಲೆ ಬರಲು ಸಹಾಯ ಮಾಡಬೇಕು. ಕುಂಬಾರ ಸಮಾಜವು ಇಂದಿಗು ಕಾಯಕದ ಮೇಲೆ ಪ್ರೀತಿ ಬೆಳಸಿಕೊಂಡ ಮುಗ್ಧ ಸಮಾಜ. ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಬೇಕು ಎಂದು ಹೇಳಿದರು.
ಕುಂಬಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಕುಂಬಾರ ಮಾತನಾಡಿ ಕುಂಬಾರ ಸಮಾಜದಲ್ಲಿರುವ ಪ್ರತಿಭೆಗಳಿಗೆ ಅವಶ್ಯಕವಾದ ಸಹಾಯ ಹಸ್ತವನ್ನು ನೀಡುವುದರ ಮೂಲಕ ಅವರ ಉನ್ನತಿಗೆ ಸದಾ ಸಿದ್ಧ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಮೇಶ ಭೂಸನೂರ, ಚೌಡೇಶ್ವರಿ ದೇವಿಯ ದೇವಸ್ಥಾನದ ಅಭಿವೃದ್ಧಿಗೆ ₹ 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಆರ್.ವಿ.ವಟ್ನಾಳ ಮಾತನಾಡಿದರು.
ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹಿರಿಯಮಠದ ಶಿವಾನಂದ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಬಸವ ಪ್ರಜ್ಞಾನಂದ ಸ್ವಾಮೀಜಿ, ಜಿ.ಎಸ್.ಮಳಗಿ, ಶಿವಾನಂದ ಬೀಳಗಿ, ಬೀಮಾಶಂಕರ ನಾಗೂರ, ವಿವೇಕ ಕುಂಬಾರ, ಚೌಡಪ್ಪ.ಸಿ.ಕುಂಬಾರ ಚಂದ್ರಶೇಖರ.ಸಿ.ಕುಂಬಾರ ಉಪಸ್ಥಿತರಿದ್ದರು.
ಬಸವರಾಜ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಕಾಂತ ಕುಂಬಾರ ನಿರೂಪಿಸಿ ವಂದಿಸಿದರು. ತಾಲ್ಲೂಕಿನ ಕುಂಬಾರ ಸಮಾಜದ ತಾಲ್ಲೂಕು, ಗ್ರಾಮ ಪಂಚಾಯ್ತಿ ಸದಸ್ಯರನ್ನು ಹಾಗೂ ಜಿಲ್ಲೆಯ 32 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.