ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ವಿಶೇಷ ದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದರು. ಹಿಂದಿನ ಕಾಲದ ಆಚರಣೆಗೂ ಈಗಿನ ಕಾಲದ ಆಚರಣೆಗೂ ಬಹಳ ವ್ಯತ್ಯಾಸ ಇದೆ. ಆಚರಣೆಯಲ್ಲಿ ಒಂದೊಂದು ಊರಿನಲ್ಲಿ ಒಂದೊಂದು ಕ್ರಮ ಇರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳು ಕೆಡ್ಡಸ ಬರುವುದಕ್ಕೆ ಒಂದು ತಿಂಗಳು ಮೊದಲು ಒಟ್ಟಾಗಿ ಕೆಡ್ಡಸಕ್ಕೆ `ಪುಂಡದೆ ಗಿಡಪುನು’ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಿದ್ದರು. ಕೆಡ್ಡಸ ಒಟ್ಟು ಮೂರು ದಿನ ಮೊದಲ ಕೆಡ್ಡಸ ನಡು ಕೆಡ್ಡಸ ಕಡೆ ಕೆಡ್ಡಸ ಈ ಮೂರುದಿನದಂತೆ ಎಲ್ಲರೂ ಒಟ್ಟಾಗಿ ಪುಂಡದೆ ಎಂಬ ಹಕ್ಕಿಯನ್ನು ಓಡಿಸಿ ಅದನ್ನು ಹಿಡಿಯುತ್ತಿದ್ದರು. ಪುಂಡದೆ ಹಕ್ಕಿ ಓಡುತ್ತಾ ಓಡುತ್ತಾ ಹೆದರಿ ನಂತರ ತನ್ನ ತಲೆಮಾತ್ರ ಯಾರಿಗೂ ತೋರದಂತೆ ಅಡಗಿಸಿ ಇಡುತ್ತಿತ್ತು. ಆಗ ಅದನ್ನು ಹಿಡಿಯುತ್ತಾರೆ. ಈಗೆ ಒಟ್ಟಾದ ಪುಂಡದಗಳನ್ನು ಪಲ್ಯ ಮಾಡುತ್ತಿದ್ದರು. ಕಡಿಮೆ ಆದರೆ ಅದಕ್ಕೆ ಕೋಳಿ ಯನ್ನು ಹಾಕಿ ಪಲ್ಯ ಮಾಡುತ್ತಿದ್ದರು. ಪಲ್ಯ ಮತ್ತು ಅವಲಕ್ಕಿಯನ್ನು ಎಲ್ಲರೂ ಒಂದು ಕಡೆ ಒಟ್ಟು ಸೇರಿ ಬಡಿಸಿ ತಿನ್ನುತ್ತಿದ್ದರು.
ಆ ಕಾಲದಲ್ಲಿ ಇದೊಂದು ಒಳ್ಳೆಯ ಕುಶಿ ಕೊಡುವ ಕಾರ್ಯಕ್ರಮ ಕೆಡ್ಡಸದ ಸಮಯದಲ್ಲಿ ಪುಂಡದ ಹಕ್ಕಿಗೆ ಜ್ವರ ಬರುತ್ತದೆ ಎಂದು ಹೇಳುತ್ತಾರೆ. ತುಳುವೆರೆ ಪುಯಿಂತೆಲ್ ತಿಂಗಳ ಇಪ್ಪತ್ತೇಳು ಹೋಗುವ ಅಂದರೆ ಮಾಯಿ ತಿಂಗಳ ಸಂಕ್ರಮಣದ ದಿನಕ್ಕಿಂತ ಎರಡು ದಿನ ಮುಂಚೆ. ಹೀಗೆ ಮೂರು ದಿನದ ಕೆಡ್ಡಸ ಹಿಂದಿನ ಕಾಲದಿಂದಲೂ ಕೆಡ್ಡಸವೆಂದರೆ ಭೂಮಿತಾಯಿ ಮುಟ್ಟಾಗುವ ಸಮಯ ಎಂದು ಹೇಳುತ್ತಾರೆ. ಹೆಣ್ಣು ಪುಷ್ಪವತಿಯಾದರೆ ನಂತರ ಅವಳು ಹೆಂಗಸಾದಳು ಎಂದು ಹೇಳುತ್ತಾರೆ. ನಂತರ ಹೆಣ್ಣು ಗರ್ಭ ಧರಿಸುತ್ತಾಳೆ. ಎಂದು ಹೇಳುತ್ತಾರೆ. ಭೂಮಿಯ ಮೇಲೆ ಬೆಳೆದಿರುವ ಗಿಡ ಮರಗಳಿಗೆ ತಾಯಿ ಭೂಮಿಯೇ. ಎಲ್ಲಾಗಿಡ ಮರಗಳ ಬೀಜವು ಮೊಳಕೆಗೆ ಬರುವುದು ಭೂಮಿಯಲ್ಲಿಯೇ. ಇದರಿಂದಲೆ ನಾವು ಭೂಮಿಯನ್ನು ಭೂಮಿ ತಾಯಿ ಎಂದು ಕರೆದು ಅದನ್ನು ತಾಯಿಯೆಂದು ಆರಾಧಿಸುತ್ತೇವೆ. ಮನುಷ್ಯನಿಗೆ ಬದುಕುವುದಕ್ಕೆ ಕೃಷಿ ಮುಖ್ಯ ಕೃಷಿಯ ತಾಯಿಯೇ ಭೂಮಿ. ಭೂಮಿ ತಾಯಿಯ ಮೇಲೆ ಮನುಷ್ಯನು ಆಗಾಧವಾದ ನಂಬಿಕೆಯನ್ನು ಇಟ್ಟು ಎಲ್ಲವನ್ನು ಭೂಮಿಯಿಂದ ಪಡೆದ.
ಮನುಷ್ಯನಿಗೆ ಭೂಮಿಯ ಮೇಲೆ ಮಳೆ, ಚಳಿ, ಬೇಸಿಗೆ ಕಾಲ ಎಂಬುದಿದೆ. ಈ ಕಾಲದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಸುವ ವಿಧಾನವನ್ನು ಕಂಡು ಹಿಡಿದು ಅದಕ್ಕೆ ತಕ್ಕಂತಹ ಬೀಜವನ್ನು ಜೋಪಾನವಾಗಿಟ್ಟು ಮಳೆಗಾಲದಲ್ಲಿ ಅದಕ್ಕೆ ತಕ್ಕಂತಹ ಬೆಳೆಯನ್ನು ಬೆಳೆಸುತ್ತಾರೆ. ಚಳಿಗಾಲದಲ್ಲಿ ಬೆಳೆಯುವ ಬೆಳೆಯನ್ನು ಬೆಳೆಸುವುದನ್ನು ಕಂಡು ಕೊಂಡು ಬೇಸಿಗೆ ಕಾಲಕ್ಕೆ ಅನುಗುಣವಾಗಿ ಬೆಳೆಯುವ ಬೆಳೆಯನ್ನು ತಿಳಿದುಕೊಂಡು ವರ್ಷ ಪೂರ್ತಿ ಭೂಮಿ ತಾಯಿಯನ್ನು ಸಹಾಯ ಪಡೆದೆ ಪಡೆಯುತ್ತಾರೆ.
ಮಳೆಗಾಲವು ಬೇಸಗೆ ತಿಂಗಳಲ್ಲಿ ಆರಂಭವಾಗಿ ಕನ್ಯಾ ತಿಂಗಳವರೆಗೆ ಇದ್ದು ಬೊಂತೆಲ್ನಿಂದ ಪುಯಿಂ ತೆಲ್ವರೆಗೆ ಚಳಿಗಾಲ ಇರುತ್ತದೆ. ಆದರೆ ಈಗ ಚಳಿ ಕಡಿಮೆಯಾಗಿ ಬೇಸಿಗೆ ಕಾಲ ಇರುತ್ತದೆ. ಕಾಲಕ್ಕೆ ತಕ್ಕಂತೆ ಭೂಮಿ ತಾಯಿಯು ಮರಗಿಡಗಳಿಗೆ ಜನ್ಮ ಕೊಡುವುದಕ್ಕೆ ಸಿದ್ಧಳಿರುತ್ತಾಳೆ.
ಕೆಡ್ಡಸವೆಂದರೆ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಕ್ರಮಗಳೊಂದಿಗೆ ಪುಂಡದ ಹಕ್ಕಿಯನ್ನು ಮಕ್ಕಳು ಬೊಂಟೆ ಮಾಡುವುದು ಸಾಮಾನ್ಯ. ಇದು ಹೆಚ್ಚಿನ ಊರುಗಳಲ್ಲಿ ಈಗಲೂ ಇದೆ. ಜ್ವರ ಬಂದಾಗ ಪುಂಡದ ಹಕ್ಕಿಯು ಸುಲಭದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಪುಂಡದ ಹಕ್ಕಿಯ ಪಲ್ಯವನ್ನು ಮನೆಯಲ್ಲಿ ಮಾಡುವುದಕ್ಕೆ ನಿಷಿದ್ಧ ಇರುವುದರಿಂದ ಎಲ್ಲಿಯಾದರೂ ಒಟ್ಟು ಸೇರಿ ತೋಟದಲ್ಲಿ ಮಾಡುತ್ತಾರೆ.
ಕೆಡ್ಡಸ ಆಚರಣೆಯಲ್ಲಿ ಮುಖ್ಯ ಪಾತ್ರ ಸ್ತ್ರೀಯರಲ್ಲಿರುತ್ತದೆ. ಸ್ತ್ರೀಯರು ಬೇರೆ ಬೇರೆ ಹಬ್ಬವನ್ನು ಆಚರಿಸುವಂತೆ ಈ ಹಬ್ಬವನ್ನು ಆಚರಿಸುತ್ತಾರೆ. ಏಕೆಂದರೆ ಸ್ತ್ರೀಯರು ಮಕ್ಕಳಿಗೆ ಜನ್ಮ ನೀಡುವುದು ಮುಖ್ಯವಾಗಿರುವುದರಿಂದ ಸ್ತ್ರೀಯರು ಮನೆಯ ಅಂಗಳವನ್ನು ಗೋಮಯದಿಂದ ಸುತ್ತಲು ಸಾರಿಸುವ ಕ್ರಮ ಹಿಂದೆ ಎಲ್ಲಾ ಮನೆಯಲ್ಲಿಯೂ ಇತ್ತು. ಈಗ ಕಡಿಮೆಯಾಗಿದೆ. ಹಳ್ಳಿಯ ಮನೆಯಲ್ಲಿ ಈಗಲೂ ಇದೆ. ತುಳಸಿ ಕಟ್ಟೆಯ ಎದುರು ಜೇಡಿ ಮಣ್ಣಿನಿಂದ ವೃತ್ತವೊಂದನ್ನು ಹಾಕುತ್ತಾರೆ. ಇದು ಕೆಡ್ಡಸ ಬರೆಯುವುದು ಎಂದು ಹೇಳುತ್ತಾರೆ. ಹೆಂಗಸರು ಬಿಳಿ ಬಟ್ಟೆಯನ್ನು ಉಡುವುದು, ಗೆಜ್ಜೆ ಕತ್ತಿ ಮತ್ತು ತೆಂಗಿನ ಹಸಿ ಮಡಲಿನ ಕಡ್ಡಿಯನ್ನು ಇಟ್ಟು ಭೂಮಿ ತಾಯಿಯ ಸಾನ್ನಿಧ್ಯವನ್ನು ಕಲ್ಪಿಸುವ ಕ್ರಮ ಕೆಡ್ಡಸದ ಆರಂಭದ ದಿನ ಮನೆಯನ್ನು ಶುಚಿಗೊಳಿಸುವುದು. ಧಾನ್ಯಗಳನ್ನು ಮುಖ್ಯವಾದ ಹುರುಳಿ ಹುರಿದು ಪುಡಿಮಾಡಿ ಬೆಲ್ಲ ಅರಳು ತೆಂಗಿನ ಕಾಯಿ ಚೂರು ಬೆರೆಸಿ ಕೊಡಿ ಬಾಳೆ ಎಲೆಯಲ್ಲಿ ಹಾಕಿ ತುಳಸಿ ಕಟ್ಟೆಯ ಎದುರು ಇಡುವುದು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಕ್ರಮ ಇದೆ. ಕೆಲವು ಊರುಗಳಲ್ಲಿ ನುಗ್ಗೆಯ ಪಲ್ಯವನ್ನು ಮಾಡುತ್ತಾರೆ.
ಹಿಂದಿನ ಕಾಲದಲ್ಲಿ ಹೆಚ್ಚಿನ ಮನೆಯಲ್ಲಿ ‘ಕುಡು ಅರಿ’ ತಯಾರಿಸುವ ಕ್ರಮ ಇತ್ತು. ಕುಡು ಅರಿಗೆ ಏಳು ಧಾನ್ಯಗಳನ್ನು ಹುರಿದು ಅದಕ್ಕೆ ತೆಂಗಿನಕಾಯಿಯ ಚೂರುಗಳನ್ನು ಬೆರೆಸಿ ಕುಡು ಅರಿ ತಯಾರಿಸುತ್ತಿದ್ದರು. ಕೆಲವು ಊರುಗಳಲ್ಲಿ ಭೂಮಿ ಬರೆದ ಸ್ಥಳದಲ್ಲಿ ಹಲಸಿನ ಕಳ್ಳಿಗೆ ಹಾಕಿದ ಪದಾರ್ಥಗಳು ಉದ್ದಿನ ದೋಸೆಯನ್ನು ಬಡಿಸುತ್ತಾರೆ. ಕೆಡ್ಡಸದ ವೇಳೆ ಹೆಂಗಸರು ಮುಟ್ಟಾದರೆ ಹಸಿ ಸೋಗೆಯಲ್ಲಿ ಮಲಗುವ ಕ್ರಮ ಇತ್ತು. ಹಿಂದಿನ ಕಾಲದ ಕತೆಯಂತೆ ಭೂಮಿ ತಾಯಿ ಮುಟ್ಟಾದಾಗ ಬೇರೆ ಹೆಂಗಸರು ಮುಟ್ಟಾಗುವುದನ್ನು ಸಹಿಸುತ್ತಿರಲಿಲ್ಲವಂತೆ. ಈ ಕಲ್ಪನೆಯು ಜನಮನದಲ್ಲಿ ಇತ್ತು.
ಹಿಂದಿನ ಕಾಲದ ಕೃಷಿಕರು ಭೂಮಿಯನ್ನು ಅಗೆಯುವುದಕ್ಕೆ ಹೋಗುತ್ತಿರಲಿಲ್ಲ. ಅಗೆಯಬಾರದೆಂಬ ನಿಯಮವು ಇತ್ತು. ಭೂಮಿಗೆ ಹಿಂಸೆ ಕೊಡಬಾರದೆಂದು ಕೃಷಿಕರ ನಿಯಮ. ಆದರೆ ಈಗ ಇಂತಹ ಕ್ರಮ ಇಲ್ಲ. ಭೂಮಿಯನ್ನು ಅಗೆಯುವ ಅನಿವಾರ್ಯವು ಇತ್ತು. ಕೆಡ್ಡಸದ ಮೂರನೇ ದಿನ ಭೂಮಿ ತಾಯಿಯನ್ನು ಸ್ನಾನ ಮಾಡಿಸಿ ಅಲಂಕಾರ ಮಾಡಿ ಕುಶಿ ಪಡೆಯುವ ರೂಢಿ ಇದೆ. ಈಗಿನ ಕಾಲದಲ್ಲಿ ಕೆಡ್ಡಸವನ್ನು ಆಚರಿಸುವ ಕ್ರಮ ಕಡಿಮೆಯಾಗಿದೆ.
ಹಿಂದಿನ ಕಾಲದ ಜನರು ಆಚರಿಸುತ್ತಿದ್ದ ಕ್ರಮ ತಿಳಿದುಕೊಳ್ಳುವುದಕ್ಕೆ ಯಾರು ಹೋಗುವುದಿಲ್ಲ. ಕೆಡ್ಡಸ ಎಂದರೆ ತೊಡಗು ಎಂಬ ಅರ್ಥ ಇದೆ. ಈ ತೊಡಗು ಎಂಬ ಅರ್ಥದಿಂದ ಕೃಷಿಕರು ಕೃಷಿಯಲ್ಲಿ ತೊಡಗುವುದು ಎಂದು ಅರ್ಥ. ಏಕೆಂದರೆ ಕೆಡ್ಡಸದ ಸಮಯದಲ್ಲಿ ಮುಂದಿನ ಎನೆಲು ಭತ್ತದ ಕೃಷಿಗೆ ಬೇಕಾಗುವ ತಯಾರು ಮಾಡುತ್ತಿದ್ದರು. ಕೃಷಿ ಭೂಮಿಗೆ ಗೊಬ್ಬರ ಹಾಕುವುದು ಗದ್ದೆಯನ್ನು ಕೃಷಿಗೆ ತಯಾರಿಸಿ ಇಡುವುದು. ಅಂದರೆ ಗದ್ದೆಯನ್ನು ಪುಡಿ ಮಾಡುವುದು ಎಂದರ್ಥ. ಕೆಡ್ಡಸದ ಸಮಯ ಭೂಮಿ ತಾಯಿ ಋತುಮತಿಯಾಗಿ ನಂತರ ಗರ್ಭಧರಿಸಲು ತಯಾರಾಗುವ ಸಮಯ.
ಕೆಡ್ಡಸದ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿ ಗಾಳಿ ಬೀಸುತ್ತದೆ. ಆಗ ಅದಕ್ಕೆ ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಕೆಡ್ಡಸದ ಸಮಯದಲ್ಲಿ ಕೆಲವು ಊರುಗಳಲ್ಲಿ ದೈವದ ನೇಮ ನಡೆಯುವದಕ್ಕೆ ಕೆಡ್ಡಸದ ನೇಮ ಎಂದು ಕರೆಯುತ್ತಾರೆ. ಹೀಗೆ ತುಳುನಾಡಿನ ಕೆಡ್ಡಸವು ಬಹಳ ಅರ್ಥಪೂರ್ಣವಾಗಿದೆ.
ಹರಿಶ್ಚಂದ್ರ ಪಿ. ಸಾಲ್ಯಾನ್, ಮೂಲ್ಕಿ