ಕುಂಬಾರರು ಇಡೀ ಕರ್ನಾಟಕ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದರೂ ಸಹ ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ವಿಜಯಪುರ, ದಕ್ಷಿಣದ ಕೋಲಾರ, ಮಂಡ್ಯ, ಮೈಸೂರು ಬೆಂಗಳೂರು, ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಉತ್ತರಕನ್ನಡಗಳಲ್ಲಿ ರಾಜಕೀಯವಾಗಿ ಪ್ರಭಾವ ಬೀರುವಷ್ಟು ಶಕ್ತಿ ಈ ಜಾತಿಗಿದೆ. ಆದರೆ ರಾಜಕೀಯವಾಗಿ ಪಕ್ಷಗಳು ಉತ್ತರ ಕರ್ನಾಟಕದಲ್ಲಿ ಕುಂಬಾರ ಸಮುದಾಯಕ್ಕೆ ಕೊಟ್ಟಷ್ಟು ಅವಕಾಶ ಕರಾವಳಿ, ಮಧ್ಯ ಹಾಗೂ ದಕ್ಷಿಣ ಕರ್ನಾಟಕದವರಿಗೆ ಕೊಟ್ಟಿಲ್ಲ ಅಥವಾ ಇಲ್ಲಿಯವರು ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿರುವಂತೆ ಕಾಣುತ್ತಿದೆ.
ಕೂಲಂಕುಷವಾಗಿ ವಿಮರ್ಶಿಸಿದಾಗ ಉತ್ತರ ಕರ್ನಾಟಕದ ಕುಂಬಾರ ನಾಯಕರು ಜಾತಿ ಸಂಘಟನೆ ಹಾಗೂ ಸಾಮಾಜಿಕ ಸಂಘಟನೆ ಮತ್ತು ಸಮಾಜಮುಖೀ ಹೋರಾಟಗಳಲ್ಲಿ ತೊಡಗಿಸಿಕೊಂಡು ರಾಜಕೀಯ ಪಕ್ಷ ಗಳಲ್ಲಿ ತಮ್ಮ ಛಾಪನ್ನ ಮೂಡಿಸಿಕೊಳ್ಳುವಲ್ಲಿ ಸಫಲರಾಗಿರುವಂತೆ ಕಾಣುತ್ತಿದೆ. ರೈತ ಮೋರ್ಚಾಗಳಲ್ಲಿ, ನೀರಾವರಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಬಿಜಾಪುರ ನಿಡಗುಂದಾದ ಬಸವರಾಜ್ ಕುಂಬಾರ ಕಾಡ ಕೃಷ್ಣ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾಗಿ ದುಡಿದವರು. ಈಗ ಬಿಜೆಪಿ ಯಾ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುತ್ತಾರೆ.
ಹಾಗೆಯೇ ಬೀದರಿನ ಭಾಲ್ಕಿಯ ದತ್ತಾತ್ರೇಯ ಗಾಂವ್ಕಾರ ಬಿಜಿಪಿ ಕಲಬುರ್ಗಿ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಬೀದರಿನ ಇನ್ನೊಬ್ಬ ಯುವ ಕುಂಬಾರ ನಾಯಕ ಮಲ್ಲಿಕಾರ್ಜುನ ಶಿವರಾಜಪ್ಪ ಕುಂಬಾರ ರಾಜ್ಯ ಬಿಜೆಪಿ ಯ ಯುವ ಮೋರ್ಚಾದ ಕದ ತಟ್ಟಿ ಒಳಪ್ರವೇಶಕ್ಕೆ ಸರ್ವ ಸಿದ್ಧರಾಗಿದ್ದಾರೆ. ಆದರೆ ಬಿಜೆಪಿಯ ಭದ್ರ ಕೋಟೆಯಾಗಿರುವ ಕರಾವಳಿಯಲ್ಲಿ ನಾನು ರಾಜ್ಯ ಬಿಜೆಪಿ ಆರೋಗ್ಯ ಪ್ರಕೋಷ್ಠ ಹಾಗೂ ಶಿಕ್ಷಕ ಪ್ರಕೋಷ್ಠ ದ ಸಹ ಸಂಚಾಲಕನಾಗಿದ್ದರೆ, ಬಿಜಿಪಿಯ ದಯಾನಂದ ಅಡ್ಯಾರ್ ಕುಕ್ಕುಟ ನಿಗಮದ ಅಧ್ಯಕ್ಷ. ಕಾಂಗ್ರೆಸ್ ನ ಪರಮೇಶ್ವರ ಮೂಲ್ಯ ಸಜೀಪ ಅರಣ್ಯ ನಿಗಮದ ಸದಸ್ಯರಾಗಿದ್ದು ಬಿಟ್ಟರೆ ಇತರ ಯಾರೂ ಸಹ ಆಯ್ಕೆ ಆಗಿಲ್ಲ. ಅಲ್ಲದೆ ಯಾರೂ ಲಾಭದಾಯಕ ಹುದ್ದೆಗೆ ನಿಯುಕ್ತರಾಗಿಲ್ಲ.

ಕಾಂಗ್ರೆಸ್ ನ ಸೌಂದರ್ಯ ಮಂಜಪ್ಪನವರಿಗೆ ಪೀಣ್ಯದ ಶಾಸಕ ಸ್ಥಾನದ ಹಾಗೂ ವಿಧಾನ ಪರಿಷತ್ ಸದಸ್ಯತನದ ಆಸೆಯನ್ನು ತೋರಿಸುತ್ತಲೇ ಬರಲಾಗಿದೆ. ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಯುವ ನಾಯಕ ತೇಜಸ್ವಿರಾಜ್ ಗೆ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಪಟ್ಟ ತಪ್ಪಿಸಿ, ಮಂಗಳೂರು ವಿ.ವಿಯ ಸೆನೆಟ್ ಗೆ ಸೀಮಿತಗೊಳಿಸಲಾಯಿತು. ಪ್ರಥ್ವಿರಾಜ್ ಎಡಪದವು, ಬಂಟ್ವಾಳದ ಸದಾಶಿವ ಬಂಗೇರ, ಪದ್ಮಕುಮಾರ ಬೆಳ್ತಂಗಡಿಯವರನ್ನ ಅವರಿರುವ ಪಕ್ಷದ ಹುದ್ದೆಗಳಿಂದ ಮೇಲೆ ಬರದಂತೆ ನೋಡಿಕೊಳ್ಳಲಾಯಿತು.
ಕರಾವಳಿಯಲ್ಲಿ ಮಿಂಚಿನ ಸಂಚಾರ ಮಾಡಿದ್ದ ಸೌಂದರ್ಯ ರಮೇಶ್ ರವರು ಬಿಜಿಪಿ, ಜನತಾದಳ ಪಕ್ಷಗಳಲ್ಲಿ ದುಡಿದು ಹಣ ಖರ್ಚು ಮಾಡಿದರೂ ಸಹಾ ಅವರ ಸೇವೆಯನ್ನು ಪರಿಗಣಿಸಲೇ ಇಲ್ಲ!
ವಿಧಾನಪರಿಷತ್ ಸ್ಥಾನಕ್ಕೆ ಡಾ. ಎಂ. ವಿ. ಕುಲಾಲ್ ಕುಂದಾಪುರ, ಶಿವಕುಮಾರ ಚೌಡ ಶೆಟ್ಟಿ ,ತುಮಕೂರಿನ ಸಿದ್ಧನಂಜ ಶೆಟ್ಟಿಯವರನ್ನು ಸಮುದಾಯ ತೋರಿಸಿದರೂ ಪಕ್ಷಗಳು ತುಟಿ ಬಿಚ್ಚಲಿಲ್ಲ. ಶಿವಕುಮಾರ ಚೌಡ ಸೆಟ್ಟಿಗೆ ಸಿಕ್ಕ ಬಿಎಂಟಿಸಿ ನಿಗಮದ ಉಪಾಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಯಿತು. ಕರಾವಳಿಯಲ್ಲಿ ಬಿಜೆಪಿ ಕಸ್ತೂರಿ ಪಂಜರವರಿಗೆ
ದ. ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಬಿಜೆಪಿ ಕೊಟ್ಟರೂ ಸಹಾ ಅಧ್ಯಕ್ಷ ಸ್ಥಾನ ಸಿಗದಂತೆ ಮೀಸಲಾತಿಯ ಮೂಲಕ ಕಾಂಗ್ರೆಸ್ ತಡೆ ಹಿಡಿಯಿತು. ಕಾಂಗ್ರೆಸ್, ಬಿಜೆಪಿ. ಆರೆಸ್ಸೆಸ್ , ಬಜರಂಗದಳ, ಎನ್ನೆಸ್ ಯುಐ, ಕಮ್ಯುನಿಸ್ಟ್, ಡಿವೈಎಫ್ಐಗಳಲ್ಲಿ ದುಡಿಯುವ ಸಾವಿರಾರು ಕುಲಾಲ/ಕುಂಬಾರ ಯುವಕರು ರಾಜಕೀಯದ ಗೊತ್ತು ಗುರಿ ಇಲ್ಲದೆ ಕುರಿಗಳಂತೆ ದುಡಿಯುತ್ತಿದ್ದಾರೆ ಎಂಬ ಮಾತು ಸತ್ಯ.
ಉತ್ತರ ಕರ್ನಾಟಕದ ಲಿಂಗಾಯತ ಕುಂಬಾರರ ಒಗ್ಗಟ್ಟು ಜಾತಿ, ಅನ್ಯಜಾತಿ ಹಾಗೂ ಸಮಾಜಪರ ಹೋರಾಟಗಳಲ್ಲಿ ಸಮನ್ವಯತೆ ಸಾಧಿಸಿ ನೇರ ಭಾಗಿಯಾಗುವಿಕೆ
ಹಾಗೂ ಯಡಿಯೂರಪ್ಪರಂತಹ ಲಿಂಗಾಯತ ನಾಯಕರ ಕೃಪಾಕಟಾಕ್ಷ ಇದ್ದರೆ ಕರ್ನಾಟಕದ ಇತರ ಭಾಗಗಳಲ್ಲಿ ನಮ್ಮ ನಾಯಕರು ಜಾತಿಯಲ್ಲಿ ಇದ್ದರೆ, ಪಕ್ಷದಲ್ಲಿ ಇಲ್ಲ
ಪಕ್ಷದಲ್ಲಿ ಇದ್ದರೆ ಜಾತಿ ಸಂಘಟನೆಯಲ್ಲಿ ಇಲ್ಲ. ಎರಡಲ್ಲೂ ಇದ್ದರೂ ಸಾಮಾಜಿಕ ಹೋರಾಟಗಳಲ್ಲಿ ಇಲ್ಲ. ಇದೆಲ್ಲಕೂ ಮುನ್ನ ಗುಂಪುಗಾರಿಕೆ ಹೊಟ್ಟೆಕಿಚ್ಚು, ಕೀಳರಿಮೆ, ತ್ಯಾಗಕ್ಕೆ ಸಿದ್ಧರಿ ರುವಿಕೆ, ಕಾಲೆಳೆಯುವಿಕೆ ನಮ್ಮನ್ನ ನಾವೇ ಮೂಲೆ ಗುಂಪಾಗಿಸಿಕೊಳ್ಳುವಂತೆ ಮಾಡಿದೆ. ಕರಾವಳಿ, ಕೋಲಾರ, ಮೈಸೂರು, ಮಂಡ್ಯ, ಬೆಂಗಳೂರಿನ ಕುಂಬಾರರು ಕನಿಷ್ಟ ಒಂದೊಂದು ಎಂಎಲ್ಎ ಅಥವಾ ಎಂಎಲ್ಸಿ ಕುಂಬಾರ ಅಭ್ಯರ್ಥಿಗಳನ್ನು ಈವಾಗಲೇ ಕಣಕ್ಕಿಳಿಸಬೇಕಿತ್ತು. ಕೋಲಾರದ ಆಯುರ್ವೇದ ವೈದ್ಯ ಡಾ. ನಾಗರಾಜ ಕುಂಬಾರ ಪಕ್ಷೇತರರಾಗಿ ವಿಧಾನಪರಿಷತ್ ಗೆ ಸ್ಪರ್ಧೆ ಮಾಡುತ್ತಿರುವುದನ್ನು ಬಿಟ್ಟರೆ ಪಕ್ಷಗಳ ಬಾಗಿಲು ಬಡಿದು ಸೀಟ್ ಪಡೆಯುವ ಕೆಲಸ ನಮ್ಮಿಂದ ಸಾಧ್ಯ ಆಗಲೇ ಇಲ್ಲ. ಇನ್ನು ಆಗುವುದಾದರೂ ಯಾವಾಗ ಹೇಳಿ ? ಕುಂಬಾರರ ಧ್ವನಿ ವಿಧಾನ ಸಭೆ/ ವಿಧಾನ ಪರಿಷತ್ ಹಾಗೂ ಸಂಸತ್ ನಲ್ಲಿ ಕೇಳುವುದಾದರೂ ಯಾವಾಗ ?
ಡಾ. ಎಂ. ಅಣ್ಣಯ್ಯ ಕುಲಾಲ್, ಉಳ್ತೂರು


