ಬಂಟ್ವಾಳ: ನಮ್ಮನ್ನು ಏಣಿಗಳಾಗಿ ಉಪಯೋಗಿಸಿ, ಉಳಿದವರು ಮೇಲಕ್ಕೇರಿ ನಮ್ಮನ್ನೇ ಮರೆಯುತ್ತಾರೆ. ಕುಲಾಲರು ಸಜ್ಜನರು, ಸತ್ಯವನ್ನೇ ನಂಬಿ ಮೋಸ ಹೋಗುವವರು. ಆದುದರಿಂದ ಮುಂದಿನ ದಿನಗಳಲ್ಲಿ ಜಾಗೃತರಾಗಿರಬೇಕೆಂದು ಪುರಸಭಾ ಸದಸ್ಯ ಸದಾಶಿವ ಬಂಗೇರ ಕರೆ ನೀಡಿದರು.
ಅವರು ದ.ಕ.ಜಿ.ಪಂ. ಮಾ.ಹಿ.ಪ್ರಾ.ಶಾಲೆ ತುಂಬೆ ಇಲ್ಲಿ ಕುಲಾಲ ಸೇವಾ ಸಂಘ ತುಂಬೆ ಇದರ ವತಿಯಿಂದ ಇತ್ತೀಚೆಗೆ ಶಾಲಾ ಮಕ್ಕಳಿಗೆ 2ನೇ ವರ್ಷದ ಉಚಿತ ಬರೆಯುವ ಪುಸ್ತಕ (1 ರಿಂದ ಪಿಯುಸಿ) ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಾವು ಸಾಮಾಜಿಕ ಕೆಟ್ಟ ಚಟಗಳಾದ ಕುಡಿತ, ಧೂಮಪಾನ, ಜೂಜು, ಇವುಗಳಿಂದ ದೂರವಿದ್ದು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗಾಧರ ಶೇರಾ ಇವರು ಮಾತನಾಡಿ ಇದೊಂದು ಸ್ತುತ್ಯಾರ್ಹ ಕಾರ್ಯಕ್ರಮ. ಇದರ ಸದುಪಯೋಗವನ್ನು ಮಕ್ಕಳು ಪಡೆಯುವುದರ ಮೂಲಕ ಒಳ್ಳೆಯ ಶಿಕ್ಷಣವನ್ನು ಪಡೆದು, ಮುಂದೆ ತಾವು ಕೂಡಾ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಸಹಕರಿಸಬೇಕೆಂದು ಕರೆ ನೀಡಿದರು.
ಸಂಘದ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ರವರು ಮಾತನಾಡಿ 2ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಗತ ವರ್ಷದಲ್ಲಿ ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ, ಬಡ ಜನರ ರೋಗ ಚಿಕಿತ್ಸೆಗೆ ಆರ್ಥಿಕ ಸಹಾಯ, ಮನೆ ಕಟ್ಟಲು ಆರ್ಥಿಕ ಸಹಾಯ ನೀಡಲಾಗಿದೆ ಎಂದರು. ಅದಲ್ಲದೆ ಈ ವರ್ಷ 10ನೇ ತರಗತಿಯಲ್ಲಿ 91% ಅಂಕ ಗಳಿಸಿದ ಸಹನಾ ಎಂಬ ಬಾಲಕಿಗೆ ನಗದು ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಹಾಗೂ ಮನೆ ಕಟ್ಟಲು ಶ್ರೀಧರ ಎಂಬವರಿಗೆ ಧನ ಸಹಾಯ ನೀಡುವುದಾಗಿ ಕಾರ್ಯಕ್ರಮದಲಿ ಹೇಳಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ನೀಲಪ್ಪ ಸಾಲ್ಯಾನ್, ಉಪಾಧ್ಯಕ್ಷರಾದ ನಾಗೇಶ್, ಕಾರ್ಯದರ್ಶಿ ದಿವಾಕರ ಪೇರ್ಲಬೈಲು, ಖಜಾಂಚಿ ಜಯಂತ, ಜತೆ ಕಾರ್ಯದರ್ಶಿ ಗಳಾದ ಸಂದೀಪ ಹಾಗೂ ಶಿವಣ್ಣ ಉಪಸ್ಥಿತರಿದ್ದರು . ಸಂಜನಾ ಪ್ರಾರ್ಥನೆಯನ್ನು ಹಾಡಿದರು. ದಿನೇಶ್ ಸ್ವಾಗತಿಸಿದರು. ಅನುಶ್ರೀ ವಂದಿಸಿದರು. ಭಾರತಿ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು. .
ನಂತರ ನಡೆದ ಮಹಾಸಭೆಯಲ್ಲಿ ಭಾಸ್ಕರ ವರದಿ ವಾಚಿಸಿದರು. ಹಾಗೂ ಮುಂದಿನ ಸಾಲಿಗೆ ಗೌರವಾಧ್ಯಕ್ಷರಾಗಿ ಶೇಷಪ್ಪ ಮಾಸ್ಟರ್, ಅಧ್ಯಕ್ಷರಾಗಿ ನೀಲಪ್ಪ ಸಾಲ್ಯಾನ್, ಉಪಾಧ್ಯಕ್ಷರಾಗಿ ನಾಗೇಶ್ ಹಾಗೂ ಶ್ರೀಮತಿ ಉಮಾವತಿ, ಜತೆ ಕಾರ್ಯದರ್ಶಿಗಳಾಗಿ ಸಂದೀಪ್ ಮತ್ತು ಗೌರೀಶ್ , ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಶಿವ ಪೇರ್ಲಬೈಲು ಮತ್ತು ಕುಮಾರಿ ತನುಶ್ರೀ, ಖಜಾಂಚಿಯಾಗಿ ಹರೀಶ್ ಪೇರ್ಲಬೈಲು ಅವಿರೋಧವಾಗಿ ಆಯ್ಕೆಯಾದರು. ಹಾಗೂ ಗೌರವ ಸಲಹೆಗಾರರನ್ನು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.