ಬಂಟ್ವಾಳ : ಮರಳು ಸಾಗಾಟದ ಲಾರಿಯೊಂದು ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು-ಮಣಿಹಳ್ಳ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕು, ಗುರುವಾಯನಕೆರೆ ಸಮೀಪದ ಪಡಂಗಡಿ ಡೆಕ್ಕಲೊಟ್ಟು ಎಂಬಲ್ಲಿನ ನಿವಾಸಿ ಚೆನ್ನಪ್ಪ ಮೂಲ್ಯ ಅವರ ಪುತ್ರ ಸಂತೋಷ್ ಮೂಲ್ಯ (22) ಎಂದು ಹೆಸರಿಸಲಾಗಿದ್ದು, ಗಾಯಾಳುವನ್ನು ಈತನ ಸ್ನೇಹಿತ ಅಶ್ವತ್ಥ್ (21) ಎಂದು ಹೆಸರಿಸಲಾಗಿದೆ. ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಸಮೀಪ ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವೇಳೆ ಮರಳು ತುಂಬಿಸಿಕೊಂಡು ಯಮವೇಗದಲ್ಲಿ ಸಾಗಿ ಬಂದ ಲಾರಿಯಿಂದು ಬೈಕ್ ಸಹಿತ ಇವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಇಬ್ಬರು ಸವಾರರು ಕೂಡಾ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಸಂತೋಷ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಗಾಯಾಳು ಅಶ್ವತ್ಥ್ ಸ್ಥಿತಿಯೂ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಬಿ ಸಿ ರೋಡು ಸಮೀಪದ ಕೈಕಂಬ ಎಸ್ ಆರ್ ಸಿವಿಲ್ ಕಂಟ್ರಾಕ್ಟರ್ ಇದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಮಂಗಳವಾರ ಸಂಜೆಯ ಬಳಿಕ ಕೆಲಸ ಮುಗಿಸಿ ಹೊರಡುತ್ತಿದ್ದ ವೇಳೆ ರಾತ್ರಿ ಜಕ್ರಿಬೆಟ್ಟಿ ಸಮೀಪ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಧಾವಿಸಿ ಬಂದ ಮರಳು ಸಾಗಾಟದ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ನಿಲ್ಲದ ಮರಳು ಲಾರಿ ಧಾವಂತ : ಸಾರ್ವಜನಿಕ ಆಕ್ರೋಶ
ತಾಲೂಕಿನ ಪ್ರಮುಖ ಹೆದ್ದಾರಿಗಳಲ್ಲಿ ಮರಳು ಸಾಗಾಟದ ಯಮರೂಪಿ ಲಾರಿಗಳ ಆರ್ಭಟ ಎಗ್ಗಿಲ್ಲದೇ ಮುಂದುವರಿದಿದ್ದು, ಇದು ದ್ವಿಚಕ್ರ ವಾಹನ ಸವಾರರ ಹಾಗೂ ಪಾದಚಾರಿಗಳ ಜೀವದ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿ ಘಟನಾ ಸ್ಥಳದಲ್ಲಿ ನೆರೆದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಲಾರಿ ಚಾಲಕನ ಮೇಲೆ ಹಲ್ಲೆಗೂ ಮುಂದಾದ ಘಟನೆಯೂ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಮರಳು ಸಾಗಾಟ ಲಾರಿಗಳ ಮೇಲೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತೋರುತ್ತಿರುವ ವಿಶೇಷ ಮಮಕಾರವೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದ್ದು, ಇದು ಬಡಪಾಯಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶಿತರಾಗುತ್ತಾರೆ. ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ತಾಲೂಕಿನ ತುಂಬೆ ಹಾಗೂ ಬಂಟ್ವಾಳದಲ್ಲಿ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಮರಳು ಸಾಗಾಟದ ಲಾರಿಗಳ ಭರ್ಜರಿ ಬೇಟೆ ನಡೆಸಲಾಗಿತ್ತಾದರೂ ರಾಜಕೀಯ ಒತ್ತಡದಿಂದಾಗಿ ಯಾವುದೇ ಕ್ರಮ ಕೈಗೊಳ್ಳದೆ ಹಾಗೇ ಬಿಟ್ಟು ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡಿರುವ ಲಾರಿಗಳ ಪೈಕಿ ಪ್ರತಿಷ್ಠಿತರ ಲಾರಿಗಳನ್ನು ಹಾಗೆಯೇ ಬಿಟ್ಟ ಅಧಿಕಾರಿಗಳು ಕೆಲ ಲಾರಿಗಳಿಗೆ ಮಾತ್ರ ಕಾಟಾಚಾರದ ದಂಡ ವಿಧಿಸಿ ಬಿಟ್ಟು ಬಿಟ್ಟಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಇಂತಹ ಮಲತಾಯಿ ಧೋರಣೆ ಹಾಗೂ ಮರಳು ಮಾಫಿಯಾ ಮೇಲೆ ಜಿಲ್ಲಾಡಳಿತ ಕೂಡಾ ಲಘುವಾಗಿ ವರ್ತಿಸುತ್ತಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂದು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.
ಜಕ್ರಿಬೆಟ್ಟು ಮರಳು ಲಾರಿ ಅಪಘಾತ : ಪಡಂಗಡಿ ನಿವಾಸಿ ಸಂತೋಷ್ ಮೂಲ್ಯ ಸಾವು
Kulal news
2 Mins Read