ಕುಂಬಾರರು ನದಿ, ಕಾಡು, ಬಯಲು, ಮಣ್ಣು, ಗಾಳಿ, ಬೆಂಕಿ ದುಡಿಮೆಗಳನ್ನು ನಂಬಿ ಬದುಕುವ ಒಂದು ಪಂಗಡ. ಅವರು ಬದುಕಿಗಾಗಿ ಪರಿಪಡುವ ಕಷ್ಟ-ನಷ್ಟಗಳನ್ನು ಪರಿಶೀಲಿಶಿದಾಗ ಅವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂಬ ಕೂಗೊಂದು ಹತ್ತಾರು ವರ್ಷಗಳ ಹಿಂದೆಯೇ ಕೇಳಿ ಬಂದಿದೆ.
ಚತ್ತೀಸ್ ಘಡ, ಹಿಮಾಚಲ ಪ್ರದೇಶ, ಗುಜರಾತ್, ಪಂಜಾಬ್, ಉ. ಪ್ರ, ಮಧ್ಯಪ್ರದೇಶ, ಪ. ಬಂಗಾಳ, ಕೇರಳ, ತಮಿಳನಾಡುಗಳಲ್ಲಿ ಹಳ್ಳಿಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಡಿಕೆ -ಕುಡಿಕೆ ಮಾಡಿಕೊಂಡು ಬದುಕುವ ಕುಂಬಾರ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸಬೇಕಾದರೆ ಅವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಅಂತ ಮನಗಂಡು ಅವರಿಗೆ ಕುಂಭ ಕಲಾ ನಿಗಮದ ಮೂಲಕ ಆ ಸೇವೆ ದೊರೆಯುವಂತೆ ಮಾಡಲು ಸರಕಾರಗಳು ಮನಮಾಡಿವೆ.
ಕೇರಳದಲ್ಲಿ ಅಲ್ಲಿಯ ಕುಂಬಾರ ನಾಯಕರಾದ ಸುಭಾಷ ಘೈ ಹಾಗೂ ರಾಜೇಶ್ ಮುಂತಾದವರ ಹೋರಾಟದಿಂದ ಮಣ್ ಪಾತ್ರ ನಿರ್ಮಿತ ಕುಂಬಾರರಿಗೆ ವಿಶೇಷ ವಾಗಿ ಪ್ರತ್ಯೇಕವಾಗಿ ಶಿಕ್ಷಣ ದಲ್ಲಿ ಶೇಕಡಾ ೧ ಮೀಸಲಾತಿ ಸಿಕ್ಕಿದೆ. ಈ ಮೊದಲು ಒಂದೋ-ಎರಡೋ ವೈದ್ಯಕೀಯ ಸೀಟು ಕುಂಬಾರರಿಗೆ ಸಿಗುತ್ತಿದ್ದರೆ ಈ ಬಾರಿ ಹೊಸ ಮೀಸಲಾತಿ ಬಂದ ಮೇಲೆ ಸಾಕಷ್ಟು ಕುಂಬಾರ ಸಮಾಜದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಕ್ಕಿದೆ. ಇದರಿಂದ ಪ್ರೇರಣೆ ಪಡೆದ ಅಲ್ಲಿಯ ಮಣ್ಣ ಪಾತ್ರ ನಿರ್ಮಾತೃ ಸಂಘದವರು ನೌಕರಿಯಲ್ಲೂ ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಸರಕಾರದ ಗಮನಸೆಳೆದಿದ್ದಾರೆ.

ಕರ್ನಾಟಕದಲ್ಲಿ ಹತ್ತು ವರ್ಷಗಳ ಹಿಂದೆ ನಾವು ಕುಂಬಾರರನ್ನು, ಹಳ್ಳಿಗಳಲ್ಲಿ ಮಡಿಕೆ ಮಾಡಿ ಬದುಕುವವರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದಾಗ ನಮ್ಮ ಕುಂಬಾರ ಜನಾಂಗದ ಕೆಲ ನಾಯಕರೇ ನಮಗೆ ಪರಿಶಿಷ್ಟ ಜಾತಿ ಬೇಡವೇ ಬೇಡ ಅಂತ ವಿರೋಧಿಸಿದವರೂ ಇದ್ದರು. ಅಂದು ಕುಂಬಾರ ಜನಾಂಗದ ಕೆಲವೊಂದು ಉಪ ವರ್ಗದವರು ನಾವು ಕುಂಬಾರರು ಎಂದು ಹೇಳಲೂ ಹಿಂಜರಿದರು.
ನಂತರ ಯಡಿಯೂರಪ್ಪ ಸರಕಾರ ಕುಂಭ ಕಲಾ ನಿಗಮದ ಮೂಲಕ ಕುಂಬಾರರಿಗೆ ಸವಲತ್ತು ನೀಡಲು ತೊಡಗಿದ ಮೇಲೆ ಈಗ ಹಲವರು ಕುಂಬಾರ ಮನಸ್ಥಿತಿಗೆ ಒಗ್ಗಿಕೊಂಡಿದ್ದಾರೆ ಎಂಬುದು ಸಂತಸಪಡುವ ವಿಚಾರ. ಇನ್ನಾದರೂ ಬಡ ಕುಂಬಾರರನ್ನು ಮೇಲೆತ್ತ ಬೇಕಾದರೆ ಸಂಘ ಸಂಸ್ಥೆಗಳು ಪರಿಶಿಷ್ಟ ಜಾತಿ ಯಾ ಪಂಗಡಕ್ಕೆ ಸೇರಿಸಲು ಹೋರಾಡಬೇಕು. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಬದುಕುವ ಕುಂಬಾರರಿಗೆ ಮಾತ್ರ ಸವಲತ್ತು ಸಿಗಬೇಕು. ಈ ಹೋರಾಟವನ್ನು ಸಂಘಗಳ ನಾಯಕರು ಧಾರ್ಮಿಕ ಸಾಮಾಜಿಕ ರಾಜಕೀಯ ನಾಯಕರುಗಳ ಮುಖಾಂತರ ಮಾಡಿಸಬೇಕು.
ಬಿಲ್ಡಿಂಗ್ ಕಟ್ಟಲು, ಬ್ಯಾಂಕ್ ಕಟ್ಟಲು, ದೇವಸ್ಥಾನಗಳನ್ನು ಕಟ್ಟಲು ನಾವು ಹಾಕುವ ಪ್ರಯತ್ನದ ಶೇಕಡಾ ಒಂದು ಭಾಗವನ್ನು ಈ ಹೋರಾಟಕ್ಕೆ ಇಡಬೇಕು. ಯಾವುದೇ ಜಾತಿ ಸಂಘ ಗಳು ಹುಟ್ಟಿಕೊಂಡದ್ದು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಹೊರತು, ನಮ್ಮ ನಮ್ಮ ಸಹಾಯಕ್ಕೆ ಅಥವಾ ಸ್ವ ಪ್ರತಿಷ್ಠೆ ಮೆರೆಯಲು ಅಲ್ಲ ಎಂಬ ಅರಿವು ನಮಗೆ ಇರಬೇಕು.
ಈ ಹಿಂದೆ ಬಿಲ್ಡಿಂಗ್ , ದೇವಸ್ಥಾನ, ಬ್ಯಾಂಕ್ ಗಳನ್ನ ಸಮಾಜದ ಹಿರಿಯರು ಕಟ್ಟಲು ಪ್ರಯತ್ನಿಸಿದ್ದು ಆ ಮೂಲಕ ಜಾತಿಯ ಬಡವರಿಗೆ ಸಹಾಯ ಮಾಡಲು. ಅದರಿಂದ ಬಂದ ಲಾಭದಿಂದ ಸಂಘದ ಮೂಲಕ ಬಡವರಿಗೆ ನೀಡಬೇಕೆಂಬ ದೊಡ್ಡ ಆಶೆಯಿಂದ ಎಂಬುದನ್ನು ನಾವು ಮರೆಯಬಾರದು. ಇಂದು ಎಲ್ಲಾ ಜಾತಿಗಳಲ್ಲೂ ಬ್ಯಾಂಕ್, ದೇವಸ್ಥಾನ ಬಿಲ್ಡಿಂಗ್ ಗಳು ಪ್ರತಿಷ್ಠೆ /ಅಹಂಕಾರದ ವಿಷಯವಾಗಿ ಕೋರ್ಟು-ಕಟ್ಟಳೆಯವರೆಗೆ ಮುಟ್ಟಿವೆ. ಜಾತಿ ಸಂಘಗಳಲ್ಲಿ ಬಡವ -ಶ್ರೀಮಂತರ ನಡುವೆ ದೊಡ್ಡ ಕಂದಕ ಏರ್ಪಟ್ಟಿವೆ.
ಜಾತಿಯ ಬಡವರಿಗೆ ಸಹಾಯ ಮಾಡಲು ಸಂಘಗಳ ಮೂಲಕ ಹಿರಿಯರು ಹುಟ್ಟು ಹಾಕಿದ ಆರ್ಥಿಕ ಸಂಸ್ಥೆಗಳು ಸಂಘಗಳಿಂದ ದೂರವಾಗಿ ಮೂಲ ಉದ್ದೇಶವನ್ನೇ ಮರೆತು ಪೈಪೋಟಿಯ ಕೇಂದ್ರಗಳಾಗಿವೆ. ಕುಂಬಾರ ಜನಾಂಗದಲ್ಲಿ ಇಂಥ ಕೇಸುಗಳು ಕೋರ್ಟ್ ವರೆಗೂ ಮುಟ್ಟದಿದ್ದರೂ ಬೇರೆ ಜಾತಿಗಲ್ಲಿ ಅವು ಸಾಮಾಜಿಕ ಅಶಾಂತಿಗೂ ಕಾರಣ ವಾಗಿದ್ದನ್ನು ನಾವು ನೋಡಿದ್ದೇವೆ. ಹಾಗಾಗಿ ಎಲ್ಲಾ ಕುಂಬಾರ ಸಂಘಟನೆಗಳು ಸಮಾಜ ಬಾಂಧವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಕ್ಕೊತ್ತಾಯ ಮಾಡಬೇಕು ಈ ಕೆಲಸವಾದರೆ ಪ್ರತೀ ವರ್ಷ ಕುಂಬಾರ ಸಂಘಗಳು ಬಡ ವಿದ್ಯಾರ್ಥಿಗಳಿಗೆ, ಬಡ ಕುಂಬಾರರಿಗೆ ಸಹಾಯ ಮಾಡಲು ಮನೆ ಮನೆಗೆ ತಿರುಗುವ ಕಾರ್ಯ ನಿಲ್ಲುತ್ತದೆ. ದಿನಾ ತಿನ್ನಲು ಒಂದೊಂದು ಮೀನನ್ನು ಕೊಡುವ ಬದಲು ಗಾಳ ಹಾಕಿ ಮೀನನ್ನು ಹಿಡಿಯಲು ನಾವು ಕಲಿಸುವ ಕೆಲಸವನ್ನು ಸಂಘಗಳ ಮೂಲಕ ಮಾಡಬೇಕು. ಜಾತಿ ಹೋರಾಟವನ್ನು ಸಾಮಾಜಿಕ ನ್ಯಾಯದ, ಆರ್ಥಿಕ ಸಬಲೀಕರಣದ ರಾಜಕೀಯ ಹೋರಾಟವನ್ನಾಗಿ ಮಾರ್ಪಡಿಸಿಕೊಂಡು ಧಾರ್ಮಿಕ, ಸಾಮಾಜಿಕ , ರಾಜಕೀಯ ನಾಯಕರ ಸಂತುಲಿತ ಕೂಡುವಿಕೆಯಿಂದ ಕುಂಬಾರರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹಿಂದೆ ಬೀಳಬಾರದು. ಯಾರ್ಯಾರು ಎಲ್ಲೆಲ್ಲಿ ಇದ್ದರೂ ಅಲ್ಲಿಂದಲೇ ಕುಂಬಾರರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಮೊದಲು ಕೀಳರಿಮೆ ಬಿಡಬೇಕು. ಹಮ್ಮು-ಬಿಮ್ಮು ಬಿಟ್ಟು ಮೈಕೊಡವಿ ಎದ್ದೇಳಬೇಕು. ಇದು ಇಂದು ಕುಂಬಾರ ಜನಾಂಗದ ಬಡವರ ಸುಂದರ ನಾಳೆಗಳಿಗಾಗಿ ನಾವು ಕೊಡಬಹುದಾದ ಬಹುದೊಡ್ಡ ಕೊಡುಗೆ.
ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು



