ಉಡುಪಿ: ಆರ್ಥಿಕವಾಗಿ ಅಶಕ್ತವಾಗಿದ್ದು, ಬಸವ ಕಲ್ಯಾಣ ಯೋಜನೆಯಲ್ಲಿ ಮನೆ ನಿರ್ಮಿಸಲೂ ಸಾಧ್ಯವಾಗದೆ ಇದ್ದ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್ನ ವಿದ್ಯಾರ್ಥಿನಿ ಕುಕ್ಕೆಹಳ್ಳಿ ಹೊಸಂಗಡಿಯ ಲಲಿತಾ-ಸುಧಾಕರ್ ದಂಪತಿಯ ಪುತ್ರಿ ಸುಪ್ರೀತಾ ಕುಲಾಲ್ ಅವರಿಗೆ ದಾನಿಗಳ ಸಹಾಯದಿಂದ ಕಲಾರಂಗದ ವತಿಯಿಂದ ಸುಸಜ್ಜಿತ ಹೆಂಚಿನ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜೂ. 1ರಂದು ವಿದ್ಯಾರ್ಥಿನಿಯ ಮನೆಗೆ ತೆರಳಿ ದೀಪ ಬೆಳಗಿಸಿ ಮನೆಯನ್ನು ಹಸ್ತಾಂತರಿಸಿದರು. ಕಿದಿಯೂರು ಹೊಟೇಲಿನ ಮುಖ್ಯಸ್ಥ ಭುವನೇಂದ್ರ ಕಿದಿಯೂರು, ಉದ್ಯಮಿ ವಿಶ್ವನಾಥ ಶೆಣೈ, ಪುರುಷೋತ್ತಮ ಪಟೇಲ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮತ್ತು ಗಂಗಾಧರ ರಾವ್, ಎಸ್.ವಿ. ಭಟ್, ಭುವನಪ್ರಸಾದ್ ಹೆಗ್ಡೆ, ಬಿರ್ತಿ ರಾಜೇಶ್ ಶೆಟ್ಟಿ, ಪ್ರೊ| ಎಂ.ಎಲ್. ಸಾಮಗ, ಪಕ್ಕಾಲು ರಾಮ ಕುಲಾಲ್, ಮಣಿಪಾಲದ ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾಪೋಷಕ್ನ ಒಟ್ಟು ಐವರು ಬಡವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಸರಕಾರಿ ಯೋಜನೆಗಳ ಮೂಲಕ ಮನೆ ನಿರ್ಮಿಸಲು ಬಡವರಿಗಂತು ಸಾಧ್ಯವಿಲ್ಲದ ಸ್ಥಿತಿ. ಈಕೆಯ ಮನೆಯ ಪರಿಸ್ಥಿತಿಯಿಂದ ಅದನ್ನು ನಾವು ಅರಿತುಕೊಂಡೆವು. ಇನ್ನೂ 1 ಸಾವಿರ ಅರ್ಜಿಗಳು ಕಲಾರಂಗಕ್ಕೆ ಬಂದಿವೆ. ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದರು.
ಪರಿಸ್ಥಿತಿ ಕಂಡು ಸ್ವಯಂದಾನ: ಕಲಾರಂಗದವರು ಮನೆ ಪರಿಸ್ಥಿತಿ ಅರಿತುಕೊಳ್ಳಲು ಸುಪ್ರೀತಾಳ ಮನೆಗೆ ಬಂದಿದ್ದಾಗ ಅಲ್ಲಿನ ದುಃಸ್ಥಿತಿ ಕಂಡು ಮರುಗಿದ್ದಾರೆ. ಹೀಗಾಗಿ ಹೆಂಚು,ಟೈಲ್ಸ್, ವಿದ್ಯುತ್, ಕಲ್ಲು, ಮರ, ಸಿಮೆಂಟು, ಕೆಲಸಗಾರರು ಹೀಗೆ ಆಯಾಯ ಒಂದೊಂದು ಕಾರ್ಯವನ್ನು ಒಬ್ಬೊಬ್ಬಕಲಾರಂಗದ ದಾನಿಗಳು ಒಟ್ಟುಗೂಡಿಸಿ ಉತ್ತಮ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಇಂತಹ ಮನೆ ನಿರ್ಮಾಣಕ್ಕೆ ಸರಿಸುಮಾರು ಐದಾರು ಲಕ್ಷ ರೂ. ಬೇಕು.ಸುಪ್ರೀತಾಳ ಮಾತು: ಪೆರ್ಡೂರಿನಲ್ಲಿ ಪ್ರಥಮ ಪಿಯುಸಿ ಕಲಿತಿದ್ದೆ. ಆಗ ಮಿತ್ರೆ ದಿವ್ಯಾ ಕಲಾರಂಗದ ವಿದ್ಯಾಪೋಷಕ್
ನ ಬಗ್ಗೆ ತಿಳಿಸಿದಳು. ಅದರಂತೆ ಸನಿವಾಸ ಶಿಬಿರದಲ್ಲಿಯೂ ಪಾಲ್ಗೊಂಡು ಬಳಿಕ ಮುರಲಿ ಕಡೆಕಾರ್ ಅವರಲ್ಲಿ ತನ್ನ ಮನೆ ಗೋಳನ್ನೆಲ್ಲ ಹೇಳಿಕೊಂಡೆ. ಅವರು ಬಂದು ಮನೆಯ ಕಷ್ಟ ನೀಗಿಸಿದರು ಎಂದು ಸುಪ್ರೀತಾ ಹೇಳಿದ್ದಾರೆ.
“ಮಠದಿಂದ ವಿದ್ಯಾರ್ಜನೆಯ ಸಂಪೂರ್ಣ ವೆಚ್ಚ’
ಬಡ ವಿದ್ಯಾರ್ಥಿನಿ ಸುಪ್ರೀತಾ ಕುಲಾಲ್ ಅವರ ಮನೆ ಪರಿಸ್ಥಿತಿ ಕಂಡ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ವಿದ್ಯಾರ್ಥಿನಿಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಶ್ರೀ ಕಾಣಿಯೂರು ಮಠದಿಂದ ಭರಿಸುವುದಾಗಿಯೂ, ಹಣವನ್ನು ಕಲಾರಂಗದ ಮೂಲಕ ನೀಡುವುದಾಗಿ ಘೋಷಿಸಿದರು. ಹಳ್ಳಿಗಳಲ್ಲಿ ಇಂದಿಗೂ ಮನೆ ಇಲ್ಲದವರು ಬಹಳ ಮಂದಿ ಇದ್ದಾರೆ. ಅಂತವರನ್ನು ಗುರುತಿಸಬೇಕು. ಕಲಾರಂಗ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಶಾಶ್ವತ, ಯೋಗ್ಯ ಕಾರ್ಯ ಮಾಡಿದೆ ಎಂದು ಕಾಣಿಯೂರು ಶ್ರೀ ಹೇಳಿದರು.