ವಿದ್ಯಾರ್ಥಿ ಜೀವನದ ಶ್ರಮದಿಂದ ಸಮಾಜದಲ್ಲಿ ಉನ್ನತ ಸ್ಥಾನ: ಶಿಕ್ಷಕ ನಾಗಭೂಷಣ್
ವೇಣೂರು: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡರೆ ಜೀವನಪೂರ್ತಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಬಹುದು. ಸಮಾಜ ಬಾಂಧವರು ತಮ್ಮ ಸಮಾಜದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹೆಚ್ಚೆಚ್ಚು ಆರ್ಥಿಕ ಸಹಕಾರ ನೀಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಜೊತೆಗೆ ಸಮಾಜವು ಆರ್ಥಿಕ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಸುಲ್ಕೇರಿಮೊಗ್ರು ಶಾಲೆಯ ಶಿಕ್ಷಕ ನಾಗಭೂಷನ್ ಹೇಳಿದರು.
ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ರವಿವಾರ ವೇಣೂರು ಮೂಲ್ಯರ ಯಾನೆ ಕುಲಾಲರ ಸಂಘ ಇದರ ಆಶ್ರಯದಲ್ಲಿ ಜರಗಿದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಡಿಕಯ್ಯ ಕುಲಾಲ್ ಮಾತನಾಡಿ, ಸಾಧನೆಗೆ ಸಾಧಿಸುವ ಛಲವಿರಬೇಕು, ಛಲವಿದ್ದವರಿಗೆ ಸಾಧನೆಯ ದಾರಿ ಸುಲಭವಾಗುತ್ತದೆ, ಹೆತ್ತವರ ಸಹಕಾರ, ಶಿಕ್ಷಕರ ಮಾರ್ಗದರ್ಶನದ ಮೂಲಕ ಕಠಿಣ ಶ್ರಮ ವಹಿಸಿದರೆ ಯಶಸ್ಸಿನ ದಾರಿ ಸುಲಭ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು.
ಸಮ್ಮಾನ:
ಕುಲಕಸುಬುದಾರ ನಾರಾಯಣ ಮೂಲ್ಯ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದಾರ ಸಮಿತಿ ಕಾರ್ಯಾಧ್ಯಕ್ಷ ಸೋಮಯ್ಯ ಮೂಲ್ಯ ಹಾಗೂ ನಾಟಕ ನಿರ್ದೇಶಕ, ವೇಣೂರು ಗ್ರಾ.ಪಂ.ನ ನೂತನ ಸದಸ್ಯ ನೇಮಯ್ಯ ಕುಲಾಲ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮೂಲ್ಯರ ಯಾನೆ ಕುಲಾಲರ ಸಂಘ ಗುರುವಾಯನಕೆರೆ ಇದರ ಅಧ್ಯಕ್ಷ ಪದ್ಮ ಮೂಲ್ಯ ಅನಿಲಡೆ ಹಾಗೂ ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.
”ಸಮಾಜ ಬಾಂಧವರು ತಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಆರ್ಥಿಕ ಸಹಾಯ ನೀಡುವ ಮನೋಭಾವ ಬೆಳೆಸಿಕೊಂಡರೆ ಉಳಿದ ಸಮಾಜದಂತೆ ಕುಲಾಲ ಸಮಾಜವೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು”
–ಡೀಕಯ್ಯ ಕುಲಾಲ್, ಅಧ್ಯಕ್ಷರು ಮೂಲ್ಯರ ಯಾನೆ ಕುಲಾಲರ ಸಂಘ ವೇಣೂರು
ವರದಿ : ಪದ್ಮನಾಭ ಕುಲಾಲ್, ವೇಣೂರು