ಬೆಳಗಾವಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 96 ಅಂಕ ಪಡೆದ ಬಾಲಕಿ ವಿರೂಪಾಕ್ಷಿ ಕವಟಗಿ ಚಿಕ್ಕೋಡಿ ಇರುವುದು ಗುಡಿಸಲಿನಲ್ಲಿ ಅದಕ್ಕೆ ಬಾಗಿಲು ಇಲ್ಲ, ವಿದ್ಯುತ್ ಸಂಪರ್ಕವಂತೂ ಇಲ್ಲವೇ ಇಲ್ಲ. ಅಂತಹ ಮನೆಯಲ್ಲಿಯೇ ದೀಪದ ಬೆಳಕಲ್ಲಿ ಓದಿ, ಬಡತನವನ್ನು ಮೆಟ್ಟಿ ನಿಂತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 96 ರಷ್ಟು ಅಂಕ ಪಡೆದು ಉನ್ನತ ಸಾಧನೆ ಮಾಡಿದ ಬಾಲಕಿಯೊಬ್ಬಳ ಯಶೋಗಾಥೆ ಇದು.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸರಕಾರಿ ಶಾಲೆಯ ವಿದ್ಯಾರ್ಥಿನಿ ಶ್ರುತಿ ರಾಮ ಕುಂಬಾರ ಶೇ. 96ರಷ್ಟು ಅಂಕ ಗಳಿಸಿ, ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ತಂದೆ ರಾಮ ಶಿವಪ್ಪ ಕುಂಬಾರ ಕೂಲಿ ಕಾರ್ಮಿಕ. ತಾಯಿ ಅನುಸೂಯಾ ಕುಂಬಾರ ಕೂಡ ಅವರಿವರ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ರಾಮ ಶಿವಪ್ಪ ಕುಂಬಾರ ದಂಪತಿಯ ನಾಲ್ವರು ಮಕ್ಕಳಲ್ಲಿ ಶ್ರುತಿ ಮೂರನೆಯವಳು. ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋದರೆ ಶ್ರುತಿ ಮನೆ ಕೆಲಸ ಮಾಡಿಕೊಂಡು ಶಾಲೆಗೆ ಹೋಗಿ ಅಕ್ಷರಾಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾಳೆ. ಮನೆಯಲ್ಲಿ ಬಡತನವಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವ ಕುಂಬಾರ ಗುಡಿಸಲಿನಲ್ಲಿ ಈಗ ಸಂಭ್ರಮ ಮನೆ ಮಾಡಿದೆ.



