ಬಂಟ್ವಾಳ: ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಬಲಿಷ್ಠನಾಗಬೇಕು. ಕೇವಲ ಒಂದು ಜಾತಿ ಅಥವಾ ವರ್ಗದ ಜನ ಬಲಿಷ್ಠರಾದರೆ ಸುಂದರ ಸಮಾಜ ನಿರ್ಮಾಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಡಾ. ಅಮ್ಮೆಂಬಳ ಬಾಳಪ್ಪನವರು ಶ್ರಮವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಬಂಟ್ವಾಳ ಬೈಪಾಸ್ನಲ್ಲಿರುವ ಸಮಾಜಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಡಾ. ಅಮ್ಮೆಂಬಳ ಬಾಳಪ್ಪನವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕಾಗಿ ಶ್ರಮವಹಿಸಿದವರನ್ನು ನೆನಸಿಕೊಳ್ಳವುದು ನಮ್ಮ ಧರ್ಮ. ಡಾ. ಬಾಳಪ್ಪ ಅವರ ಅಪೇಕ್ಷೇಗೆ ಅನುಗುಣವಾಗಿ ನಾವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ ಮುಖ್ಯ ಭಾಷಣ ಮಾಡಿ ಡಾ. ಅಮ್ಮೆಂಬಳ ಬಾಳಪ್ಪನವರು ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಬದುಕಿದವರು. ಆದರೆ ಈ ಕಾಲಘಟ್ಟಕ್ಕೆ ಅವರು ಅನುಸರಿಸಿದ ಸಿದ್ದಾಂತಗಳೇ ನಾಶವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾವ್ ಆಚಾರ್ಯ ಅಮ್ಮೆಂಬಳ ಬಾಳಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಪುಣೆ ಹೈಕೋರ್ಟ್ ನ್ಯಾಯವಾದಿ ಅಪ್ಪು ಮೂಲ್ಯ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಸಮಾಜ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸುರೇಶ್ ಕುಲಾಲ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕೇಶವ ಮಾಸ್ತರ್ ಭಾಗವಹಿಸಿದ್ದರು.
ಚಿತ್ರ-ವರದಿ : ಸಂದೀಪ್ ಸಾಲ್ಯಾನ್