ರಾಯಚೂರು : ಅತ್ಯಂತ ಹಿಂದುಳಿದ ಕುಂಬಾರ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಶಿಕ್ಷಣದಿಂದ ಮಾತ್ರ ಸಾಧ್ಯವೆಂದ ಶಾಸಕ ಡಾ.ಶಿವರಾಜ್ ಪಾಟೀಲ್, ಪ್ರತಿಯೊಬ್ಬ ಪಾಲಕ ವರ್ಗ ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಜಾಗೃತಿ ವಹಿಸಿ, ಎಲ್ಲಾ ಕ್ಷೇತ್ರದಲ್ಲಿ ಮುಂದು ಬರುವ ಅತ್ಯಗತ್ಯವಿದೆ ಎಂದರು.
ಅವರಿಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯದಲ್ಲಿ ಅಭಿವೃದ್ಧಿ ಹೊಂದಬೇಕಾದರೆ, ಶಿಕ್ಷಣ ಅತ್ಯವಶ್ಯಕವಾದದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ಮಾಡಬೇಕೆಂದು ತಿಳಿಸಿದರು.
ಕವಿ ಸರ್ವಜ್ಞರವರು ಕುಂಬಾರ ಸಮಾಜದಲ್ಲಿ ಜನಿಸಿ, ಹಲವು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಸರ್ವಜ್ಞರ ಪುತ್ಥಳಿ ಸ್ಥಾಪನೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಅಖಿಲ ಕರ್ನಾಟಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಂಡಪ್ಪ ಬಿರಾದರ್ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿ, ಇತಿಹಾಸದಲ್ಲಿಯೇ ಅತಿ ಹೆಚ್ಚು ವಚನಗಳನ್ನು ರಚಿಸಿದ ಕೀರ್ತಿ ಕವಿ ಸರ್ವಜ್ಞರಿಗೆ ಸಲ್ಲುತ್ತದೆ. ವಚನಗಳ ಮೂಲಕ ಸಮಾಜಕ್ಕೆ ತಮ್ಮದೇಯಾದ ಅಪಾರ ಕೊಡುಗೆ ನೀಡಿದ್ದಾರೆ. ಯಾವುದೇ ಸಮುದಾಯದಲ್ಲಿ ಜನಿಸಿದರೂ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಕುಂಬಾರ ಸಮಾಜದ ಗೌರವಾಧ್ಯಕ್ಷ ವೈ.ಸುರೇಂದ್ರ ಬಾಬು, ಶರಣಪ್ಪ ಗೋನಾಳ್, ನಿವೃತ್ತ ಪಿಎಸ್ಐ ವೀರಭದ್ರಪ್ಪ, ಹನುಮಂತ ನಾಯಕ, ಶಿವರಾಜ್ ಇತರರು ಉಪಸ್ಥಿತರಿದ್ದರು.