ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಮಾರು ರೂ. 1.15 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಬಾರ ಛತ್ರದ ಅಭಿವೃದ್ಧಿ ಮತ್ತು ವಿವಿಧೋದ್ದೇಶ ಟ್ರಸ್ಟ್ನ ಅಧ್ಯಕ್ಷ ವೆಂಕಟಾಚಲಯ್ಯ ಮನವಿ ಮಾಡಿದರು.
ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಕುಂಬಾರರ ಸಮುದಾಯ ಭವನದ ಕೆಳ ಅಂತಸ್ತಿನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಮಾರು 400 ಜನ ಕುಳಿತುಕೊಳ್ಳುವಷ್ಟು ಕುಂಬಾರ ಸಮುದಾಯ ಭವನವನ್ನು ಒಂದೂವರೆ ರೂ. ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕೆಳ ಅಂತಿಸ್ತಿನ ಕಟ್ಟಡವನ್ನು ಉದ್ಘಾಟಿಸಲಾಗಿದ್ದು ಮದುವೆ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ.
ಮುಂದಿನ ದಿನಗಳಲ್ಲಿ ಕಟ್ಟಡವನ್ನು ಪೂರ್ಣಗೊಳಿಸಲಿದ್ದು ಸಮಾಜದವರು ಧನ ಸಹಾಯಕ್ಕೆ ಮುಂದಾಗಬೇಕೆಂದರು. ಹಾಗೆಯೇ ಸಮಾಜದವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿಯಬೇಕು ಎಂದರು.
ಅಖಿಲ ಕರ್ನಾಟಕ ಕುಂಬೇಶ್ವರ ಸೇವಾ ಸಮಿತಿ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಇತ್ತೀಚಿನಲ್ಲಿ ಸಮುದಾಯ ಶೈಕ್ಷಣಿಕ, ರಾಜಕೀಯವಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ರಾಜ್ಯಾದ್ಯಂತ ಕುಂಬಾರರ ವಧು-ವರರ ಸಮಾವೇಶ ನಡೆಸುವುದರ ಮೂಲಕ ಸಮುದಾಯದವರಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ಅಲ್ಲದೆ, ಪ್ರತಿ ವರ್ಷ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಶ್ರೀನಿವಾಸ್, ಉಪಾಧ್ಯಕ್ಷ ಜಯರಾಂ, ಕಾರ್ಯದರ್ಶಿ ಶಶಿಧರ್, ಖಜಾಂಚಿ ಎಚ್.ನಾಗರಾಜು, ಕಾನೂನು ಸಲಹೆಗಾರ ಸಿದ್ದೇಶ್, ಸಹಕಾರ ಕಾರ್ಯದರ್ಶಿ ನಾರಾಯಣಸ್ವಾಮಿ, ಕುಂಬೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ಎಲ್.ಶ್ರೀನಿವಾಸ್ ಹಾಜರಿದ್ದರು.
Posted by : Dinesh Bangera Irvathur/29/03/2016