ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ಅಪರೂಪದ ಕರುವೊಂದು ಜನಿಸಿದೆ. ಇದರಿಂದಾಗಿ ತಾಲೂಕಿನ ಗ್ರಾಮೀಣ ಭಾಗದ ಜನರೂ ಸೇರಿದಂತೆ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ ಆಶ್ಚರ್ಯವನ್ನು ವೀಕ್ಷಿಸಿದ್ದಾರೆ.
ಶಂಕರನಾರಾಯಣದ ಎಡಮಕ್ಕಿ ನಿವಾಸಿ ಗಿರಿಜಾ ಕುಲಾಲ್ ಎಂಬುವರ ಮನೆಯಲ್ಲಿ ಈ ಆಶ್ಚರ್ಯ ನಡೆದಿದ್ದು, ಅಕ್ಟೋಬರ್ ಆರರಂದು ಸಂಜೆ ಜನಿಸಿದ ಈ ಕರುವಿಗೆ ಅಷ್ಟೊಂದು ಆಶ್ಚರ್ಯ ಯಾಕಂತೀರಾ? ಹಾಗಾದರೆ ಈ ಚಿತ್ರವನ್ನೊಮ್ಮೆ ನೋಡಿ.
ಈ ಕರುವಿಗೆ ಎರಡು ಮುಖ, ಎರಡು ಬಾಯಿ, ಎರಡು ಮೂಗು ಅಷ್ಟೇಕೆ ಎರಡು ನಾಲಗೆ, ಜೊತೆಗೆ ಮೂರು ಕಣ್ಣುಗಳು!. ಮುಕ್ಕಣ್ಣ ಕರುವಿನ ಎಡ ಮತ್ತು ಬಲದಲ್ಲಿ ಎರಡು ಕಣ್ಣುಗಳಿದ್ದರೆ ಇನ್ನೊಂದು ಕಣ್ಣು ನೆತ್ತಿಯಲ್ಲಿದೆ. ಕರುವಿಗೆ ಎರಡು ಮುಖಗಳಿರುವುದರಿಂದ ಅತೀ ಭಾರವಾಗಿದ್ದು, ಕರುವಿಗೆ ಮುಖ ವೆತ್ತಲು ಸಾಧ್ಯವಾಗುತ್ತಿಲ್ಲ. ಬಾಯಿಯೂ ಅಗಲವಾಗಿದ್ದು ನೋಡಲು ಎರಡು ಬಾಯಿಯಿದ್ದರೂ ಕೂಡಿಕೊಂಡಿರುವುದುರಿಂದ ಯಾವುದೇ ಆಹಾರ ಸೇವಿಸಲಾಗುತ್ತಿಲ್ಲ. ಉಳಿದಂತೆ ಕರುವಿನ ದೇಹಸ್ಥಿತಿ ಉತ್ತಮವಾಗಿದೆ.
ಮುಕ್ಕಣ್ಣ ಕರುವಿನ ಜನನದಿಂದಾಗಿ ಮನೆಯವರಿಗೆ ಆಶ್ಚರ್ಯ ಹಾಗೂ ಆತಂಕ ಎದುರಾಗಿದೆ. ಇದೀಗ ಈ ಸುದ್ಧಿ ಊರಿಡಿ ಹರಿದಾಡಿ ದೂರದೂರಿನಿಂದ ಈ ಕರುವಿನ ದರ್ಶನಕ್ಕಾಗಿ ಜನ ಬರುತ್ತಿದ್ದಾರೆ. ಆಹಾರ ಸೇವಿಸಲಾಗದ ಪರಿಣಾಮ ಕರು ಎಷ್ಟು ದಿನ ಬದುಕುತ್ತದೆ ಎನ್ನುವುದನ್ನು ಹೇಳಲು ವೈದ್ಯರೂ ನಿರಾಕರಿಸಿದ್ದಾರೆ.