ತುಮಕೂರು: ಕುಂಬಾರರ ಕುಲಕಸುಬು ಕುಂಬಾರಿಕೆ ಮೂಲೆ ಗುಂಪಾಗುತ್ತಿದೆ. ಕುಂಬಾರರ ಮಕ್ಕಳಿಗೆ ಶಿಕ್ಷಣ ಕೊಡಿಸುವವರೆಗೂ ಸಮುದಾಯದಲ್ಲಿ ಬಡತನ ನಿವಾರಣೆ ಆಗುವುದಿಲ್ಲ ಎಂದು ರಾಜ್ಯ ಕುಂಬಾರರ ಸಂಘದ ಉಪಾಧ್ಯಕ್ಷ ವೈದ್ಯನಾಥ ಬಸಪ್ಪ ಕುಂಬಾರ್ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕುಂಬಾರರ ಸಂಘ, ಸರ್ವಜ್ಞ ಯುವ ವೇದಿಕೆ, ಕುಂಬೇಶ್ವರಿ ಮಹಿಳಾ ಸಂಘ ಹಾಗೂ ಕುಂಬೇಶ್ವರಿ ಹಿಂದುಳಿದ ವರ್ಗಗಳ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನಾದಿ ಕಾಲದಿಂದಲೂ ಬಳಕೆಯಲ್ಲಿ ಮಡಕೆಗಳು ಕಣ್ಮರೆಯಾಗುತ್ತಿವೆ. ಮಡಿಕೆಯ ಜಾಗದಲ್ಲಿ ಉಕ್ಕಿನ ಪಾತ್ರೆಗಳು ರಾರಾಜಿಸುತ್ತಿದ್ದು, ಕುಲಕಸುಬು ಕುಂಬಾರಿಕೆ ಕ್ಷೀಣಿಸಿದೆ. ಸರ್ಕಾರ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕುಂಬಾರಿಕೆಗೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ತಾರತಮ್ಯರಹಿತ ಜಗತ್ತನ್ನು ಕಟ್ಟುವ, ಬದುಕಿನ ನೈಜತೆ ಸಾರುವ ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಎಂದರು.
ಕನ್ನಡ ಸಾರಸ್ವತ ಲೋಕಕ್ಕೆ ಸರ್ವಜ್ಞನ ಕೊಡುಗೆ ಅಪಾರ. ಸರ್ವಜ್ಞ ಹೆಸರಲ್ಲೇ ಎಲ್ಲವನ್ನೂ ಬಲ್ಲ ಎನ್ನುವ ಅರ್ಥ ಅಡಗಿದೆ. ಅವರ ವಿಚಾರಧಾರೆಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ನಗರಸಭೆ ಮಾಜಿ ಸದಸ್ಯ ಎಸ್.ನಾರಾಯಣ್, ಸಮುದಾಯದ ಮುಖಂಡರಾದ ಗುರುಮೂರ್ತಿ, ರಘುರಾಮಯ್ಯ, ರಾಧಾ ಅಶ್ವತ್ಥ್, ಮಂಜುಳ, ಡಾ.ಕೆ.ತಿಮ್ಮರಾಜು, ಆದಿಮೂರ್ತಿ, ಎಚ್.ವಿ.ರಾಜಣ್ಣ, ಚಿಕ್ಕನಂಜಪ್ಪ, ಒಬಳಾಪುರದ ಮಂಜು, ಸಾಹಿತಿ ಕವಿತಾಕೃಷ್ಣ ಇತರರು ಉಪಸ್ಥಿತರಿದ್ದರು. ಸಮಾಜದ ಮುಖಂಡರಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ನೆನಪಿನ ಕಾಣಿಕೆ ನೀಡಿದರು. ಪತ್ರಕರ್ತ ಮಣ್ಣೆರಾಜು ಅವರನ್ನು ಸನ್ಮಾನಿಸಲಾಯಿತು.