ಅಂತರ್ಜಾಲದ ಪ್ರಭಾವ ಅಗಾಧ : ಪ್ರೊ. ಪ್ರಮೊದ ಗಾಯಿ ಅಭಿಮತ
ಧಾರವಾಡ: ‘ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಶೈಕ್ಷಣಿಕ ವಲಯ ಸೇರಿದಂತೆ ಜನಸಾಮಾನ್ಯರ ಮೇಲೆ ಅಗಾಧ ಪ್ರಬಾವ ಬೀರಿದ್ದು, ಜಗತ್ತಿನಾದ್ಯಂತ ಅನೇಕ ದಾಖಲಾರ್ಹ ಚಳುವಳಿಗಳಿಗೆ ಸಾಕ್ಷಿಯಾಗಿವೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೊದ ಗಾಯಿ ಹೇಳಿದರು.
ಪ್ರೊ.ಎಂ.ಆರ್. ಕುಂಬಾರ ಸ್ಮರಣಾರ್ಥ ಕರ್ನಾಟಕ ವಿ.ವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಸೋಮವಾರ ಆಯೋಜಿಸಿದ್ದ ‘ಗ್ರಂಥಾಲಯಗಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ’ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದಿನ ದಿನಗಳಲ್ಲಿ ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಸಂಗ್ರಹ ಬಹುದೊಡ್ಡ ಕೆಲಸವಾಗಿತ್ತು. ಆದರೆ ಅಂತರ್ಜಾಲ ಮೂಲಕ ಇಂದು ಬೇಕಾದ ಮಾಹಿತಿ ಬೆರಳ ತುದಿಯಲ್ಲೇ ದಕ್ಕುವಂತಾಗಿದೆ. ಇದರಿಂದಾಗಿ ಸಂಶೋಧಕರಿಗೆ ಉತ್ತಮ ಸಂಶೋಧನ ಫಲಿತಗಳನ್ನು ನೀಡುವ ಅವಕಾಶ ಸಿಕ್ಕಿದೆ’ ಎಂದರು.
‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಮತ್ತು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಮನಸ್ಸು ವಿಕಾರಗೊಳಿಸುವ ತಾಣಗಳಿಂದ ದೂರವಿದ್ದು, ಜೀವನದಲ್ಲಿ ಆಸಕ್ತಿ, ಸಾಧನೆಗಳಿಗೆ ಪ್ರೇರಣೆ ನೀಡುವ ಮಾಹಿತಿಯುಕ್ತ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.
ವಿಭಾಗದ ಮುಖ್ಯಸ್ತ ಪ್ರೊ. ಆರ್.ಆರ್. ನಾಯಕ, ಪ್ರೊ.ಬಿ.ಡಿ. ಕುಂಬಾರ, ಡಾ. ಗುರುರಾಜ ಹಡಗಲಿ, ಡಾ.ಸಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನ ಗ್ರಂಥಾಲಯ ಅಧಿಕಾರಿ ಡಾ. ಸತೀಶ ಕನಮಡಿ, ಬೆಂಗಳೂರಿನ ಟಾಟಾ ಸರ್ವಿಸಸ್ನ ಮಾಹಿತಿ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ನಾಗಪ್ಪ .ಬಿ., ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಪಿ.ಜಿ.ತಡಸದ ಹಾಗೂ ಮುಂಬೈ ಎನ್.ಐ.ಎಫ್.ಟಿ ಮುಖ್ಯಸ್ಥ ಡಾ.ಎ.ಎನ್. ಆನಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
* * *
ತಂತ್ರಜ್ಞಾನದ ಪ್ರಗತಿಯಿಂದಾಗಿ ಯುವಜನರಿಗೆ ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ. ಈ ಸೌಲಭ್ಯವನ್ನು ಅವರು ಸದುಪಯೋಗ ಮಾಡಿಕೊಳ್ಳಬೇಕು.
-ಪ್ರೊ.ಪ್ರಮೋದ ಗಾಯಿ, ಕವಿವಿ ಕುಲಪತಿ