ಕಾರ್ಕಳ : ಹಾರೈಕೆಗಳು ಫಲಿಸಲಿಲ್ಲ, ವೈದ್ಯರ ಪ್ರಯತ್ನ ಕೈಗೂಡಲಿಲ್ಲ, ಬದುಕುವ ಹಂಬಲ ಕೊನೆಗೂ ಈಡೇರಲಿಲ್ಲ. ಹುಟ್ಟುತ್ತಲೇ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಾ , ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ-ಪ್ರಫುಲ್ಲ ದಂಪತಿಯ ಪುತ್ರಿ ಮೊನಿಷಾ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ ಅವರ ಪತ್ನಿ ಪ್ರಫುಲ್ಲ ಅವರು ಜನವರಿ 27ರಂದು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹುಟ್ಟುವಾಗಲೇ ಮಗು ಶ್ವಾಸನಾಳದ ತೊಂದರೆಯಿಂದ ಬಳಲುತ್ತಿರುವುದು ಪರೀಕ್ಷೆಯಿಂದ ಕಂಡು ಬಂದಿತ್ತು. ಆ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆಪರೇಶನ್ ಮುಗಿಸಿದ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಇತ್ತೀಚೆಗೆ ಮತ್ತೆ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನೇಕ ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ವೈದ್ಯರು ಶತ ಪ್ರಯತ್ನ ಪಟ್ಟರೂ ಆಕೆಯನ್ನು ಉಳಿಸಲಾಗಲಿಲ್ಲ. ಮಾರ್ಚ್ ೨೮ರಂದು ಚಿಕಿತ್ಸೆ ಫಲಕಾರಿಯಾಗದೆ ಮೊನಿಷಾ ಕೊನೆಯುಸಿರೆಳೆದಿದ್ದಾಳೆ.
ಬಡ ಕುಟುಂಬ
ಕೂಲಿ ಕೆಲಸ ಮಾಡಿ ಜೀವಿಸುತ್ತಿರುವ ಸಂತೋಷ ಮೂಲ್ಯ ಕುಟುಂಬ ಕಡು ಬಡವರಾಗಿದ್ದು ಮಗುವಿನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಲು ಸಾಧ್ಯವಾಗದೇ ಸಹೃದಯರ ನೆರವು ಯಾಚಿಸಿದ್ದರು. ಕುಲಾಲ್ ವರ್ಲ್ಡ್, ದೋಹಾ ಕತಾರ್ ಕುಲಾಲ್ ಫ್ರೆಂಡ್ಸ್, ಬೆಹರೈನ್ ಕುಲಾಲ್ ಫ್ರೆಂಡ್ಸ್, ಕಾರ್ಕಳ ಕುಲಾಲ ಸಂಘ ಸಹಿತ ಹಲವು ಸಂಘ ಸಂಸ್ಥೆಗಳು ಚಿಕಿತ್ಸೆಗೆ ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ ವಿಧಿ ಬರಹ ಬೇರೆಯೇ ಆಗಿತ್ತು. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಏನು ಪ್ರಯೋಜನವಾಗಿಲ್ಲ. ಮೊನಿಷಾಳನ್ನು ಉಳಿಸಲಾಗಲಿಲ್ಲ.
Posted by :Dinesh Bangera Irvathur/28/03/2016