1983ರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ತನ್ನ ಬುದ್ಧಿಮತ್ತೆ, ಚಾಕಚಕ್ಯತೆ, ಪ್ರತಿಭೆಯಿಂದ ಕಾನೂನು ಸಚಿವರಾದ ಪ್ರೋ.ಲಕ್ಷ್ಮೀಸಾಗರ್ ರವರನ್ನು ಬಿಟ್ಟರೆ ಕುಂಬಾರರಿಗೆ ಮಂತ್ರಿ ಬಿಡಿ, ಜಿಲ್ಲಾ ಪಂಚಾಯಿತಿಯ ಗಾದಿಯೂ ಸಿಗಲಿಲ್ಲ. ಸಾಮಾಜಿಕ ಹೋರಾಟಗಾರ ಸಮಾಜವಾದಿ ಬಡವರ ಬಂಧು ಅಮ್ಮೆಂಬಳ ಬಾಳಪ್ಪನವರಿಗೆ ಅರ್ಹತೆ ಇದ್ದರೂ ಸಹಾ ರಾಜಕಾರಣಿಗಳು ಮನಸ್ಸು ಮಾಡಲಿಲ್ಲ. ರೂಪಾ ಡಿ ಬಂಗೇರ ಇವರ ಕೈಗೆ ಬಂದ ಮಂಗಳೂರು ಮಹಾನಗರಪಾಲಿಕೆ ಮೇಯರ್ ಗಿರಿ ಚಿಕ್ಕ ಪ್ರಮಾದದಿಂದ ತಪ್ಪಿ ಹೋಯಿತು.
ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿಯವರಿಗೆ ಸಾರಿಗೆ ನಿಗಮದ ಉಪಾದ್ಯಕ್ಷ ಸ್ಥಾನ ಕೊಟ್ಟು, ಬಳಿಕ ಕಸಿದುಕೊಳ್ಳಲಾಯಿತು. ಸೌಂದರ್ಯ ಮಂಜಪ್ಪ, ಹಾಗೂ ರಮೇಶರವರಿಗೆ, ಕಸ್ತೂರಿ ಪಂಜ, ಪೃಥ್ವಿರಾಜ್ ರವರಿಗೆ ಶಾಸಕ ಸ್ಪರ್ಧೆಗೆ ಅವಕಾಶ ನೀಡಲಿಲ್ಲ. ಕುಂದಾಪುರದ ಡಾ.ಎಂ.ವಿ ಕುಲಾಲರಿಗೆ ವಿಧಾನಪರಿಷತ್ ಗೆ ನೇಮಕ ಮಾಡದೇ ಅನ್ಯಾಯ ಮಾಡಲಾಯಿತು. ಮೊನ್ನೆ ಮೊನ್ನೆ ಬಂಟ್ವಾಳದಲ್ಲಿ ಸದಾಶಿವ ಬಂಗೇರರವರಿಗೆ ಮೀಸಲಿದ್ದ ಪುರಸಭೆಯ ಅಧ್ಯಕ್ಷಗಿರಿಯನ್ನು ಎರಡೆರಡು ಬಾರಿ ಮುಂಗೈಗೆ ಬೆಲ್ಲ ಸವರಿ ವಂಚಿಸಲಾಯಿತು. ಇಷ್ಟು ವಂಚನೆ ಬೇರೆ ಸಮುದಾಯಕ್ಕೆ ಆಗಿದ್ದರೆ ಸಾಮಾಜಿಕ ನ್ಯಾಯ ವಂಚಿತರು ಎಂಬ ಕೂಗೇಳುತ್ತಿತ್ತು. ಕುಂಬಾರರನ್ನು ಈ ರಾಜ್ಯದಲ್ಲಿ ಕೇಳುವವರಿಲ್ಲವೇ..? ಕುಂಬಾರರಿಗೂ ರಾಜಕೀಯದಲ್ಲಿ ಸಾಮಾಜಿಕ ನ್ಯಾಯಬೇಡವೇ..?
ನಮಗೆ ಸ್ಥಳೀಯಾಡಲಿತದಲ್ಲಿ, ವಿಧಾನಸಭೆ, ವಿಧಾನಪರಿಷತ್ ಅಧಿಕಾರ ಸಿಗುವುದು ಯಾವಾಗ? ಕುಂಭಕಲಾನಿಗಮ ಸ್ವತಂತ್ರವಾಗುವುದು ಯಾವಾಗ? ಸರ್ವಜ್ಞ ಅಧ್ಯಯನ ಪೀಠದ ಮೂಲಕ ಕುಂಬಾರ ಸಮುದಾಯದ ಪ್ರತಿಭಾವಂತ ಸಾಹಿತಿಗಳನ್ನ ಗುರುತಿಸುವುದು ಯಾವಾಗ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾಲ ಕೂಡಿ ಬಂದಿದೆ. ಜಿಲ್ಲಾ ಪಂಚಾಯತ್ ನಲ್ಲಿ ಕುಂಬಾರರ ಅಧಿಕಾರ ನೋಡುವ ಭಾಗ್ಯ ತಪ್ಪಿ ಹೋಗದಿರಲಿ. ಯಾರೂ ಕುಂಬಾರರ ತಾಳ್ಮೆಯನ್ನು ಪರೀಕ್ಷಿಸುವ ಗೋಜಿಗೆ ಹೋಗದಿರಲಿ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಕಟೀಲು ಕ್ಷೇತ್ರದಿಂದ ಆಯ್ಕೆಯಾದ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಪಂಚಾಯತ್ ಗೆ ಹಾಲಾಡಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಪ್ರೀತಾ ಕುಲಾಲರ ಮೂಲಕ ಪ್ರಪ್ರಥಮವಾಗಿ ಜಿಲ್ಲಾ ಪಂಚಾಯತ್ ಗೆ ಲಗ್ಗೆ ಇಟ್ಟಿರುವ ಕುಲಾಲ ಸಮುದಾಯದ ಮಹಿಳೆಯರಿದ್ದಾರೆ. ಈ ಮೂಲಕ ಅಧಿಕಾರದ ಆಶಾಮನೋಭಾವದ ನಿರೀಕ್ಷೆ ಮೂಡಿಸಿದ್ದಾರೆ. ಇವರ ಸಾಧನೆಯ ಹಿಂದೆ ಕುಲಾಲ ಸಮುದಾಯದ ಹಿರಿ-ಕಿರಿಯ ನಾಯಕರ ಪರಿಶ್ರಮವೂ ಇದೆ.
ಕಸ್ತೂರಿ ಪಂಜರವರಿಗೆ ದ. ಕ ಜಿ.ಪಂದಲ್ಲಿ ಅದ್ಯಕ್ಷಸ್ಥಾನ ಸಿಕ್ಕಿ, ಸುಪ್ರೀತಾ ಕುಲಾಲ್ ರವರಿಗೆ ಉಡುಪಿಯಲ್ಲಿ ಉಪಾದ್ಯಕ್ಷ ಸ್ಥಾನ ಸಿಗಬೇಕು. ಸಿಗುವ ಎಲ್ಲಾ ಲಕ್ಷಣಗಳಿವೆ. ಮೀಸಲಾತಿಯೂ ನಮ್ಮ ಪರವಾಗಿದೆ. ರಾಜಕೀಯ ಪಕ್ಷಗಳು ಕುಲಾಲ/ಕುಂಬಾರರಿಗೆ ಸಾಮಾಜಿಕ ನ್ಯಾಯ ಕೊಡಲು ಮನಮಾಡಬೇಕು. ಕೊನೆಕ್ಷಣದಲ್ಲಿ ಮೀಸಲಾತಿಯನ್ನು ಬದಲಿಸಿ ಕುಲಾಲ ಸಮುದಾಯಕ್ಕೆ ಅನ್ಯಾಯ ಮಾಡಬಾರದು.
ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು



