ಬಂಟ್ವಾಳ: ಸಾರ್ವಜನಿಕರ ಅನುಕೂಲಕ್ಕೆ ತನ್ನ ತೋಟದಲ್ಲಿಯೇ ರಸ್ತೆ ಬಿಟ್ಟು ಕೊಟ್ಟ ರೈತನ ಪಾಲಿಗೆ ಜಿಲ್ಲಾಡಳಿತವೇ ಕಂಠಕವಾಗಿ ಪರಿಣಮಿಸಿದೆ. ತೀವ್ರ ವಿರೋಧದ ನಡುವೆಯೂ ಮನೆಯ ಛಾವಣಿ ಹಾಗೂ ತೋಟದಲ್ಲಿರುವ ಮರಗಳಿಗೆ ತಾಗಿಕೊಂಡೇ ಹೈ ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ತಾಲೂಕಿನ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ವಿಶ್ವನಾಥ ಮೂಲ್ಯ ಜಿಲ್ಲಾಡಳಿತದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಕೃಷಿಕ.
ಕೊಳ್ನಾಡು ಗ್ರಾಮದ ದೇವಸ್ಯಕೋಡಿ ಎಂಬಲ್ಲಿ 7.5 ಹೆಚ್ಪಿ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪಿಸಲು ನಿರ್ಧರಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ವಿದ್ಯುತ್ ಸ್ಥಾವರಕ್ಕೆ ಎಚ್.ಟಿ.ವಿದ್ಯುತ್ ತಂತಿಗಳು ವಿಶ್ವನಾಥ ಮೂಲ್ಯ ಅವರು ಸಾರ್ವಜನಿಕರ ಅನುಕೂಲಕ್ಕೆ ಬಿಟ್ಟುಕೊಟ್ಟ ರಸ್ತೆಯ ಮೂಲಕವೇ ಹಾದು ಹೋಗಲಿದ್ದು ಕಂಬಗಳನ್ನು ಅಳವಡಿಸಲಾಗಿದೆ. ಕೇವಲ 10 ಅಡಿಗಳಷ್ಟು ಅಗಲವಿರುವ ಈ ರಸ್ತೆಯಲ್ಲಿ ಈಗಾಗಲೇ ಹೈ ಟೆನ್ಶನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಮತ್ತೆ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಗಲಿದೆ.
ಸಾರ್ವಜನಿಕರಿಗೆ ರಸ್ತೆ ಬಿಟ್ಟುಕೊಡುವ ಸಲುವಾಗಿ ಜಮೀನು ನೀಡಿದ ಪರಿಣಾಮ ವಿಶ್ವನಾಥ ಮೂಲ್ಯ ಅವರು ಹಲವಾರು ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಳಕೊಂಡಿದ್ದಾರೆ. ಆ ಬಳಿಕ ಎಚ್ ಟಿ ವಿದ್ಯುತ್ ತಂತಿ ಹಾದು ಹೋಗುವ ಸಂದರ್ಭವು ಫಲ ನೀಡುವ ಅಡಿಕೆ ಮರಗಳನ್ನು ಕಡಿಯ ಬೇಕಾದ ಸ್ಥಿತಿ ಒದಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಎಚ್ಟಿ ವಿದ್ಯುತ್ ತಂತಿ ಹಾದು ಹೋಗುತ್ತಿದೆ. ಇದು ಅಲ್ಲಿಂದ ವಿಸ್ತರಿಸಿ ಅವರ ಮನೆಯ ಛಾವಣಿಯನ್ನು ವಿಸ್ತರಿಸಿಕೊಂಡು ಹೋಗುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ. ರಸ್ತೆಗೆ ಜಮೀನು ನೀಡಿರುವ ರೈತನ ಬೆನ್ನುತಟ್ಟಬೇಕಾದ ಜಿಲ್ಲಾಡಳಿತ ಅವರ ಬದುಕಿಗೆ ಸಂಚಕಾರ ತಂದೊಡ್ಡುವಂತೆ ಮಾಡಿದೆ.
ತಾಳಿತ್ತನೂಜಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಅದು ಎತ್ತರ ಪ್ರದೇಶದಲ್ಲಿದೆ. ಶಾಲೆಯ ಆಟದ ಮೈದಾನದ ಪಕ್ಕದ ಜಾಗದಲ್ಲಿ ನಾಗ, ರಕ್ತೇಶ್ವರಿ, ಗುಳಿಗ, ಕೊರತಿ, ವರ್ಣರ ಪಂಜುರ್ಲಿ ದೈವಸ್ಥಾನಗಳಿದ್ದು ಮಾಸಿಕವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪ್ರಸ್ತುತ ವಿದ್ಯುತ್ ತಂತಿ ಇದೇ ಪರಿಸರದಲ್ಲಿ ಹಾದು ಹೋಗಿರುವುದರಿಂದ ಸಾರ್ವಜನಿಕರ ಜೀವಕ್ಕೆ ಹಾನಿಯಾಗುವ ಸಂಭವ ಇದೆ.
ಈ ಪರಿಸರದಲ್ಲಿ ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ನಡೆಯುತ್ತಿರುವುದರಿಂದ ಅಪಾಯಕಾರಿ ಎಚ್ಟಿ ವಿದ್ಯುತ್ ತಂತಿ ಅಳವಿಡಿಸುವ ಅಗತ್ಯವಿರುವುದಿಲ್ಲ ಎನ್ನುವುದು ವಿಶ್ವನಾಥ ಮೂಲ್ಯ ಹಾಗೂ ಸ್ಥಳೀಯ ನಾಗರೀಕರವ ಆಗ್ರಹ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದರೂ ಸಕರಾತ್ಮಕ ಸ್ಪಂದನ ಸಿಕ್ಕಿಲ್ಲ. ಇದೀಗ ಸಂತ್ರಸ್ತ ರೈತ ಕಾನೂನಿನ ಮೊರೆ ಹೋಗಿದ್ದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
Posted by : Dinesh Bangera Irvathur/25/03/2016