ಬೆಂಗಳೂರು: ತಮ್ಮ ಎಂದಿನ ‘ಅಹಿಂದ’ವಾದವನ್ನು ಈ ಬಾರಿಯ ಬಜೆಟ್ನಲ್ಲೂ ಪ್ರಬಲವಾಗಿ ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರು ಮತ್ತು ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಅತಿಹೆಚ್ಚು ಒತ್ತು ಕೊಟ್ಟಿದ್ದು, ಕುಂಬಾರ ಸಮೂದಾಯದ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಿದ್ದಾರೆ.
ಸಾಮಾಜಿಕ ನ್ಯಾಯ ಪರಿಪಾಲನೆಯ ತತ್ವದಡಿ ಸಣ್ಣ ಮತ್ತು ಅಳಿವಿನಂಚಿನಲ್ಲಿರುವ ಜಾತಿ-ಜನಾಂಗಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ಘೋಷಿಸಿರುವ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಇಲಾಖೆಗೆ 5,464 ಕೋಟಿ ರೂ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2,503 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.
ಅಹಿಂದ ವರ್ಗಗಳ ಶಿಕ್ಷಣಕ್ಕೆ ಒತ್ತುಕೊಡುವುದರ ಜೊತೆಗೆ ಡಾ| ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನವನ್ನು ರಾಜ್ಯ ಮಟ್ಟದಲ್ಲಿ ಬಹೃತ್ ಮಟ್ಟದಲ್ಲಿ ಆಚರಣೆ, ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನಕ್ಕೆ ಹಂಪಿ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ, ಬೆಂಗಳೂರಿನಲ್ಲಿ ಡಾ| ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆ ಸ್ಥಾಪನೆ, 1 ಕೋಟಿ ರೂ. ವೆಚ್ಚದಲ್ಲಿ ಎಲ್.ಜಿ. ಹಾವನೂರು ಸ್ಮಾರಕ ನಿರ್ಮಾಣ, ಡಿ. ದೇವರಾಜ ಅರಸು ಅವರ ಹುಟ್ಟೂರು ಬೆಟ್ಟದತುಂಗ ಹಾಗೂ ಕಲ್ಲಹಳ್ಳಿ ಗ್ರಾಮಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನದಂತಹ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಸಿದ್ದರಾಮಯ್ಯ ದಲಿತರು ಮತ್ತು ಹಿಂದುಳಿದ ವರ್ಗಗಳ ಓಲೈಕೆ ಪ್ರಯತ್ನ ಮಾಡಿದ್ದಾರೆ.
ಆದಿವಾಸಿ ಸಮುದಾಯಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆ. ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ. ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ.ಗಳಂತೆ 50 ಕೋಟಿ ರೂ. ಅನುದಾನ ನೀಡಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಪರಿಪಾಲಿಸುವ ಪಣ ತೊಟ್ಟಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆಯಡಿ 87 ಹಾಸ್ಟೆಲ್ಗಳ ಉನ್ನತೀಕರಣಕ್ಕೆ 5.67 ಕೋಟಿ ರೂ. ನೀಡಿದ್ದಾರೆ.