ಮಂಜೇಶ್ವರ: ಯಕ್ಷಲೋಕದ ಪ್ರಾಥಃಸ್ಮರಣೀಯ ಕಲಾವಿದ ರಸಿಕರತ್ನ ವಿಟ್ಲ ಜೋಷಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರಾದ ಕೈರಂಗಳ ಕೃಷ್ಣ ಮೂಲ್ಯ ಮತ್ತು ಕೋಳ್ಯೂರು ಭಾಸ್ಕರ ಅವರನ್ನು ವಿಟ್ಲ ಜೋಷಿ ಪುರಸ್ಕಾರವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು.
ಮಂಜೇಶ್ವರ ಬಳಿಯ ದೈಗೋಳಿ(ಸಸಿಗೋಳಿ) ಶ್ರೀ ಸಾಯಿ ಆಶ್ರಮದಲ್ಲಿ ಪರ್ಕಳದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನದ ಆಶ್ರಯದಲ್ಲಿ ದಿ. ಬಲಿಪಗುಳಿ ಕೃಷ್ಣಭಟ್ಟರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಿತು. ಕಾರ್ಯಕ್ರಮವನ್ನು ವೇ.ಮೂ. ಕೇಶವ ಭಟ್ ವಾರಣಾಸಿ ದೀಪಬೆಳಗಿಸಿ ಉದ್ಘಾಟಿಸಿದರು. ಅಧ್ಯಾಪನ, ರಂಗಭೂಮಿ, ಕಲಾಸೇವೆ ಮತ್ತು ಸಾಂಸ್ಕೃತಿಕ ಸಂಘಟನೆಯ ಮೂಲಕ ಒಂದು ಪೀಳಿಗೆಯನ್ನು ರೂಪಿಸಿದ ಸಾಂಸ್ಕೃತಿಕ ಜನಪದ ನಿರ್ಮಾತೃ ದಿ.ಬಲಿಪಗುಳಿ ಕೃಷ್ಣ ಭಟ್ಟ(ಟ್ಯಾಂಕಿ ಮಾಸ್ತರ್)ರ ಕುರಿತು ಅವರ ಶಿಷ್ಯ ಸೇರಾಜೆ ಶ್ರೀನಿವಾಸ ಭಟ್ ಸಂಸ್ಮರಣಾ ಭಾಷಣ ಮಾಡಿದರು.
ವಿಟ್ಲ ಜೋಷಿ ಜನ್ಮಶತಮಾನೋತ್ಸವ ಸರಣಿ ಅಭಿಯಾನದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ಕಟೀಲು ಮೇಳದ ಹಿರಿಯ ಕಲಾವಿದ ಕೈರಂಗಳ ಕೃಷ್ಣ ಮೂಲ್ಯ ಮತ್ತು ವೃತ್ತಿಪರರನ್ನು ಮೀರಿಸುವ ಹಿಮ್ಮೇಳ ವಾದಕ-ದೇವನರ್ತನದ ವಾದಕ ಕೋಳ್ಯೂರು ಭಾಸ್ಕರ ಅವರ ಕುರಿತಾಗಿ ರಾಜಾರಾಮ ಮಾಸ್ತರ್ ಮೀಯಪದವು ಅಭಿನಂದನಾ ಭಾಷಣ ಮಾಡಿ ಇಬ್ಬರು ಅನನ್ಯ ಕಲಾವಿದರ ವ್ಯತ್ಯಸ್ಥ ಸಾಧನೆಗಳನ್ನು ಪರಿಚಯಿಸಿದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅತಿಥಿಯಾಗಿ ಪಾಲ್ಗೊಂಡು “ಹಿರಿಯರ ಸ್ಮರಣೆಯಲ್ಲಿ ಅರ್ಹ ಪ್ರತಿಭಾವಂತ ಸಾಧಕರನ್ನು ಪುರಸ್ಕಾರವಿತ್ತು ಗೌರವಿಸಿ ವರ್ತಮಾನಕ್ಕೆ ಪರಿಚಯಿಸುವುದೆಂದರೆ ಹೊಸ ಪೀಳಿಗೆಗೆ ಸ್ಪೂರ್ತಿ ತುಂಬಿಸುವ ಕೆಲಸ” ಎಂದು ಶುಭ ಹಾರೈಸಿದರು.
ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿ ವಿಟ್ಲ ಜೋಷಿಯವರ ಹೆಸರಿನಲ್ಲಿ ಅರ್ಹರಿಬ್ಬರಿಗೆ ಪುರಸ್ಕಾರ ಸಂದಿದೆ. ಕಲಾ ಜಗತ್ತಿನಲ್ಲಿ ಪ್ರಶಸ್ತಿ ಬೇರೆ, ಸನ್ಮಾನ ಬೇರೆ. ಇವೆರಡರ ಅಂತರ ಅರಿಯಬೇಕು. ಸನ್ಮಾನ ಬೆನ್ತಟ್ಟುವುದಾದರೆ ಪ್ರಶಸ್ತಿ ಅಂಗೀಕಾರ. ಇವೆರಡೂ ದೊರಕುವ ಸಂದರ್ಭಗಳು ಬೇರೆ-ಬೇರೆ. ಅದನ್ನರಿತು ವ್ಯವಹಸರಿಸಬೇಕೆಂದರು.
ದೈಗೋಳಿಯ ಶ್ರೀಸಾಯಿ ಮಂದಿರದ ಸಂಸ್ಥಾಪಕ ಡಾ. ಉದಯಕುಮಾರ್ ದೈಗೋಳಿ, ರಸಿಕರತ್ನ ವಿಟ್ಲ ಜೋಷಿಯವರ ಪುತ್ರ ರವಿಜೋಷಿ, ರಸಿಕರತ್ನ ವಿಟ್ಲಜೋಷಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಹರೀಶ ಜೋಷಿ ವಿಟ್ಲ, ಸತ್ಯನಾರಾಯಣ ಭಟ್ ಬಲಿಪಗುಳಿ ಉಪಸ್ಥಿತರಿದ್ದರು. ಚಂದ್ರಕುಮಾರ ಬಲಿಪಗುಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಕಾರ್ಯಕ್ರಮದಂಗವಾಗಿ “ಉತ್ತರನ ಪೌರುಷ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಹೊಸಮೂಲೆ ಗಣೇಶ ಭಟ್, ರಾಮಮೂರ್ತಿ ಕುದ್ರೆಕೋಡ್ಲು, ಭಾಸ್ಕರ ಕೋಳ್ಯೂರು ಪಾಲ್ಗೊಂಡರು. ಮುಮ್ಮೇಳದಲ್ಲಿ ಶಂಭುಶರ್ಮ ವಿಟ್ಲ, ಸೇರಾಜೆ ಸೀತಾರಾಮ ಭಟ್, ಹಿರಣ್ಯ ವೆಂಕಟೇಶ್ವರ ಭಟ್, ಡಾ. ಹರೀಶ ಜೋಷಿ ವಿಟ್ಲ ಅರ್ಥಧಾರಿಗಳಾಗಿ ಪಾಲ್ಗೊಂಡರು.