ಕಲಬುರಗಿ: ಒಕ್ಕಲುತನದ ಮನೆ. ಮನೆಯಲ್ಲಿ ಬಡತನ. ಅಪ್ಪ-ಅಮ್ಮ-ಅಣ್ಣನ ಆರೈಕೆಯಲ್ಲಿ ಬೆಳೆದ ಅಪ್ಪಟ ಹಳ್ಳಿ ಹುಡುಗಿ ಶಿವಬಸಮ್ಮ ಗುಲಬರ್ಗಾ ವಿವಿಯಿಂದ ಗಳಿಸಿದ್ದು ಒಟ್ಟು ಎಂಟು ಚಿನ್ನದ ಪದಕ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಮಾಚನೂರು ಗ್ರಾಮದ ರೈತ ಶಿವಬಸಪ್ಪ ಕುಂಬಾರ ಮತ್ತು ಬಸಮ್ಮ ಕುಂಬಾರ ಅವರ ಪುತ್ರಿ ಶಿವಬಸಮ್ಮ ಕುಂಬಾರ ಎಂಎ ಕನ್ನಡದಲ್ಲಿ ಒಟ್ಟು 8 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡ ಸಾಧನೆ ಮಾಡಿದ್ದು, ರೈತನ ಮಗಳ ಈ ಸಾಧನೆ ವಿವಿಯಲ್ಲಿ ಶ್ಲಾಘನೆ ಗಳಿಸಿದೆ.
ಇತ್ತೀಚೆಗೆ ನಡೆದ ಘಟಿಕೋತ್ಸವದ ಬಳಿಕ ಹರ್ಷ ಹಂಚಿಕೊಂಡ ಶಿವಬಸಮ್ಮಳ ಹೇಳಿದ್ದೇನೆಂದರೆ- ನಾನು, ಸರಕಾರಿ ಶಾಲೆಯಲ್ಲಿ ಓದಿ ಬೆಳೆದವಳು. ಅಣ್ಣನ ಒತ್ತಾಸೆ, ತಂದೆ, ತಾಯಿಯ ಪ್ರೀತಿ ನನ್ನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಅಪ್ಪ ರೈತ. ಒಕ್ಕಲುತನದಲ್ಲಿ ಹೇಗೆ ಜತನದಿಂದ ನೆಲಕ್ಕೆ ಕಾಳು ಚೆಲ್ಲುತ್ತಿದ್ದನೋ ಹಾಗೆ ನನಗೂ ಓದಿಗೆ ಹಣ ಹೊಂದಿಸುತ್ತಿದ್ದ. ನಾನು ವಿವಿ ಆವರಣದಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಇದ್ದು ಓದಿದ್ದೇನೆ. ಘಟಿಕೋತ್ಸವದಲ್ಲಿ 8 ಪದಕಗಳನ್ನು ಕೊರಳಿಗೆ ಹಾಕಿಸಿಕೊಳ್ಳುವಾಗ ಅಳು ಒತ್ತರಿಸಿಕೊಂಡು ಬಂತು. ಅಮ್ಮ, ಅಪ್ಪ ಮತ್ತು ಅಣ್ಣ ಹಾಗೂ ನನ್ನ ಶ್ರಮದ ಬೆವರಿನ ಫಲವಿದು. ಇದರ ಮೌಲ್ಯ ಮತ್ತು ಖುಷಿಯನ್ನು ಬಣ್ಣಿಸಲು ಆಗದು.
ಕನ್ನಡ ಅಧ್ಯಯನ ವಿಭಾಗದಲ್ಲಿ ಶೇ.76.95 ಅಂಕ ಪಡೆಯುವ ಮೂಲಕ 8 ಚಿನ್ನದ ಪದಕ ಗಳನ್ನು ಮುಡಿಗೇರಿಸಿಕೊಂಡ ಶಿವಬಸಮ್ಮ, ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲೂಕಿನ ಮಾಚನೂರ ಗ್ರಾಮದವರು. ಯಲಗಟ್ಟಾದಲ್ಲಿ ಪ್ರೌಢಶಿಕ್ಷಣ, ಗುಡಗುಂಟಿಯಲ್ಲಿ ಕಾಲೇಜು, ಲಿಂಗಸೂಗೂರಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಈಕೆಯ ಬಡ ಕುಟುಂಬಕ್ಕೆ ಕೇವಲ 4.2 ಎಕರೆ ಜಮೀನಿದ್ದು, ಒಣ ಬೇಸಾಯದಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಊರಲ್ಲಿ ಇಲ್ಲವೇ ಬೆಂಗಳೂರಿನಲ್ಲಿ ಕೂಲಿ-ನಾಲಿ ಮಾಡಿ ಬದುಕು ಸಾಗಿಸುವುದು ಅನಿವಾರ್ಯವಾಗಿದೆ. ನಮ್ಮಂಥ ಬಡವ್ರ ಹೊಟ್ಟಿಲಿ ಹುಟ್ಟಿದ ಈ ಮಗಳು ಕೀರ್ತಿ ತಂದಾಳ್ರೀ. ಅವ್ಳನ್ನು ಓದಿಸಿದ್ದಕ್ಕೂ ಸಾರ್ಥಕ ಆಯ್ತು ಎಂದು ತಂದೆ ಶಿವಬಸಪ್ಪ ಕಣ್ಣೀರಿಟ್ಟರು.
ಬಡ ಮಕ್ಕಳು ಬುದ್ಧಿವಂತರಿದ್ದರೂ ಓದಲು ಪರದಾಡಬೇಕಾದ ಪರಿಸ್ಥಿತಿ ಇದೆ. ಆದರೆ, ಬಿಡದ ಛಲ, ವಾರಗಿಯವರ ಚುಚ್ಚು ಮಾತಿಗೆ ಕಿವಿಗೊಡದೇ ಓದಿದ್ದಕ್ಕೆ ಇವತ್ತು ಎಲ್ಲರ ಎದುರು ನಿಲ್ಲುವಂತೆ ಆಗಿದೆ ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಅಪ್ಪ ಅಮ್ಮನ ಮುಖ ನೋಡಿದಳು ಶಿವಬಸಮ್ಮ. ಮುಂದೆ ಪಿಎಚ್.ಡಿ. ಮಾಡಿ ಬಡ ಪ್ರತಿಭಾವಂತರಿಗೆ ನೆರವಾಗೋ ಆಸೆಯೊಂದಿಗೆ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದಾರೆ ಶಿವಬಸಮ್ಮ. ಈಕೆಗೆ ಹುನುಗುಂದ ತಾಲ್ಲೂಕು ಕುಂಬಾರ ಕ್ಷೇಮಾಭಿವೃದ್ದಿ ಸಂಘ (ರಿ) ಇಳಕಲ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
`ನಮಗ ಎಷ್ಟು ಕಷ್ಟ ಇದ್ರೂ ಹಗಲೂ-ರಾತ್ರಿ ದುಡದ್ ಮಗಳನ್ನು ಓದಿಸಿವ್ರೀ.. ನಮ್ಮ ಮಗಳ ಸಾಧನೆ ಏನೆಂಬುದು ಇಲ್ಲಿ ಬಂದ್ಮ್ಯಾಲೆ ಗೊತ್ತಾಗೈತೆ. ನಿಜಕ್ಕೂ ಖುಷಿಯಾಗ್ತಿದೆ’ ಎಂದು ಆನಂದಭಾಷ್ಪ ಸುರಿಸಿದವರು ಶಿವಬಸಮ್ಮಳ ತಾಯಿ ಬಸಮ್ಮ ಕುಂಬಾರ’