ಬಂಟ್ವಾಳ : ಪ್ರತಿಷ್ಠಿತ ಬಂಟ್ವಾಳ ಪುರಸಭಾ ನೂತನ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಕುಲಾಲ ಸಮಾಜದ ಸದಾಶಿವ ಬಂಗೇರ ಅವರಿಗೆ ಮತ್ತೊಮ್ಮೆ ಅನ್ಯಾಯವೆಸಗಿದ ಕಾಂಗ್ರೆಸ್ ವಿರುದ್ಧ ಕುಲಾಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಮಾರ್ಚ್ ೧೦ರಂದು ನಡೆದ ಪುರಸಭಾ ನೂತನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಸದಾಶಿವ ಬಂಗೇರ ಅವರನ್ನು ಕಡೆಗಣಿಸಿ, ಬಂಟ ಸಮಾಜದ ರಾಮಕೃಷ್ಣ ಆಳ್ವ ಅವರನ್ನು ಆಯ್ಕೆ ಮಾಡಿದೆ. ಈ ಬಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಹಿಂದೆ ಅವಕಾಶ ವಂಚಿತ ಅನುಭವಿ ಸದಸ್ಯ ಸದಾಶಿವ ಬಂಗೇರ ಅವರಿಗೆ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಿತ್ತು. ಪಕ್ಷ ನಿಷ್ಠರಾದ ಸದಾಶಿವ ಅವರೂ ಈ ಬಗ್ಗೆ ವಿಶ್ವಾಸದಿಂದಿದ್ದು, ಯಾವುದೇ ಲಾಬಿ ನಡೆಸಿರಲಿಲ್ಲ. ಕೊನೆ ಕ್ಷಣದವರೆಗೂ ಪಕ್ಷದ ವರಿಷ್ಠರೂ ಅವರನ್ನೇ ಆಯ್ಕೆ ಮಾಡುವ ಭರವಸೆ ನೀಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಬಂಗೇರ ಅವರಿಗೆ ಅವಕಾಶ ನಿರಾಕರಿಸಿ, ಬಂಟರಿಗೆ ಮಣೆ ಹಾಕಿದ್ದಾರೆ. ಈ ಬಗ್ಗೆ ಕುಲಾಲ ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ಸಾಮಾಜಿಕ ತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕರಾವಳಿ ಕುಂಬಾರರ ಯುವ ವೇದಿಕೆಯ ಅಧ್ಯಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಪತ್ರಿಕಾ ಪ್ರಕಟಣೆ ನೀಡಿದ್ದು ಕಾಂಗ್ರೆಸ್ ಪಕ್ಷ ಪ್ರತೀ ಬಾರಿಯೂ ಕುಲಾಲರ ಮುಂಗೈಗೆ ಬೆಣ್ಣೆ ಸವರುವ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಕುಲಾಲ ಯುವವೇದಿಕೆಯ ನಾಯಕ ಸದಾಶಿವ ಬಂಗೇರ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಯಾಗಿದ್ದು ಎಲ್ಲಾ ರೀತಿಯ ಅವಕಾಶಗಳು ಇದ್ದರೂ ಕೂಡ ಅವರನ್ನು ಅವಕಾಶ ವಂಚಿತನನ್ನಾಗಿಸಿದೆ.
ಜಿಲ್ಲೆಯಲ್ಲಿ 3 ಲಕ್ಷದಷ್ಟು ಕುಲಾಲರು ಇದ್ದರೂ ಕಾಂಗ್ರೆಸ್ ಪಕ್ಷ ಕುಲಾಲರನ್ನು ಚುನಾವಣೆಗೆ ಮಾತ್ರ ಬಳಸಿಕೊಂಡು ಅಧಿಕಾರ ನೀಡುವ ವೇಳೆ ನಿರ್ಲಕ್ಷಿಸುತ್ತಿದೆ. ಕುಲಾಲ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯವಿಲ್ಲ ಎನ್ನುವುದು ಸದಾಶಿವ ಬಂಗೇರರಿಗೆ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ತಪ್ಪಿಸುವ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಟೀಕಿಸಿದ್ದಾರೆ.