ಮಂಗಳೂರು : ಕುಲಾಲ ಮಾತೃ ಸಂಘದ ಆಡಳಿತದಲ್ಲಿರುವ ಪೊಲೀಸ್ ಲೇನ್ ಟೆಲಿಕಾಂ ರಸ್ತೆಯ ಶ್ರೀ ದೇವಿ ದೇವಸ್ಥಾನದ ಬಿಂಬ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ,ಸಮುದಾಯದ ಯುವ ನಾಯಕ ಮೋಹಿತ್ ಬಿಜೈ. ದೇವಸ್ಥಾನದ ಮಕ್ತೇಸರ ಶ್ರೀನಿವಾಸ್ ಪಡೀಲ್, ಸಂಘದ ಕಾರ್ಯದರ್ಶಿ ಚಂದ್ರಹಾಸ್ ಕುಲಾಲ್, ಸ್ವಾಗತ ಸಮಿತಿಯ ಮಮತಾ ಅಣ್ಣಯ್ಯ ಕುಲಾಲ್, ಕುಲಾಲ ಮಹಿಳಾ ಮಂಡಳಿಯ ಶಕುಂತಲಾ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ಕರಾವಳಿಯಲ್ಲಿ ಕುಲಾಲ ಕುಂಬಾರ ಮಾತೃ ಸಂಘಟನೆಯ ಸುಮಾರು ಒಂದು ಶತಮಾನಗಳ ಇತಿಹಾಸದಲ್ಲಿ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಶ್ರಯದಲ್ಲಿ ಸಂಘದ ಬೆಳವಣಿಗೆಯ ಜೊತೆ ಜೊತೆಯಾಗಿ ಬೆಳೆದು ಬಂದಿರುವ ಶ್ರೀದೇವಿ ದೇವಸ್ಥಾನವು ಇಲ್ಲಿಯ ಕುಲಾಲರ ಬದುಕಿನ ಅವಿಭಾಜ್ಯ ಅಂಗ. ಅಂತೆಯೇ ಹತ್ತಿರದ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ಕೂಡಾ. ಕೃಷ್ಣ ಸ್ನಪ್ ವರ್ಕ್ಸ್ ನ ಸದಾನಂದ ಹಾಗು ಅವರ ಕುಟುಂಬ ಈ ದೇವಸ್ಥಾನದ ಹಿಂದಿರುವ ಮಹಾನ್ ಪೋಷಕರು. ಶಿಥಿಲವಾಗಿದ್ದ ದೇವಸ್ಥಾನವನ್ನ 2003 ರಲ್ಲಿ ಮಾಣಿಲ ಸ್ವಾಮೀಜಿಯವರ ಪ್ರೇರಣೆಯಂತೆ. ದಿ.ಬಾಲೋಡಿ ಮಹಾಬಲ ಹಾಂಡ, ಸದಾನಂದ, ವಿಶ್ವನಾಥ ಕೆ.ಬಿ, ಡಾ.ಅಣ್ಣಯ್ಯ ಕುಲಾಲ್ , ಮಂಜಪ್ಪ, ಲಕ್ಮಣ್ ಕುಂದರ್ ಮುಂತಾದ ಸಂಘದ ಹಿರಿ ಕಿರಿಯ ನಾಯಕರುಗಳ ನೇತೃತ್ವದಲ್ಲಿ ಶಿಲಾಮಯ ದೇವಸ್ಥಾನವನ್ನು ಕಟ್ಟಲಾಯಿತು. ರಾಜ್ಯದಲ್ಲೇ ಒಂದು ಗೋಡೆಯ ಅಂತರದಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿ ಮಂದಿರ ಹಾಗು ಮಸೀದಿಗಳು ಇರುವ ಅಪರೂಪದ ಸ್ಥಳವಿದು. ಬ್ರಹ್ಮ ಕಲಶ ನಡೆದು 12 ವರ್ಷಗಳಾಗಿರುವುದರಿಂದ ಇದೀಗ ನೂತನ ಬಿಂಬ ಪ್ರತಿಷ್ಠೆ ಹಾಗು ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಬರುವ ಏಪ್ರಿಲ್ ೧೮ರಿಂದ ೨೨ರವರೆಗೆ ನಡೆಯಲಿದೆ.