ಪರಂಪರಾಗತ ಬಂದ ವೃತ್ತಿಗಳಲ್ಲಿ ಇಂದು ಬಹುತೇಕ ನೆಲಕಚ್ಚಿವೆ. ಅದರಲ್ಲೂ ಮಡಕೆಯ ವಿಳಾಸ ಸಿಗುವುದೇ ಅಪರೂಪವಾಗಿಬಿಟ್ಟಿದೆ. ಸ್ಟೀಲ್ ಮತ್ತ್ತು ಪ್ಲಾಸ್ಟಿಕ್ಗಳ ಪೈಪೋಟಿ ಬೇರೆ. ಮಡಕೆ ಕೊಳ್ಳುವವರಿಲ್ಲದೆ ಅದರ ತಯಾರಿಕೆಯನ್ನೇ ಅವಲಂಬಿಸಿದ ನೂರಾರು ಕುಟುಂಬಗಳು ಸೋತು ಸೊರಗಿವೆ. ಆದರೆ, ಉಜಿರೆಯ ಹಳೇಪೇಟೆಯ ಬಳಿಯ ವಿವೇಕಾನಂದನಗರವನ್ನು ನೋಡಿದರೆ ಅಲ್ಲಿರುವ ಅಚ್ಚರಿಯೇ ಬೇರೆ.
ಇಲ್ಲಿ ಹತ್ತಾರು ಮನೆಗಳಲ್ಲಿ ಹೆಚ್ಚಿನವರದ್ದು ಕುಂಬಾರ ವೃತ್ತಿ. ಬಹುತೇಕ ಮನೆಗಳಲ್ಲಿ ಈಗಲೂ ತಿಗರಿ ತಿರುಗುವ ಗರಗರಾ ಸದ್ದು ಕೇಳುತ್ತಲೇ ಇರುತ್ತದೆ. ಮನೆಯಂಗಳದಲ್ಲಿ ಜೇಡಿಮಣ್ಣಿನ ರಾಶಿ. ಒಣಗುತ್ತಿರುವ ಹಸಿಮಡಕೆ. ಸುಡುತ್ತಿರುವ ಒಣಗಿದ ಮಡಕೆ. ಹೆಗಲ ಮೇಲೆ ನಾನಾ ಆಕೃತಿಯ ಮಡಕೆಗಳಿರುವ ಗಳು ಹೊತ್ತು ಮನೆಮನೆಗೆ ಮಾರಾಟಕ್ಕೆ ಹೊರಟಿರುವ ಕುಂಬಾರರನ್ನು ಕಂಡಾಗ ಇಲ್ಲಿ ಕುಂಬಾರಿಕೆ ಸಂಪನ್ನಗೊಂಡು ಈ ಕುಟುಂಬಗಳ ಸುಖೀ ಜೀವನಕ್ಕೆ ನೆರವಾಗಿರುವುದು ಸ್ಪಷ್ಟವಾಗುತ್ತದೆ.
ಇಲ್ಲಿ ಕುಂಬಾರ ವೃತ್ತಿ ಗಟ್ಟಿಯಾಗಲು ಕಾರಣ, ಲಾಯಿಲದ ದಯಾಳ್ಬಾಗ್ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗಾಗಿ ರೂಪಿಸಿದ ವಿಮುಕ್ತಿ ಸ್ವಸಹಾಯ ಸಂಘದ ಕಾರ್ಯಕ್ರಮ. ಪ್ರತಿ ಮನೆಯ ಮಹಿಳೆಯರನ್ನೂ ಸಂಘಟನೆಯ ನೆರಳಿಗೆ ತಂದು ಕುಲವೃತ್ತಿಯನ್ನು ಅವರೇ ಮುಂದುವರಿಸಲು ಪ್ರೋತ್ಸಾಹಿಸಿದ ಫಲವಾಗಿ ಕುಂಬಾರ ಮಹಿಳೆಯರೇ ಸ್ವತಃ ಮಡಕೆ ತಯಾರಿಸಿ ಪುರುಷರನ್ನು ನಿಬ್ಬೆರಗಾಗಿಸುತ್ತಿದ್ದಾರೆ.
ಇಂಥ ಸಾಧಕರಲ್ಲಿ ಸಂಜೀವಿನಿಯೂ ಒಬ್ಬರು. ಐದನೇ ತರಗತಿಗೆ ಓದು ಮುಗಿಸಿ ಹದಿನಾಲ್ಕನೇ ವಯಸ್ಸಿನಲ್ಲಿ ಶ್ರೀಧರ ಕುಲಾಲರ ಕೈಹಿಡಿದು ಇಲ್ಲಿಗೆ ಬಂದ ಇವರು, ಸಂಘದ ಸದಸ್ಯೆಯಾದ ಬಳಿಕ ಮಡಕೆ ತಯಾರಿಕೆಯ ಪಾಠ ಕಲಿತರು. ಮಣ್ಣು ಖರೀದಿಗೆ ವಿಮುಕ್ತಿ ಯೋಜನೆಯ ಸಾಲದ ನೆರವು ದೊರಕಿತು. ಈಗ ಪತಿಯ ಹಾಗೆಯೇ ಅವರೂ ತಿಗರಿಗೆ ಹದ ಮಾಡಿದ ಮಣ್ಣು ನೀಡಿ ಸುಂದರವಾದ ಮಡಕೆಗಳನ್ನು ತಯಾರಿಸಬಲ್ಲರು.ನೆಸಳೆ, ಬಿಸಳೆ, ರೊಟ್ಟಿ ಓಡು, ಹಾಲು ಕಾಯಿಸುವ ಪಾತ್ರೆ ಸೇರಿದಂತೆ ಏಳು ಬಗೆಯ ಮಡಕೆಗಳು ಅವರ ಕೈಯಿಂದ ತಯಾರಾಗುತ್ತವೆ. ಸಿದ್ಧವಾದ ಮಡಕೆಗಳನ್ನು ಬಿಸಿಲಿಗೆ ಒಣಗಿಸಿ ಮೇಲ್ಮೈ ಪಾಲಿಷ್ ಮಾಡಬೇಕು. ಅದಕ್ಕೆಂದು ಸಿದ್ಧವಾದ ಗುಂಡಿಯಲ್ಲಿ ಕಟ್ಟಿಗೆ ರಾಶಿ ಜೋಡಿಸಿ ಅದರ ಮೇಲೆ ಮಡಕೆಗಳನ್ನಿರಿಸಿ ಉರಿ ಹಚ್ಚಿ ಹತ್ತು ತಾಸು ಬೇಯಿಸಬೇಕು, ಹಾಗಾದರಷ್ಟೇ ಮಾರಾಟಕ್ಕೆ ಸಿದ್ಧ.
ಹಾಗೆಂದು ಇದು ಹೇಳುವಷ್ಟು ಸಲೀಸಲ್ಲ ಎನ್ನುತ್ತಾರೆ ಸಂಜೀವಿನಿ. ಇಪ್ಪತ್ತು ಮೈಲು ದೂರದ ದಿಡುಪೆಯಿಂದ ಆವೆಮಣ್ಣು ತರಬೇಕು. ಒಂದು ಟೆಂಪೋ ಭರ್ತಿ ಮಣ್ಣು ತರಲು ಹತ್ತು ಸಾವಿರ ಖರ್ಚು. ಮಣ್ಣಿನ ಮಾಲೀಕರು ಮೂರು ಸಾವಿರ ತೆಗೆದುಕೊಳ್ಳುತ್ತಾರೆ. ಗಟ್ಟಿಯಾಗಿರುವ ಈ ಮಣ್ಣನ್ನು ಗುದ್ದಿ ಹುಡಿ ಮಾಡಿ ಜರಡಿಯಾಡಿಸಬೇಕು. ನೀರು ಹಾಕಿ ಕಾಲಿನಿಂದ ತುಳಿದು ಹದಮಾಡಿ ಎರಡು ದಿನ ಹುಳಿ ಬರಿಸಬೇಕು. ಅನಂತರ ಅದರಿಂದ ಮಡಕೆ ತಯಾರಿಸುವಾಗ ಬೇಯಿಸುವಾಗ ಕೆಲವು ಒಡೆಯುವುದೂ ಉಂಟು. ತೂತಾಗುವುದೂ ಇದೆಯಂತೆ. ಇಷ್ಟು ಮಣ್ಣಿನಿಂದ ಎರಡು ತಿಂಗಳ ಪರಿಶ್ರಮದಿಂದ ಸಿದ್ಧವಾಗುವುದು ಐನೂರು ಮಡಕೆಗಳು. ಇದನ್ನು ಮಾರಲು ಊರಿಂದೂರು ಹೋಗುವಾಗ ಶ್ರೀಧರ ಕುಲಾಲರು ಒಂದೂವರೆ ತಿಂಗಳು ಮನೆಗೆ ಬರುವುದಿಲ್ಲ. ಇಷ್ಟು ಪರಿಶ್ರಮಪಟ್ಟಾಗ ಐವತ್ತು ಸಾವಿರ ರು.ಗಳ ಲಾಭದ ವ್ಯಾಪಾರವಾಗುತ್ತದೆ. ಹಳ್ಳಿಯವರಿಗೆ ಇನ್ನೂ ಮಡಕೆಗಳ ಮೇಲೆ ಪ್ರೀತಿಯಿದೆ ಎನ್ನುವಾಗ ಸಂಜೀವಿನಿ ಮುಖದಲ್ಲಿ ಸಂತೃಪ್ತಿ ಮೂಡುತ್ತದೆ. ಸ್ವಸಹಾಯ ಸಂಘದ ನೆರವಿನಿಂದ ಹೊಸಮನೆ ಕಟ್ಟಿಸಿದ್ದಾರೆ. ಮಳೆಗಾಲದಲ್ಲಿ ದುಡಿಮೆಯಿಲ್ಲ. ಬೇಸಿಗೆ ಕೆಲಸದಲ್ಲಿ ಉಳಿತಾಯ ಮಾಡಿದ ಹಣವೇ ಜೀವನಾಧಾರ. ಶ್ರದ್ಧೆಯಿಂದ ವೃತ್ತಿ ಮಾಡಿದರೆ ನಿರಾಶರಾಗಬೇಕಿಲ್ಲ. ಮಣ್ಣಿನ ಮಡಕೆಗಳನ್ನು ಕೊಳ್ಳುವ ಜನ ಸಾಕಷ್ಟಿದ್ದಾರೆ ಎನ್ನುತ್ತಾರೆ ಸಂಜೀವಿನಿ. ದೊಡ್ಡ ಹಂಡೆಗಳನ್ನು ಮಾಡಿದರೆ ಕೆಲಸ ಹೆಚ್ಚು. ಗಿರಾಕಿ ಕಡಿಮೆ. ಅದರ ಬದಲು ಸಣ್ಣ ಪಾತ್ರೆಗಳನ್ನು ತಯಾರಿಸುವುದು ಲಾಭದಾಯಕವಂತೆ. ರೊಟ್ಟಿ ಓಡಿಗೆ ಬೆಂಗಳೂರು ಮುಂಬೈಯಂಥ ದೂರದ ಊರುಗಳಿಂದಲೂ ಬೇಡಿಕೆಯಿದೆ. ಸಣ್ಣ ಪಾತ್ರೆಗಳಿಗೂ ಚೌಕಾಸಿಯಿಲ್ಲದೆ ಕೊಳ್ಳುವವರಿದ್ದಾರೆ. ಅವರ ಇಬ್ಬರು ಗಂಡುಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ದಾನಿಗಳನ್ನೂ ದಯಾಳ್ಬಾಗ್ ಒದಗಿಸಿದೆ. ಸ್ವಂತ ವೃತ್ತಿಯ ಅಭೃವೃಗೆ ಸಂಸ್ಥೆಯ ಪ್ರೋತ್ಸಾಹ ಈ ಪ್ರದೇಶದಲ್ಲಿ ಹೊಸಬೆಳಕು ಮೂಡಿಸಿದೆ. ಸಂಜೀವಿನಿ ಅವರಿಗೆ ಶುಭಕೋರುವುದಾದರೆ ಸಂಪರ್ಕಿಸಿ, ಮೊಬೈಲ್ ಸಂಖ್ಯೆ : 9535670791.


