ಅಂಗವೈಕಲ್ಯ ಶಾಪವೆಂದು ಭಾವಿಸದೆ ಸವಾಲಾಗಿ ಸ್ವೀಕರಿಸಿ ಶ್ರಮಪಟ್ಟರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಹಲವು ಸಾಧಕರು ಕಣ್ಮುಂದೆ ಇದ್ದಾರೆ. ಮಂಗಳೂರಿನ ಎಕ್ಕೂರಿನವರಾದ ಹರಿಣಾಕ್ಷಿ ಕುಲಾಲ್ ಅಂಧರು. ಸಂಗೀತ, ಕರಕುಶಲ ಕಲೆ, ಭರತನಾಟ್ಯದಲ್ಲಿ ಅಪ್ರತಿಮ ಸಾಧನೆ ಮಾಡಿ ಕೈ ಕಾಲು ಗಟ್ಟಿಯಾಗಿರುವವರು ಹುಬ್ಬೇರಿಸುವಂತೆ ಸಾಧನೆ ಮಾಡಿದ್ದಾರೆ . ಈ ಮೂಲಕ ಕಣ್ಣಿಲ್ಲದವರೂ ಜೀವನದಲ್ಲಿ ಏನನ್ನಾದರು ಸಾಧಿಸಬಲ್ಲರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಸಾಧನೆಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ, ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ , ಪುಟ್ಟರಾಜ್ ಸದ್ಭಾವನಾ ಪ್ರಶಸ್ತಿ ಸಂದಿದೆ.
ನಿತ್ಯ ಬದುಕಿನಲ್ಲಿ ನಮ್ಮೆದುರು ಬೇರೆ ಬೇರೆ ಜನರು ನಮ್ಮ ಕಣ್ಣ ಮುಂದೆ ಸಿಗುತ್ತಾರೆ .ಹಾಗೆಯೇ ನನ್ನ ಈ ಮಾಧ್ಯಮ ಕ್ಷೇತ್ರದ ಜೀವನದಲ್ಲಿ ಅನೇಕ ಕಣ್ಣು ಕಾಣದ ಕಲಾವಿದರನ್ನು ಸಂದರ್ಶನ ಮಾಡಿದ್ದೆ . ಇತ್ತೀಚಿಗೆ ನನಗೆ ಸಿಕ್ಕಿರುವ ಕಲಾವಿದೆ ಎಕ್ಕೂರಿನವರಾದ ಹರಿಣಾಕ್ಷಿ ಕುಲಾಲ್ .
ಏಳನೇ ತರಗತಿವರೆಗೆ ಹೋಗುವಾಗ ಕಣ್ಣು ಸರಿಯಾಗಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ಕಣ್ಣು ತುರಿಕೆ ಬರಲು ಆರಂಭವಾಯಿತು. ಕ್ರಮೇಣ ಎರಡೂ ಕಣ್ಣುಗಳು ಮುಚ್ಚಿ ಹೋದವು. ನಂತರ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ಚಾರ್ಲ್ಸ್ ಫುರ್ಟಾದೋ ಅವರ ಒತ್ತಾಯದ ಮೇರೆಗೆ ಬೆಂಗಳೂರಿನ ಮಿತ್ರ ಜ್ಯೋತಿ ಅಂಧರ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದರು . ಡಾಲ್ ಮೇಕಿಂಗ್ ಜತೆಗೆ ಸಲೀಸಾಗಿ ಬೀಡಿ ಕಟ್ಟುತ್ತಾರೆ. ಸುಮಾರು ಆರು ತಿಂಗಳವರೆಗೆ ಭರತನಾಟ್ಯವನ್ನು ಅಭ್ಯಾಸ ಮಾಡಿರುವ ಇವರ ಕನಸು ಭರತನಾಟ್ಯ ಶಿಕ್ಷಕಿಗೆ ವಿವಾಹವಾಗಿ ಹೋದ ಕಾರಣದಿಂದ ಭಗ್ನಗೊಂಡಿತು. ಆ ಬಳಿಕ ಕೆ ವಿ ರಮಣ್ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಸಂಗೀತವನ್ನೇ ಹವ್ಯಾಸವಾಗಿಸಿಕೊಂಡು ನಿತ್ಯವೂ ಸಂತೋಷದ ಕ್ಷಣಗಳನ್ನು ಅನುಭವಿಸುವ ಇವರೀಗೀಗ ತನಗೆರಡು ಕಣ್ಣುಗಳಿಲ್ಲ ಎನ್ನುವ ಚಿಂತೆ ಇಲ್ಲ. ತನ್ನ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸಿಸುವ ಇವರು ನಿತ್ಯ ಪದಾರ್ಥಕ್ಕೆ ಬೇಕಾಗುವ ತರಕಾರಿಗಳನ್ನು ಕೈಯ್ಯಾರೆ ರೆಡಿ ಮಾಡುತ್ತಾರೆ.
ಬೆಳಿಗ್ಗೆ ಚಹಾ, ತಿಂಡಿ ಎಲ್ಲವನ್ನೂ ಭಯವಿಲ್ಲದೇ ತಯಾರಿಸುತ್ತಾರೆ. ಗ್ಯಾಸ್ ಉರಿಸುವುದು ಇತರರಿಗೆ ಕಷ್ಟದ ಮಾತಾದರೂ ಇವರಿಗೆ ಇದು ಸುಲಭ. ಬಿಸಿ ಬಿಸಿ ಚಹಾವನ್ನು ಮೇಲಕ್ಕೆ ಚಿಮ್ಮಿಸಿ ಇನ್ನೊಂದು ಗ್ಲಾಸಿಗೆ ಹಾಕಿ ಕೊಡುತ್ತಾರೆ. ಇತರ ಬಿಡುವಿನ ಸಮಯದಲ್ಲಿ ರೇಡಿಯೋ ಕೇಳುತ್ತಾ ತಮ್ಮ ಕೆಲಸ ಮಾಡುತ್ತಾ ಇರುತ್ತಾರೆ. ಮಂಗಳೂರಿನ ಮಂಗಳ ಜ್ಯೋತಿ ಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವ ಹರಿಣಾಕ್ಷಿ ಕುಲಾಲ್ ಯಾರದ್ದಾದರೂ ಸಹಾಯದಿಂದ ಬಸ್ ಹಿಡಿಯುತ್ತಾರೆ. ಮನೆಯಿಂದ ಹೊರಡುವಾಗ ಪ್ರತಿದಿನ ನೆರೆಮನೆಯ ಹುಡುಗಿಯೋರ್ವಳು ಬಸ್ ಸ್ಟಾಂಡ್ ವರೆಗೆ ಕರೆದುಕೊಂಡು ಹೋಗುತ್ತಾಳೆ . ಹರಿಣಾಕ್ಷಿ ಅವರ ಸಾಧನೆಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ, ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ , ಪುಟ್ಟರಾಜ್ ಸದ್ಭಾವನಾ ಪ್ರಶಸ್ತಿ ಸಂದಿದೆ.
(ಬಡ ಅಂಧ ಕಲಾವಿದೆಗೆ ಆರ್ಥಿಕ ಸಹಾಯ/ ಕೊಡುಗೆ ಅಥವಾ ಆತ್ಮಸ್ಥೈರ್ಯ ತುಂಬ ಬಯಸುವ ಸಹೃದಯ ಬಂಧುಗಳು ಹರಿಣಾಕ್ಷಿ ಕುಲಾಲ್ ಅವರ ಮೊಬೈಲ್ ಸಂಖ್ಯೆ 9902208389ನ್ನು ಸಂಪರ್ಕಿಸಬಹುದು)
* ವಿ ಕೆ ಕಡಬ




