ಮಂಗಳೂರು: ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಸಮಾರಂಭ ಹಾಗೂ ಉದಯೋನ್ಮುಖ ಯುವ ಕಥೆಗಾರರ ಕಥಾಕಮ್ಮಟವನ್ನು ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬರುವ ಶನಿವಾರ, ಫೆಬ್ರುವರಿ 27ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.
ಆಕಾಶವಾಣಿ ಮಂಗಳೂರು ಕೇಂದ್ರವು ಪುಟ್ಟಣ್ಣ ಕುಲಾಲ ಪ್ರತಿಷ್ಥಾನ(ರಿ), ಕನ್ನಡ ಸಂಘ, ವಿ.ವಿ. ಕಾಲೇಜು ಹಾಗೂ ಕನ್ನಡ ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಸಮಾರಂಭವನ್ನು ಉದ್ಘಾಟಿಸುವವರು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕರು ಹಾಗೂ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ ಪೆರ್ಲ. ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಡೀನ್ ಮತ್ತು ಕನ್ನಡಕಟ್ಟೆಯ ಗೌರವಾಧ್ಯಕ್ಷರಾದ ಪ್ರೊ. ಎ.ವಿ. ನಾವಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಿಂದ ಅಂತಿಮವಾಗಿ ಆಯ್ಕೆಯಾದ ಹತ್ತು ಯುವ ಕಥೆಗಾರರು ತಾವು ಬರೆದ ಅತ್ಯುತ್ತಮ ಕಥೆಯನ್ನು ವಾಚನ ಮಾಡುವರು. ರಂಗಕರ್ಮಿ ಹಾಗೂ ಸಣ್ಣ ಕಥೆಗಾರರಾದ ಉದ್ಯಾವರ ಮಾಧವಾಚಾರ್ಯ ಅವರು ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಅತ್ಯುತ್ತಮ ಕಥೆ ಬರೆದು ವಾಚಿಸುವವರಿಗೆ ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಪ್ರದಾನ ಮಾಡಲಾಗುವದು. ಹದಿನೇಳು ಯುವ ಕಥೆಗಾರರಿಗೆ ಪುಟ್ಟಣ್ಣ ಕುಲಾಲ್ ಪುರಸ್ಕಾರ ವಿತರಿಸಲಾಗುವುದು. ನಂತರ ವಿ.ವಿ. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಯುವಬರಹಗಾರರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಕಾಶವಾಣಿ ಮಂಗಳೂರು ಕೇಂದ್ರವು ನಿರಂತರವಾಗಿ ಯುವವಾಣಿ ಕಾರ್ಯಕ್ರಮವನ್ನು ಬಿತ್ತರಿಸುತ್ತಿರುತ್ತದೆ. ದಿವಂಗತ ಪುಟ್ಟಣ್ಣ ಕುಲಾಲರವರ ಸವಿನೆನಪಿನಲ್ಲಿ ಸಮಾಜಮುಖೀ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನವು ಕಳೆದ 16 ವರುಷಗಳಿಂದ ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರು ಹಾಗೂ ಕನ್ನಡಕಟ್ಟೆಯ ಅಧ್ಯಕ್ಷರಾದ ಡಾ ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.
ಫೆಬ್ರವರಿ 27ರಂದು ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಪ್ರದಾನ ಸಮಾರಂಭ
Kulal news
1 Min Read