ಸರ್ವಜ್ಞನ ಕುರಿತು ಶೋಧನೆ ಆಗಬೇಕಾಗಿದೆ : ಶಾಸಕ ಬಿ.ಆರ್.ಯಾವಗಲ್
ಗದಗ: ‘ಕವಿ ಸರ್ವಜ್ಞ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಸೇರಿದಂತೆ ಹಲವು ಅಂಕು ಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ’ ಎಂದು ಶಾಸಕ ಬಿ.ಆರ್.ಯಾವಗಲ್ ನುಡಿದರು.
ಇಲ್ಲಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ವೇದ, ಉಪನಿಷತ್ಗಳನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ತ್ರಿಪದಿ ವಚನಗಳ ಮೂಲಕ ತಿಳಿಸಿದ್ದಾರೆ. ಸರ್ವಜ್ಞರ ಬಗ್ಗೆ ಶೋಧನೆ ಆಗಬೇಕು. ಕುಂಬಾರ ಸಮಾಜ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯದವರ ಉದ್ಯೋಗ ನಶಿಸಿ ಹೋಗುತ್ತಿದ್ದು, ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ. ಸರ್ವಜ್ಞ ಹೇಳದ ವಿಷಯವಿಲ್ಲ. ಸರ್ವಜ್ಞ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಮಾಸೂರು ಗ್ರಾಮದವರು. ಸಮಾಜದಲ್ಲಿ ಜಾತಿ ಪದ್ಧತಿ, ವೈದ್ಯ ಪದ್ಧತಿ, ಆಹಾರ ಪದ್ಧತಿ ಸೇರಿದಂತೆ ಹಲವು ವಿಚಾರ ಕುರಿತು ವಚನಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸರ್ವಜ್ಞರ ವೈಚಾರಿಕ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕ ಎಂ.ಪಿ.ಕುಂಬಾರ ಅವರು, ಭಾರತ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ದೇಶ. ಕವಿ ಸರ್ವಜ್ಞ ಸಾಮಾನ್ಯ ಜನರ ಒಡನಾಡಿಯಾಗಿ ಕಷ್ಟ, ಕೋಪ, ತಾಪ, ಸಮಾಜದ ಲೋಪ, ದೋಷಗಳನ್ನು ಮಾತಿನಲ್ಲಿ ಹೇಳುತ್ತಿದ್ದರು. ಸರ್ವಜ್ಞರು ಜ್ಞಾನದ ಜ್ಯೋತಿ ಮನೆ ಮನೆಯಲ್ಲಿ ಹಚ್ಚುವ ಕಾರ್ಯ ಮಾಡಿದ್ದಾರೆ. ಲೋಕ ಕಲ್ಯಾಣವೇ ಅವರ ಮೂಲ ಗುರಿಯಾಗಿತ್ತು.
ಅವರ ನಿಜವಾದ ಹೆಸರು ಪುಷ್ಪದತ್ತ, ತಾಯಿ ಕುಂಬಾರ ಮಾಳವ್ವ, ತಂದೆ ಮಾಳಪ್ಪ. ದಾನ, ಶಿಕ್ಷಣ, ಕೃಷಿ, ಸ್ತ್ರೀಯರ ಮಹತ್ವವನ್ನು ತ್ರಿಪದಿಗಳ ಮೂಲಕ ತಿಳಿಸಿದ್ದಾರೆ. ಸರ್ವಜ್ಞ ಕನ್ನಡ ಪದ ಪುಂಜದ ಪಿತಾಮಹರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಕುಂಬಾರ ಸಮಾಜದಿಂದ ಕುಂಭಮೇಳ ಮೆರವಣಿಗೆ ನಡೆಯಿತು. ತಿಗರಿ ಮೂಲಕ ಮಡಿಕೆ ಮಾಡುವುದನ್ನು ಬಸವಣ್ಣೆಪ್ಪ ಕುಂಬಾರ ತೋರಿಸಿಕೊಟ್ಟರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ರುದ್ರಪ್ಪ, ರಾಚಪ್ಪ ಕುಂಬಾರ, ಕಲ್ಲಪ್ಪ ಕುಂಬಾರ, ಈರಪ್ಪ ಕುಂಬಾರ, ಮಹಾದೇವಪ್ಪ ಕುಂಬಾರ ಹಾಜರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಸ್ವಾಗತಿಸಿದರು, ಕುಂಬಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಂಗಪ್ಪ ಶಿವಲಿಂಗಪ್ಪ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗರತ್ನ ಕುಂಬಾರ ಪ್ರಾರ್ಥಿಸಿದರು, ಸುರೇಶ ಕುಂಬಾರ ನಿರೂಪಿಸಿದರು, ವಿಠ್ಠಲಪ್ಪ ಕುಂಬಾರ ವಂದಿಸಿದರು.
ತ್ರಿಪದಿಗಳಿಂದ ಸರ್ವಜ್ಞ ಚಿರಪರಿಚಿತ : ರೇಷ್ಮಾ ಹಾನಗಲ್
ಹೊನ್ನಾಳಿ: ‘16ನೇ ಶತಮಾನದಲ್ಲಿ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸರ್ವಜ್ಞ, ಜನಮಾನಸದಲ್ಲಿ ಉಳಿದುಕೊಂಡ ಮಾನವತಾವಾದಿ’ ಎಂದು ತಹಶೀಲ್ದಾರ್ ರೇಷ್ಮಾ ಹಾನಗಲ್ ಅಭಿಪ್ರಾಯಪಟ್ಟರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಶನಿವಾರ ಏರ್ಪಡಿಸಿದ್ದ ಸರ್ವಜ್ಞನ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಢ್ಯಗಳ ವಿರುದ್ಧ ತ್ರಿಪದಿಗಳ ಮೂಲಕ ಜಾಗೃತಿಗೊಳಿಸಿದರು’ ಎಂದರು.
‘ದೇಶದಲ್ಲಿ ಸಾಧು ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಹಾಗೂ ತತ್ವಜ್ಞಾನಿಗಳು ಹುಟ್ಟಿರುವು ದರಿಂದಲೇ ಭಾರತ ಇಂದು ವಿಶ್ವಕ್ಕೆ ಮಾದರಿಯಾಗಿದೆ’ ಎಂದರು.
ತಾಲ್ಲೂಕು ಕುಂಬಾರ ಸಮಾಜದ ಕಾರ್ಯದರ್ಶಿ ಚನ್ನೇಶ ಜಕ್ಕಲಿ ಅವರು ಮಾತನಾಡಿ, ಶ್ರೇಷ್ಠ ವಚನಕಾರರಲ್ಲಿ ಸರ್ವಜ್ಞನು ಒಬ್ಬರು ಎಂದರು.
ಕುಂಬಾರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ಕೊಡುವಲ್ಲಿ ತಾಲ್ಲೂಕೂ ಆಡಳಿತ ಗೊಂದಲವನ್ನು ಹೊಂದಿದೆ. ಅದನ್ನು ಕೂಡಲೇ ಬಗೆಹರಿಸಬೇಕು ಎಂದು ಮನವಿ ಮಾಡಿದರು.
‘ಸಮುದಾಯದ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸವ ಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಅದನ್ನು ಪಡೆದುಕೊಳ್ಳುವಲ್ಲಿ ಸಮಾಜದ ಬಂಧು ಗಳು ಎಚ್ಚೆತ್ತುಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಎಪಿಎಂಸಿ ಜಂಟಿ ನಿರ್ದೇಶಕ ಬಿ. ಆನಂದ್, ತಾಲ್ಲೂಕು ಕುಂಬಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮುಖಂಡರಾದ ಕಾಂತರಾಜ, ಸುರೇಶ್, ಷಣ್ಮುಖಪ್ಪ, ಮಹಾದೇವ, ಚಂದ್ರಪ್ಪ, ಮಹೇಶ್, ಪಟ್ಟಣ ಪಂಚಾಯ್ತಿ ಸದಸ್ಯ ಬಸವರಾಜ್ ಇತರರು ಉಪಸ್ಥಿತರಿದ್ದರು.
ಸಮಾನತೆ ಸಮಾಜದ ಕನಸು ಕಂಡ ಸರ್ವಜ್ಞ :ಡಾ. ಎಂ.ವಿ.ವೆಂಕಟೇಶ್
ಚಿಕ್ಕಬಳ್ಳಾಪುರ: ಮಹಾಕವಿ ಸರ್ವಜ್ಞ ಅವರು ಶತಮಾನಗಳ ಹಿಂದೆ ಸಾರಿದ ಸಂದೇಶ ಮತ್ತು ಬೋಧನೆ ಈಗಲೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ಮಹಾಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ವಿಷಯದ ಬಗ್ಗೆ ಬೆಳಕು ಸರ್ವಜ್ಞ ಸಮಾಜ ಸುಧಾರಣಾ ಕಾರ್ಯದಲ್ಲೂ ತೊಡಗಿಕೊಂಡರು. ಸಂದೇಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು.
ಸಮಾಜದಲ್ಲಿನ ಅಸಮಾನತೆ, ತಾರತಮ್ಯ, ಮೂಢನಂಬಿಕೆ ತೊಡೆದು ಹಾಕಲು ವಿಶೇಷ ಆದ್ಯತೆ ನೀಡಿದ ಸರ್ವಜ್ಞ ಸಮಾನತೆ ಸಮಾಜ ಕಟ್ಟುವ ಕನಸು ಕಂಡಿದ್ದರು. ಆದರೆ ಈಗಲೂ ಸಹ ಜಾತಿಯತೆ ಎಂಬುದು ಸಮಾಜದಿಂದ ನಿರ್ಮೂಲನೆಗೊಂಡಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಮಾತನಾಡಿ, ಸಮಾಜದಲ್ಲಿ ಜಾತಿಯತೆ ಆಳವಾಗಿ ಬೇರೂರಿದ್ದರೂ ಜಾತ್ಯತೀತ ತತ್ವ ಮತ್ತು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟ ಅವರು ಜನರನ್ನು ಅದೇ ಮನೋಭಾವದಿಂದ ಬದುಕಲು ತಿಳಿ ಹೇಳಿದರು.
ವಚನಗಳಲ್ಲಿ ಪ್ರತಿಯೊಂದು ವಿಷಯವನ್ನು ಪ್ರಸ್ತಾಪಿಸಿರುವ ಸರ್ವಜ್ಞ ಅಕ್ಷರಶಃ ಸರ್ವವಿಷಯಗಳಲ್ಲಿ ಜ್ಞಾನವಂತರಾಗಿದ್ದರು ಎಂದರು.
ಸರ್ವಜ್ಞನ ವಚನಗಳನ್ನು ಈಗಲೂ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಲ್ಲಿ, ಹಲವು ವಿಷಯಗಳು ಮನಸ್ಸಿಗೆ ತಟ್ಟುತ್ತವೆ. ಬದುಕು ಹೇಗೆ ಕಂಡುಕೊಳ್ಳಬೇಕು ಎಂಬುದರಿಂದ ಆರಂಭಗೊಂಡು ಸಮಾಜ ಹೇಗೆ ರೂಪುಗೊಳ್ಳಬೇಕು ಎಂಬುವವರೆಗ ಅವರ ವಚನಗಳ ಮೂಲಕ ಅರಿಯಬಹುದು. ಈ ನಿಟ್ಟಿನಲ್ಲಿ ಯುವಜನರು ಹೆಚ್ಚಿನ ಆಸಕ್ತಿ ತೋರಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಮಹಾಲಿಂಗಯ್ಯ ಮಠದ ಮತ್ತು ತಂಡದವರು ಗೀತೆಗಳನ್ನು ಹಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಸುರೇಖಾ ವಿಜಯಪ್ರಕಾಶ್, ಡಾ. ಎಚ್.ವಿ. ರಂಗಸ್ವಾಮಿ, ಡಿ.ಟಿ.ಸ್ವಾಮಿ, ತಹಶೀಲ್ದಾರ್ ಎನ್.ಸಿ.ಜಗದೀಶ್, ಕುಂಬಾರ ಸಮುದಾಯದ ಪ್ರೇಮಲೀಲಾ ವೆಂಕಟೇಶ್ ಉಪಸ್ಥಿತರಿದ್ದರು.
ಸರ್ವಜ್ಞ ಅಪರೂಪದ ಸಮಾಜ ಸುಧಾರಕ : ಜಿಲ್ಲಾಧಿಕಾರಿ ನಾಗರಾಜ್
ಶಿವಮೊಗ್ಗ: ಜನರ ಆಡುಭಾಷೆಯಲ್ಲಿ ಸರಳವಾಗಿ, ಸುಲಭವಾಗಿ ಅರ್ಥ ವಾಗುವಂತೆ ಸಮಾಜದ ಅಂಕು–ಡೊಂಕು ಗುರುತಿಸಿ, ತ್ರಿಪದಿಗಳನ್ನು ರಚಿಸಿ ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಅಪರೂಪದ ಸಮಾಜ ಸುಧಾರಕ ಸರ್ವಜ್ಞ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಸಾರಸ್ವತ ಲೋಕದ ಮೇರುಕವಿ ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎನಿಸಿವೆ. ಇವು ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿ ಹೆಚ್ಚಿಸಿವೆ’ ಎಂದು ಅಭಿಪ್ರಾಯಪಟ್ಟರು.
‘ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಆದರ್ಶ ಪುರುಷರ ಕಾರ್ಯ ಕ್ರಮಗಳು ಕೇವಲ ಕೆಲವೇ ಜನರಿಗೆ ಗುರುತಿಸಿದ ಯಾವುದೋ ಒಂದು ಧರ್ಮ, ಜಾತಿಗೆ ಸೀಮಿತವಾಗಿರುವುದು ವಿಷಾದದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ವಜ್ಞನ ವಚನಗಳು ಲೌಕಿಕ -ಅಲೌಕಿಕದ ಮಿಶ್ರಣದೊಂದಿಗೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡು ಸಾಹಿತ್ಯ ರಚನೆಯಾಗಿವೆ. ಅದರಲ್ಲಿ ಸೂಕ್ಷ್ಮ, ಸಾಮಾನ್ಯ, ಗಂಭೀರ ಹಾಗೂ ವಾಸ್ತವ ಬದುಕಿನ ನೈಜ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ರಚಿಸಲಾಗಿರುವ ತ್ರಿಪದಿ ಗಳಲ್ಲಿನ ಸಾಹಿತ್ಯದ ವಿಷಯವನ್ನು ಅನೇಕಾರ್ಥದಲ್ಲಿ, ಗೂಡಾರ್ಥದಲ್ಲಿ ಅರ್ಥೈಸಿಕೊಳ್ಳಬಹುದು’ ಎಂದರು.
ಸರ್ವಜ್ಞ ಕವಿಯ ವಿಚಾರಧಾರೆಗಳು ಯುವಕರನ್ನು ತಲುಪಬೇಕಾಗಿದೆ. ಹಾಗಾಗಿ, ಶಾಲಾ–ಕಾಲೇಜುಗಳಲ್ಲಿ ಸರ್ವಜ್ಞ ಜಯಂತಿ ಆಚರಿಸಿದಲ್ಲಿ ಕಾರ್ಯಕ್ರಮ ಮತ್ತಷ್ಟು ಅರ್ಥ ಬರುತ್ತದೆ ಎಂದರು.
ಸರ್ವಜ್ಞನ ತ್ರಿಪದಿಗಳಲ್ಲಿ ಲೌಕಿಕ ಮತ್ತು ಅಲೌಕಿಕ ಬದುಕಿನ ಮರ್ಮಗಳಿವೆ. ಉಪ ದೇಶವಿದೆ, ಖಂಡನೆಯಿದೆ, ಸಾಮಾಜಿಕ ಸಮಸ್ಯೆಗಳಿವೆ, ಅದಕ್ಕೆ ಪರಿಹಾರಗಳೂ ಇವೆ. ಬದುಕಿನ ಎಲ್ಲ ಮುಖಗಳ ಪರಿಚಯವನ್ನು ಆತನ ಕಾವ್ಯದಲ್ಲಿ ಕಾಣಬಹುದು. ಬಹುಮುಖ್ಯವಾಗಿ ಭವಿಷ್ಯದ ದಿನಗಳಲ್ಲಿ ದೇಶವನ್ನು ಮುನ್ನಡೆಸಬೇಕಾದ ಮಕ್ಕಳಿಗೆ ಇಂತಹ ಆದರ್ಶ ವ್ಯಕ್ತಿಗಳನ್ನು ಅನುಸರಿಸಲು ಉಪನ್ಯಾಸ ಕಾರ್ಯಕ್ರಮಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಸಿ. ಶಶಿಧರ್, ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ, ನಿವೃತ್ತ ಉಪನ್ಯಾಸಕ ಕೆ.ಸಿದ್ದಪ್ಪ ಮತ್ತು ಹಿಂದಿ ಶಿಕ್ಷಕ ಎಸ್.ನಾರಾಯಣ ಅವರು ‘ಸರ್ವಜ್ಞನ ಬದುಕು ಮತ್ತು ಜೀವನಾದರ್ಶಗಳು ಹಾಗೂ ಕಾಲಮಾನ’ದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಶಂಕರನಾರಾಯಣ ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಲೇಶಪ್ಪ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಂತಾ ಆನಂದ ಪ್ರಾರ್ಥಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ.ನಾಯಕ್ ಸ್ವಾಗತಿಸಿದರು.
ಖಾಲಿ ಕುರ್ಚಿಗಳು: ರಂಗಮಂದಿರದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು. ರಂಗಮಂದಿರದ ತುಂಬ ಸಭಿಕರಿಲ್ಲದ ಕಾರಣ ಹೆಚ್ಚಾಗಿ ಖಾಲಿ ಕುರ್ಚಿಗಳೇ ಕಂಡುಬಂದಿತು.